ಪಿರಿಯಾಪಟ್ಟಣ: ವಿದ್ಯಾರ್ಥಿಗಳು ಓದಿನ ಸಮಯದಲ್ಲಿ ಗುರಿ ಸಾಧನೆಗೆ ಹೆಚ್ಚಿನ ಗಮನ ಹರಿಸಿದರೆ ಮಾತ್ರ ಯಶಸ್ಸು ಕಾಣಲು ಸಾಧ್ಯ ಎಂದು ಹುಣಸೂರು ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪುಟ್ಟಶೆಟ್ಟಿ ತಿಳಿಸಿದರು.
ಪಟ್ಟಣದ ಹರವೆ ಮಲ್ಲರಾಜಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಸಾಂಸ್ಕೃತಿಕ, ಕ್ರೀಡೆ, ರಾಷ್ಟ್ರೀಯ ಸೇವಾ ಯೋಜನೆ, ರೆಡ್ ಕ್ರಾಸ್ ಹಾಗೂ ಸ್ಕೌಟ್ ಅಂಡ್ ಗೈಡ್ಸ್ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ಮೊಬೈಲ್ ಗೀಳು ಬಿಟ್ಟು ಕಲಿಕೆಯ ಜತೆಗೆ ಉತ್ತಮ ಸಂಸ್ಕೃತಿ, ಸಾಮಾಜಿಕ ಕಳಕಳಿ, ಉತ್ತಮ ಚಟುವಟಿಕೆ ಮೈಗೂಡಿಸಿಕೊಂಡು ವಿದ್ಯಾಭ್ಯಾಸ ಮಾಡಿದರೆ ಮುಂದಿನ ಜೀವನ ಸುಖಕರವಾಗಿರುತ್ತದೆ, ಓದಿನಲ್ಲಿ ಹೆಚ್ಚು ಆಸಕ್ತಿ ಬರಲು ಗ್ರಂಥಾಲಯವನ್ನು ಸದ್ಬಳಕೆ ಮಾಡಿಕೊಂಡು ಜ್ಞಾನದ ಹಸಿವನ್ನು ನೀಗಿಸಿಕೊಂಡು ಭವಿಷ್ಯದಲ್ಲಿ ಬದಲಾವಣೆ ಕಾಣಬೇಕು. ಇಂದಿನ ಬಹುತೇಕ ವಿದ್ಯಾರ್ಥಿಗಳಲ್ಲಿ ಆತ್ಮ ವಿಮರ್ಶೆ ಮಾಡಿಕೊಳ್ಳುವ ಮನೋಭಾವ ಕಡಿಮೆಯಾಗುತ್ತಿದೆ. ದ್ವೇಷ ಮತ್ತು ಹಗೆತನ ಸಾಧಿಸುವ ಸ್ವಭಾವದಿಂದ ವಿದ್ಯಾರ್ಥಿಗಳು ದೂರವಿರುವ ಮೂಲಕ ಶಿಸ್ತು, ಸಂಯಮ ಮತ್ತು ಏಕಾಗ್ರತೆಯನ್ನು ಮೈಗೂಡಿಸಿಕೊಂಡು ಉತ್ತಮ ಸಾಧನೆ ಮಾಡಬೇಕು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬಗ್ಗೆ ಚಿಂತನೆ ಮಾಡಬೇಕು. ಗುರು-ಹಿರಿಯರ ಮಾರ್ಗದರ್ಶನ ಪಡೆದುಕೊಂಡು ಉನ್ನತ ಸ್ಥಾನಮಾನಗಳನ್ನು ಹೊಂದಬೇಕು ಎಂದರು.
ಸಂಸ್ಥೆಯ ಪ್ರಾಂಶುಪಾಲೆ ಡಿ.ಅಂಬಿಕಾ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಿಂದಲೇ ಸಾಮಾಜಿಕ ಅಂಶಗಳನ್ನು ಅಳವಡಿಸಿಕೊಂಡು ಕಲಿಕೆಯ ಜತೆ ಜತೆಗೆ ಸನ್ನಡತೆ ಮತ್ತು ಕ್ರಿಯಾ ಶೀಲತೆ ಮೈಗೂಡಿಸಿಕೊಂಡು ಅಧ್ಯಯನ ಮಾಡಿದರೆ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಪಠ್ಯ ವಿಷಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ನಿಮ್ಮಲ್ಲಿನ ದೈಹಿಕ, ಮಾನಸಿಕ ಹಾಗೂ ಬೌದ್ಧಿಕ ವಿಕಸನಕ್ಕೆ ಸಹಕಾರಿಯಾಗುತ್ತದೆ ಆದ್ದರಿಂದ ವಿದ್ಯಾರ್ಥಶಿಸ್ತು, ಸಂಯಮ, ಏಕಾಗ್ರತೆಗಳನ್ನು ಮೈಗೂಡಿಸಿಕೊಂಡು ಸತತ ಪರಿಶ್ರಮದಿಂದ ಸಾಧನೆ ಮಾಡಲು ಮುಂದಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಾಕ್ರಮ ನೋಡುಗರ ಗಮನಸೆಳೆಯುವಂತಿತ್ತು.
ಈ ಸಂದರ್ಭದಲ್ಲಿ ವಿವಿಧ ಘಟಕಗಳ ಸಂಚಾಲಕರಾದ ಸಿ.ಆರ್.ವಿಶ್ವನಾಥ್, ಎನ್.ಪ್ರಸಾದ್, ಶೇಸಪ್ಪ, ರಾಜಗೋಪಾಲ್, ಸಾಗರ್, ಡಾ.ಗುರಬಸವರಾಜಸ್ವಾಮಿ ಪಂಡಿತ, ಡಾ.ಶೈಲಶ್ರೀ, ಹೆಚ್.ರಮೇಶ್, ಬಿ.ಜಿ.ಕವಿತಾ, ಅರುಣ್ ಕುಮಾರ್, ಪ್ರಾಧ್ಯಾಪಕರಾದ ಎನ್.ನಂಜುಂಡಸ್ವಾಮಿ, ಡಾ.ಎಸ್.ಕೆ.ಮಂಜುನಾಥ್, ನಾಗೇಶ್, ಶಿಲ್ಪ, ಮಂಜುಶ್ರೀ, ಚೈತ್ರಾ, ಯಶಸ್ವಿನಿ, ನವಿನ್ ಕುಮಾರ್, ಪರಮೇಶ್, ಮಂಜುನಾಥ ಟಿ.ಜಿ., ಪ್ರೇಮಾರ್ಜುನ್, ಮಮತಾ ಸೇರಿದಂತೆ ಮತ್ತಿತರರುಹಜರಿದ್ದರು.