ಮೈಸೂರು: ವಿದ್ಯಾರ್ಥಿಗಳು ಆಫಿಸರ್ ಆಗಬೇಕು. ವೈದ್ಯರಾಗಬೇಕು, ಇಂಜಿನಿಯರ್ ಆಗಬೇಕು ಎನ್ನುವುದಕ್ಕಿಂತ ಮೊದಲು ವಿಶ್ವಮಾನವರಾಗಬೇಕು ಎಂದು ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕಿ ಎಂ.ಕೆ. ಸವಿತ ಕರೆ ನೀಡಿದರು.
ರಾಮಕೃಷ್ಣನಗರದ ವಿಶ್ವಮಾನವ ವಿದ್ಯಾನಿಕೇತನ ಶಾಲೆಯಲ್ಲಿ ಬುಧವಾರ ನಡೆದ ಶಾಲಾ ಪದವಿಪ್ರದಾನ ಸಮಾರಂಭದಲ್ಲಿ ಶಾಲಾ ಕೈಪಿಡಿಯನ್ನು ಬಿಡುಗಡೆಮಾಡಿ ಮಾತನಾಡಿದ ಅವರು, ಈ ಶಾಲೆಯ ವಾತಾವರಣ ನೋಡಿದರೆ ನನ್ನೂರಿನ ಶಾಲೆಯ ನೆನಪಾಗುತ್ತದೆ. ನಾವೆಲ್ಲಾ ಸರ್ಕಾರಿ ಶಾಲೆಯಲ್ಲಿ ಓದುವಾಗ ಈಗಿರುವ ಯಾವುದೇ ಸೌಲಭ್ಯವಿರಲಿಲ್ಲ. ಆದರೆ ನಮಗಿದ್ದ ಶಿಕ್ಷಕರು ನಮ್ಮ ಭವಿಷ್ಯದ ಬಗ್ಗೆ ತುಂಬಾ ಕಾಳಜಿ ಇದ್ದಂತಹ ಶಿಕ್ಷಕರಿದ್ದರು. ನಾನು ಸಾಕಷ್ಟು ಶಾಲೆಗಳಿಗೆ ಕಾರ್ಯಕ್ರಮಕ್ಕೆ ಹೋಗಿದ್ದೇನೆ. ಆದರೆ ಈ ಶಾಲೆಯಲ್ಲಿರುವಂತಹ ಮಕ್ಕಳಿನ ಶಿಸ್ತು, ಸಂಯಮ, ಚುರುಕುತನ, ತಾಳ್ಮೆಯನ್ನು ನಾನು ಬೇರೆಲ್ಲೂ ನೋಡಿಲ್ಲ. ಶಿಕ್ಷಣ ಎಂದರೆ ಮಕ್ಕಳು ಹೆಚ್ಚು ಅಂಕಪಡೆಯುವುದಾಗಲಿ ಇಂಗ್ಲಿಷ್ ಮಾತನಾಡುವುದಾಗಲಿ ಶಿಕ್ಷಣ ಅಲ್ಲ, ಮಾನವೀಯತೆ, ಶ್ರಮಜೀವನದ ಮೌಲ್ಯಗಳ ಜೊತೆಗೆ ಪಾಠ ಕಲಿಯುವವರು ಮೇಲೆ ಬರುತ್ತಾರೆ. ಕೆಲಸ ಸಿಗದಿದ್ದರೂ ಪರವಾಗಿಲ್ಲ ಆತ್ಮವಿಶ್ವಾಸ ಬೆಳೆಸಿಕೊಂಡರೆ ನಿಮ್ಮ ಬದುಕನ್ನು ಕಟ್ಟಿಕೊಳ್ಳುವ ಶಕ್ತಿ ಈ ಶಾಲೆಯಿಂದ ನಿಮಗೆ ಬರುತ್ತದೆ. ಪೋಷಕರು ಈ ಶಾಲೆಗೆ ಹೆಚ್ಚು ಮಕ್ಕಳನ್ನು ಸೇರಿಸಿರಿ. ಚಂದ್ರಶೇಖರೇಗೌಡರು, ಗಾಂಧಿತತ್ವ ಹಾಗೂ ಕುವೆಂಪುರವರ ಆದರ್ಶವನ್ನು ಮೈಗೂಡಿಸಿಕೊಂಡಿದ್ದಾರೆ. ತಳಸಮುದಾಯದ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ ಎಂದ ಅವರು. ಎಸ್.ಎಸ್.ಎಲ್.ಸಿ.ಯಲ್ಲಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡುವುದರೊಂದಿಗೆ ಅವರನ್ನು ಅಭಿನಂದಿಸಲು ಸಹಕಾರ ನೀಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಪ್ರೊ. ಚಂದ್ರಶೇಖರೇಗೌಡ, ಕಾರ್ಯದರ್ಶಿ ಪ್ರಭಾಮಣಿ, ಸಂಸ್ಕೃತ ವಿದ್ವಾನ್ ಶ್ರೀನಿವಾಸಮೂರ್ತಿ, ಪ್ರೊ ಕೆ.ಎ. ದಿವಾಕರ್, ಮುಖ್ಯಶಿಕ್ಷಕಿ ವಿಜಯಲಕ್ಷಿö್ಮ, ಆಡಳಿತಾಧಿಕಾರಿ ನಮ್ರತಾ, ದೈಹಿಕ ಶಿಕ್ಷಕ ಚಂದ್ರಶೇಖರ್ ಹಾಗೂ ಎಲ್ಲಾ ಶಿಕ್ಷಕರು ಹಾಜರಿದ್ದರು.