ಮೈಸೂರು: ವಿದ್ಯಾರ್ಥಿಗಳು ವಿಚಾರಗಳನ್ನು ಪರಿಶೀಲಿಸಿ, ಸಮಾಜದ ವಸ್ತು ಸ್ಥಿತಿ ಅರ್ಥಮಾಡಿಕೊಳ್ಳಬೇಕು. ಜ್ಯೋತಿ ಬೆಳಕಿನ ಸಂಕೇತ, ಬೆಳಕು ಜ್ಞಾನದ ಸಂಕೇತ. ನೀವೆಲ್ಲರೂ ಜಗತ್ತಿನ ಬೆಳಕಾಗಬೇಕು, ಕತ್ತಲಾಗಬಾರದು ಎಂದು ಮಾನಸಗಂಗೋತ್ರಿ ಗಣಕ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಪ್ರೊ.ಸುರೇಶ್ ಸಲಹೆ ನೀಡಿದರು.
ಶ್ರೀ ನಟರಾಜ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಸಾಂಸ್ಕೃತಿಕ ಮತ್ತು ಕ್ರೀಡಾ ವೇದಿಕೆ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ದೈನಂದಿನ ಕಾರ್ಯಚಟುವಟಿಕೆಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಾಷ್ಟ್ರೀಯ ಸೇವಾ ಯೋಜನೆಯಿಂದ ಎಷ್ಟೋ ಗ್ರಾಮಗಳು ನಾಗರಿಕತೆಯೆಡೆ ಮುಖ ಮಾಡಿವೆ. ಇನ್ನೊಬ್ಬರು ಕಲಿಸುವುದರಲ್ಲಿ ವಿಚಾರ ಮಾಡಲಾಗುವುದಿಲ್ಲ. ಬದಲಿಗೆ ನಾವೇ ಸ್ವತಃ ಕಲಿತಾಗ ವಿಚಾರ ಮಾಡುತ್ತೇವೆ. ಇಂಗ್ಲೀಷ್ ಭಾಷೆ ಕಠಿಣವಾಗಿರುತ್ತದೆ. ಆದರೆ ಅದನ್ನು ಸ್ವತಃ ಆಸಕ್ತಿಯಿಂದ ಕಲಿತಾಗ ಬೇಗ ಅರ್ಥವಾಗುತ್ತದೆ. ಕಲಿಯಲು ವಯಸ್ಸಿನ ಮಿತಿ ಇಲ್ಲ. ಕಲಿಕೆ ಎಂದೂ ಮುಗಿಯುವುದಿಲ್ಲ. ಜ್ಞಾನವನ್ನು ಎಲ್ಲಾ ಮೂಲಗಳಿಂದಲೂ ಪಡೆದುಕೊಳ್ಳಬೇಕು ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್ ಮಾತನಾಡಿ, ವಿದ್ಯಾರ್ಥಿ ದೆಸೆಯಲ್ಲಿ ಪಠ್ಯ ಚಟುವಟಿಕೆಗಳಷ್ಟೇ ಪಠ್ಯ ಪೂರಕ ಚಟುವಟಿಕೆಗಳು ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಮುಖ್ಯವಾಗಿವೆ. ಇವುಗಳಲ್ಲಿ ಭಾಗವಹಿಸಿ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಜಗತ್ತಿನ ಸಮಗ್ರ ವಿಷಯ ನೀಡುವ ದಿನಪತ್ರಿಕೆಗಳನ್ನು ಓದುವುದರ ಮೂಲಕ ನಮ್ಮ ಜ್ಞಾನ ವೃದ್ಧಿಸಿಕೊಳ್ಳಬೇಕು. ಅವಕಾಶಗಳನ್ನು ಬಳಸಿಕೊಂಡು ಮುನ್ನಗ್ಗಬೇಕು. ನಮ್ಮ ಕೈಯಲ್ಲಿರುವ ಮೊಬೈಲ್ ವರವೂ ಹೌದು, ಶಾಪವೂ ಹೌದು. ಅದನ್ನು ನಾವು ಯಾವ ರೀತಿ ಬಳಕೆ ಮಾಡುತ್ತೇವೆ ಎನ್ನುವುದರ ಮೇಲೆ ನಿಂತಿದೆ. ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಈ ಸಮಯ ತುಂಬಾ ಮುಖ್ಯವಾದುದು ಎಂದರು.
ಈ ಆಧುನಿಕ ಸಮಾಜದಲ್ಲಿ ನಮ್ಮ ಜೀವನವನ್ನು ನಾವೇ ರೂಪಿಸಿಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಂಡು ಉನ್ನತ ಹುದ್ದೆಗೆ ಏರಬೇಕಾದರೆ ಸಮಾಜದಲ್ಲಿ ನಡೆಯುವ ಎಲ್ಲಾ ವಿಷಯಗಳ ಜ್ಞಾನ ತಿಳಿದುಕೊಳ್ಳಬೇಕು. ನಮ್ಮನ್ನು ಬೆಳೆಸಿ ನಮ್ಮಲ್ಲಿರುವ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಹಕರಿಸುತ್ತಿರುವ ಶಿಕ್ಷಣ ಸಂಸ್ಥೆಗಳು ಮತ್ತು ತಂದೆ ತಾಯಿಗಳ ಶ್ರಮವನ್ನು ಸಾರ್ಥಕಪಡಿಸಬೇಕು ಎಂದು ಹೇಳಿದರು.
ಪದವಿಪೂರ್ವ ಶಿಕ್ಷಣ ಇಲಾಖೆ ರಾಷ್ಟ್ರೀಯ ಸೇವಾ ಯೋಜನಾಕೋಶ ವಿಭಾಗೀಯ ಅಧಿಕಾರಿ ಡಾ.ರವಿ.ಟಿ.ಕೆ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆ ವ್ಯಕ್ತಿಯ ವ್ಯಕ್ತಿತ್ವ ರೂಪಿಸುವಲ್ಲಿ ಮುಖ್ಯ ಪಾತ್ರ ನಿರ್ವಹಿಸುತ್ತದೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಈ ಯೋಜನೆ ನಿಮ್ಮನ್ನು ಶಿಸ್ತಿನ ಕಡೆಗೆ ಹೆಜ್ಜೆ ಇಡುವಂತೆ ಮಾಡುತ್ತದೆ. ಶ್ರಮ ನಿಮ್ಮ ಮುಂದಿನ ಬೆಳವಣಿಗೆ ಪೂರಕವಾಗಿರುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ರಾಷ್ಟ್ರೀಯ ಸೇವಾ ಯೋಜನೆಗೆ ಅನುದಾನದ ಹಣವನ್ನು ಹೆಚ್ಚಿಸಿದ್ದು, ಅದನ್ನು ಸದುಪಯೋಗ ಮಾಡಿಕೊಳ್ಳಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್.ಶಿವರಾಜಪ್ಪ, ನಟರಾಜ ಮಹಿಳಾಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ವಿ.ಡಿ.ಸುನೀತಾರಾಣಿ, ಉಪನ್ಯಾಸಕರಾಧ ಕೆ.ಎಸ್.ಪುಷ್ಪ, ರಾಧ.ಬಿ, ವಿಮಲಜ್ಯೋತಿ ಇದ್ದರು.