ಮದ್ದೂರು: .ವಿದ್ಯಾರ್ಥಿಗಳು ದಿನನಿತ್ಯದ ಚಟುವಟಿಕೆಗಳಲ್ಲಿ ವೈಜ್ಞಾನಿಕ ಅರಿವು ಮೂಡಿಸಿಕೊಂಡು ವೈಜ್ಞಾನಿಕವಾಗಿ ಮುಂದುವರಿಯಬೇಕೆಂದು ಎಂ. ಹೆಚ್ ಚನ್ನೇಗೌಡ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಸಿ ಅಪೂರ್ವಚಂದ್ರ ಹೇಳಿದರು.
ಪಟ್ಟಣದ ಕಸ್ತೂರಿಬಾ ಉನ್ನತ ಪ್ರಾಥಮಿಕ ಪಾಠಶಾಲೆಯಲ್ಲಿ ಅಗಸ್ತ್ಯ ಫೌಂಡೇಶನ್ ಏರ್ಪಡಿಸಿದ್ದ ವಿಜ್ಞಾನದ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ತುಂಬಾ ಕ್ರಿಯಾಶೀಲರಾಗಿರುತ್ತಾರೆ ಆದರೆ ಅವರಿಗೆ ವೈಜ್ಞಾನಿಕ ದೃಷ್ಟಿಕೋನದ ಕೊರತೆಯಿಂದ ಅಂತಹ ವಿದ್ಯಾರ್ಥಿಗಳನ್ನು ಶಿಕ್ಷಕರು ಗುರುತಿಸಿ ಸೂಕ್ತ ಮಾರ್ಗದರ್ಶನವನ್ನು ನೀಡಿದರೆ ಪ್ರತಿಭಾನ್ವಿತ ವ್ಯಕ್ತಿಗಳಾಗಿ ರೂಪಗೊಳ್ಳುತ್ತಾರೆ ಎಂದು ಅವರು ಹೇಳಿದರು.
ಪ್ರಸ್ತುತ ದಿನಗಳಲ್ಲಿ ಭಾರತೀಯ ವಿಜ್ಞಾನಿಗಳು ವಿಶ್ವವೇ ತಿರುಗು ನೋಡುವಂತಹ ಸಾಧನೆ ಮಾಡಿರುವುದು ಭಾರತೀಯರೆಲ್ಲರೂ ಹೆಮ್ಮೆಪಡುವಂತಹ ವಿಚಾರವಾಗಿದ್ದು ಅಂತಹ ವಿಜ್ಞಾನಿಗಳನ್ನು ಬೆಳೆಸುವಲ್ಲಿ ಶಿಕ್ಷಕರ ಪಾತ್ರ ಬಹು ಮುಖ್ಯವಾಗಿದ್ದು ಮತ್ತಷ್ಟು ವಿಜ್ಞಾನಿಗಳನ್ನು ಶಿಕ್ಷಕರು ತಯಾರಿಸುವಂತಾಗಬೇಕೆಂದರು.
ಈ ವೇಳೆ ಹೆಚ್.ಕೆ. ವೀರಣ್ಣಗೌಡ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಯು ಎಸ್ ಶಿವಕುಮಾರ್, ಮುಖ್ಯ ಶಿಕ್ಷಕರುಗಳಾದ ಕೃಷ್ಣ, ಚಂದ್ರಶೇಖರ್, ವರದರಾಜು ಹಾಗೂ ಅಗಸ್ತ್ಯ ಫೌಂಡೇಶನ ಸಂಚಾಲಕರಾದ ರಂಜಿತಾ ಮತ್ತು ಆಶಾ ಸೇರಿದಂತೆ ಇತರರು ಹಾಜರಿದ್ದರು.