Sunday, April 20, 2025
Google search engine

Homeರಾಜ್ಯಸುದ್ದಿಜಾಲವಿದ್ಯಾರ್ಥಿಗಳು ಸ್ವಶಕ್ತಿಯಿಂದ ಬೆಳೆಯಬೇಕು: ಸಾಹಿತಿ ಬನ್ನೂರು ರಾಜು

ವಿದ್ಯಾರ್ಥಿಗಳು ಸ್ವಶಕ್ತಿಯಿಂದ ಬೆಳೆಯಬೇಕು: ಸಾಹಿತಿ ಬನ್ನೂರು ರಾಜು

ಹುಣಸೂರು: ಪ್ರತಿಯೊಬ್ಬರಲ್ಲೂ ಒಂದು ಸ್ವಶಕ್ತಿ ಅನ್ನೋದು ಇದ್ದೇ ಇರುತ್ತದೆಯಾದ್ದರಿಂದ ನಿನ್ನ ಬಾಳಿನ ಶಿಲ್ಪಿ ನೀನೆ ಎಂಬ ಸ್ವಾಮಿ ವಿವೇಕಾನಂದರ ವಾಣಿಯಂತೆ ವಿದ್ಯಾರ್ಥಿಗಳು ತಮ್ಮ ಬದುಕನ್ನು ತಾವೇ ಕಟ್ಟಿಕೊಂಡು ಸ್ವಾಭಾವಿಕ ಸಸ್ಯಗಳಂತೆ ಬೆಳೆಯಬೇಕೆಂದು ಸಾಹಿತಿ ಬನ್ನೂರು ಕೆ.ರಾಜು ಹೇಳಿದರು.

ಮೈಸೂರಿನ ಪ್ರತಿಷ್ಠಿತ ಸೇವಾ ಸಂಸ್ಥೆಗಳಾದ ಹಿರಣ್ಮಯಿ ಪ್ರತಿಷ್ಠಾನ ಮತ್ತು ಕಾವೇರಿ ಬಳಗದ ಸಂಯುಕ್ತ ಆಶ್ರಯದ ಲ್ಲಿ ಹುಣಸೂರು ತಾಲೂಕಿನ ಬೀರತಮ್ಮನ ಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಏರ್ಪಡಿಸಿದ್ದ ವಿದ್ಯಾರ್ಥಿಗಳಿಗೆ ಪೂರಕ ಸಮವಸ್ತ್ರ ಮತ್ತು ಲೇಖನ ಸಾಮಗ್ರಿ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಡುಮೇಡುಗಳಲ್ಲಿ, ಬೆಟ್ಟಗುಡ್ಡಗಳಲ್ಲಿ ಪ್ರಕೃತಿ ಸಹಜವಾಗಿ ತನ್ನಂತಾನೆ ಬೆಳೆಯುವ ಸ್ವಾಭಾವಿಕ ಸಸ್ಯಗಳನ್ನು ಯಾರೂ ಪೋಷಣೆ ಮಾಡಿ ಬೆಳೆಸುವುದಿಲ್ಲ. ಅವು ತಮ್ಮ ಸುತ್ತಲೂ ಇರುವ ಪರಿಸರದ ಫಲವತ್ತತೆ ಮತ್ತು ಸಂಪನ್ಮೂಲ ವನ್ನು ಸದ್ಬಳಕೆ ಮಾಡಿಕೊಂಡು ನಿಸರ್ಗದತ್ತವಾಗಿ ಬೆಳೆಯುತ್ತವೆ. ಅದೇ ರೀತಿ ವಿದ್ಯಾರ್ಥಿಗಳು ಕೂಡ ಪ್ರತಿಯೊಂದಕ್ಕೂ ಇತರರ ಮೇಲೆ ಅವಲಂಬಿತವಾಗದೆ ಪರಾವಲಂಬಿತನವನ್ನು ಬಿಟ್ಟು ತಮ್ಮ ಸುತ್ತಲಿನ ಸಮಾಜದಲ್ಲಿ ಬಹು ಸುಲಭವಾಗಿ ದೊರೆಯುವಂತಹ ಜ್ಞಾನ ಸಂಪದವನ್ನು ಸದುಪಯೋಗ ಮಾಡಿಕೊಂಡು ಸ್ವಶಕ್ತಿಯಿಂದ ಸಹಜವಾಗಿ ಬುದ್ದಿವಂತರಾಗಿ, ಜ್ಞಾನವಂತರಾಗಿ, ವಿವೇಕವಂತರಾಗಿ ಕ್ರಿಯಾಶೀಲ ರಾಗಿ ಬೆಳೆಯಬೇಕೆಂದರು.

ಪ್ರಾಥಮಿಕ ಹಂತದಿಂದಲೇ ವಿದ್ಯಾರ್ಥಿಗಳು ಉತ್ತಮವಾಗಿ ಓದುವುದರ ಜೊತೆಗೆ ಅಷ್ಟೇ ಮುಖ್ಯವಾಗಿ ಅನಾರೋಗ್ಯಕರ ಹೊರಗಿನ ತಿಂಡಿ ತಿನಿಸುಗಳಿಂದ ದೂರವಿದ್ದು ಆರೋಗ್ಯವನ್ನೂ ಕಾಪಾಡಿಕೊಳ್ಳಬೇಕು ಹಾಗೂ ತಂದೆ-ತಾಯಿಗಳು ಮತ್ತು ಗುರು-ಹಿರಿಯರು ಹೇಳಿದಂತೆ ಕೇಳಬೇಕು. ಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕುತಿ ಎಂಬಂತೆ ವಿದ್ಯೆ ಕಲಿಸುವ ಗುರುಗಳ ಬಗ್ಗೆ ಬಹು ದೊಡ್ಡ ಗೌರವ ಇಟ್ಟುಕೊಂಡು ಗುರು ಪ್ರಜ್ಞೆಯಿಂದ ಕಲಿಯಬೇಕು. ಹಿಂದೆ ಗುರು ಮುಂದೆ ಗುರಿ ಇಟ್ಟುಕೊಂಡಿರುವ ವಿದ್ಯಾರ್ಥಿಗಳಾರೂ ಸಾಧನೆಯಿಂದ ಹಿಂದೆ ಬಿದ್ದಿಲ್ಲ. ಹಾಗಾಗಿ ದೊಡ್ಡ ದೊಡ್ಡ ಕನಸುಗಳನ್ನು, ದೊಡ್ಡ ದೊಡ್ಡ ಗುರಿಗಳನ್ನು ಹೊಂದಿ ವಿದ್ಯಾರ್ಥಿಗಳು ಸಾಧಕರಾಗಬೇಕು. ಭವಿಷ್ಯದಲ್ಲಿ ವಿದ್ಯಾರ್ಥಿಗಳೆಲ್ಲರೂ ಶಿಕ್ಷಣವನ್ನು ಏಣಿಯನ್ನಾಗಿ ಮಾಡಿಕೊಂಡು ಎತ್ತರದ ಸ್ಥಾನ ತಲುಪಿ ಬಹುದೊಡ್ಡ ಸಾಧಕ ರಾಗಬೇಕೆಂದ ಅವರು, ವಿದ್ಯಾರ್ಥಿಗಳಿಗೆ ಓದುವುದಷ್ಟೇ ಮುಖ್ಯವಲ್ಲ ಓದಿನಿಂದಾಚೆಗೂ ಒಳ್ಳೊಳ್ಳೆಯ ಅವಕಾಶಗಳು ಇವೆ. ಆದ್ದರಿಂದ ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳಬೇಕೆಂದು ಹೇಳಿ ವಿದ್ಯಾರ್ಥಿಗಳಿಗೆ ಉಪಯುಕ್ತವಾದ ಅನೇಕ ವಿಷಯಗಳನ್ನು ತಿಳಿಸಿಕೊಟ್ಟರು.

ಪ್ರಾರಂಭದಲ್ಲಿ ಮುಖ್ಯ ಶಿಕ್ಷಕ ಎಂ.ಆರ್. ಮಹೇಶ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು. ತಮ್ಮೂರಿನ ಶಾಲೆಯೆಂಬ ಅಭಿಮಾನದಿಂದ ಸ್ವತಃ ತಾವೇ ಪ್ರಾಯೋಜಕತ್ವ ವಹಿಸಿಕೊಂಡು ವಿಶ್ರಾಂತ ಶಿಕ್ಷಕ ಎಂ. ಎನ್. ಸುರೇಶ್ ಅವರು ಉಚಿತವಾಗಿ ಶಾಲಾ ಮಕ್ಕಳೆಲ್ಲರಿಗೂ ಪೂರಕ ಸಮವಸ್ತ್ರ ವಿತರಣೆ ಮಾಡಿ ಶುಭ ಹಾರೈಸಿದರು.

ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷ ಎ.ಸಂಗಪ್ಪ ಅವರು ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿಗಳನ್ನು ವಿತರಿಸಿದರು. ವಿಶ್ರಾಂತ ಶಿಕ್ಷಕಿ ಹಾಗು ಕಾವೇರಿ ಬಳಗದ ಅಧ್ಯಕ್ಷೆ ಎನ್.ಕೆ.ಕಾವೇರಿಯಮ್ಮ ಅವರು ಕನ್ನಡ ಶಿಶುಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದರು. ಶಿಕ್ಷಣ ಇಲಾಖೆಯ ಸಂಪನ್ಮೂಲ ವ್ಯಕ್ತಿ ಪ್ರಸನ್ನಕುಮಾರ್ ಅವರು ಮಕ್ಕಳನ್ನು ಕುರಿತು ಮಾತನಾಡಿ ಹಿತವಚನ ಹೇಳಿದರಲ್ಲದೆ ವಿದ್ಯಾರ್ಥಿಗಳಿಗೆ ವಿದ್ಯೆ ಕಲಿಸುವ ದಿಸೆಯಲ್ಲಿ ಪೋಷಕರಿಗೆ ಸಲಹೆ ಮತ್ತು ಮಾರ್ಗದರ್ಶನ ನೀಡಿದರು.

ಹುಣಸೂರು ತಾಲೂಕಿನ ಕಡೇ ಮನುಗನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ , ಹಾಲಿ ಸದಸ್ಯ ಲೋಕೇಶ್ ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು.ಮಾತೃಶ್ರೀ ಶಿವಮ್ಮ, ಮುಖ್ಯ ಶಿಕ್ಷಕ ಎಂ.ಆರ್. ಮಹೇಶ್, ಗ್ರಾಪಂ ಸದಸ್ಯ ವೆಂಕಟೇಶ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬಿ.ಸಿ. ಚಂದ್ರಶೇಖರ್, ವಿಶ್ರಾಂತ ಶಿಕ್ಷಕ ಎಂ.ಎನ್.ಸುರೇಶ್, ಗ್ರಾಮದ ಮುಖಂಡರಾದ ರಾಜ ನಾಯಕ, ಸೋಮೇಗೌಡ, ಅಣ್ಣೇಗೌಡ, ಮಹಾದೇವನಾಯಕ, ಲೋಕೇಶ್, ಮಂಜುನಾಥ್, ಎಸ್.ರವಿಕುಮಾರ್,ದರ್ಶನ್, ಅತಿಥಿ ಶಿಕ್ಷಕರಾದ ಪ್ರದೀಪ್, ನಟರಾಜ್, ಮುಂತಾದವರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular