ಮಂಡ್ಯ: ವಿದ್ಯಾರ್ಥಿಗಳು ಪು.ತಿ.ನ ರವರ ಮೌಲ್ಯ, ಆದರ್ಶ, ಚಿಂತನೆಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಹಾಗೂ ಮಕ್ಕಳು ಪುಸ್ತಕವನ್ನು ಓದುವಂತ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ನಮ್ಮ ನಾಡು, ನುಡಿ,ಪರಂಪರೆ, ಇತಿಹಾಸವನ್ನು ಅರಿತುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಾದ ಡಾ. ಕುಮಾರ ರವರು ತಿಳಿಸಿದರು.
ಇಂದು ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ನಡೆದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಡಾ. ಪು.ತಿ.ನ ಟ್ರಸ್ಟ್ (ರಿ) ಮೇಲುಕೋಟೆ ಪಾಂಡಪುರ ತಾಲೂಕು, ಜಿಲ್ಲಾ ಮಾಂಡವ್ಯ ಪ್ರಥಮ ದರ್ಜೆ ಕಾಲೇಜು ಮಂಡ್ಯ ಸಹಯೋಗದೊಂದಿಗೆ ಕನ್ನಡದ ಮಹಾಕವಿ ಡಾ. ಪು.ತಿ.ನ ರವರ 121ನೇ ಜನ್ಮ ದಿನೋತ್ಸವ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಪು.ತಿ.ನ ರವರ ಮೌಲ್ಯ ಚಿಂತನೆಗಳನ್ನು ಹಾಗೂ ಮಹನೀಯರ ಮೌಲ್ಯ, ಆದರ್ಶ,ಚಿಂತನೆಗಳನ್ನು ಮಕ್ಕಳಿಗೆ ತಿಳಿಸಬೇಕು ಎಂದು ಹೇಳಿದರು.
ಪುರೋಹಿತ ತಿರುನಾರಾಯಣ ನರಸಿಂಹಾಚಾರ್ (ಪುತಿನ) ಕನ್ನಡದ ನವೋದಯ ಕಾಲದ ಪ್ರಮುಖ ಕವಿ, ಗೀತನಾಟಕಕಾರರು ಮತ್ತು ವಿದ್ವಾಂಸರು (1905-1998). ಮಂಡ್ಯ ಜಿಲ್ಲೆಯ ಮೇಲುಕೋಟೆಯವರಾದ ಇವರು ಸಂಸ್ಕೃತ ಮತ್ತು ಇಂಗ್ಲಿಷ್‌ನಲ್ಲಿ ಪಾಂಡಿತ್ಯ ಹೊಂದಿರುತ್ತಾರೆ ಎಂದು ತಿಳಿಸಿದರು.
ಯುವ ಪೀಳಿಗೆಗೆ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ವೃತ್ತಿಯಿಂದ ನಿವೃತ್ತಿಯಾದರೂ ಪವೃತ್ತಿಯಿಂದ ನಿವೃತ್ತಿಯಾಗದೆ ಸಾಹಿತ್ಯ ವೃತ್ತಿಯಲ್ಲಿ ಅಪಾರ ಚಿಂತನೆಯನ್ನು ಇಟ್ಟುಕೊಂಡು ಪ್ರೊ. ಕೃಷ್ಣಗೌಡರು ಕಾರ್ಯಕ್ರಮ ವನ್ನು ಆಯೋಜನೆ ಮಾಡಿದ್ದೂ
ಸಮಾಜಕ್ಕೆ ಕೊಡುಗೆಯನ್ನು ನೀಡುವ ನಿಟ್ಟಿನಲ್ಲಿ ಸಾಂಸ್ಕೃತಿಕ ರಾಯಭಾರಿಯಾಗಿ ಸಾಹಿತಿಕ ರಾಯಭಾರಿಯಾಗಿ ಸಾಮಾಜಿಕ ಚಿಂತನೆಗಳನ್ನು ಮಕ್ಕಳಿಗೆ ತಿಳಿಸುವ ನಿಟ್ಟಿನಲ್ಲಿ ಕೆಲಸ ಆಗುತ್ತಿರುವುದು
ಸಂತಸ ತಂದಿದೆ ಎಂದು ಹೇಳಿದರು.
ಪು.ತಿ.ನ ರವರು ಅತ್ಯಂತ ಶ್ರೇಷ್ಠ ಕವಿ ಅವರ ಸಾಹಿತ್ಯ ಮತ್ತು ವೃತ್ತಿ ಬದುಕನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ಅವರ ಸಾಹಿತ್ಯದ ಮೌಲ್ಯ,ಭಾವನೆ ಚಿಂತನೆಯನ್ನು ಓದಬೇಕು.ವಿದ್ಯಾರ್ಥಿಗಳು ಮೊದಲು ಸಾಹಿತ್ಯವನ್ನು ಅರ್ಥೈಸಿಕೊಳ್ಳಬೇಕು ಅದರಂತೆ ಸಾಹಿತ್ಯದ ಪ್ರಕಾರವನ್ನು ಅರಿತುಕೊಳ್ಳಬೇಕು ಎಂದು ಹೇಳಿದರು.
ಪೋಷಕರು ಮಕ್ಕಳಲ್ಲಿ ನಮ್ಮ ನಾಡಿನ ಪರಂಪರೆ ಕಲೆ,ಸಾಹಿತ್ಯ, ಸಂಸ್ಕೃತಿ, ಚಿಂತನೆಗಳನ್ನು ತುಂಬುವಂತ ಕೆಲಸ ಆಗಬೇಕು ಎಂದು ಹೇಳಿದರು.
ಮಂಡ್ಯ ಜಿಲ್ಲೆಯ ಕೃಷಿ ಪ್ರಧಾನವಾದ ಜಿಲ್ಲೆ ಹಾಗೂ ಜಿಲ್ಲೆಯಲ್ಲಿ ಸಾಹಿತ್ಯದಲ್ಲೂ ಕ್ಷೇತ್ರದಲ್ಲೂ ಅಪಾರವಾಗಿ ಕವಿಗಳು ಸಮಾಜಕ್ಕೆ ಕೊಡುಗೆಯನ್ನು ನೀಡಿದ್ದಾರೆ.ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಜಿಲ್ಲೆಯೂ ತನ್ನದೇ ಆದ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ ಎಂದು ತಿಳಿಸಿದರು.
ಪು. ತಿ. ನ. ರವರು ಅತ್ಯುತ್ತಮ ಬರಹಗಳ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಮತ್ತು ಸಮಾಜಕ್ಕೆ ಹಲವು ಕೊಡುಗೆಯನ್ನು ನೀಡಿದ್ದಾರೆ.ಜಿಲ್ಲೆಯಲ್ಲಿ ಸಾಹಿತ್ಯ ಬಹಳ ಗಟ್ಟಿಯಾಗಿದೆ ಹಾಗಾಗಿ ಸಾಹಿತ್ಯ ಇನ್ನೂ ಗಟ್ಟಿಯಾಗಿ ಉಳಿದಿದೆ ಪು.ತಿ.ನ ರವರ ಆಧ್ಯಾತ್ಮಿಕ ಚಿಂತನೆಗಳ ಮೂಲಕ ಸಮಾಜಕ್ಕೆ ಹಲವು ಕೊಡುಗೆಗಳನ್ನು ನೀಡಿದ್ದಾರೆ ಎಂದು ತಿಳಿಸಿದರು.
ತಂದೆ -ತಾಯಿಗಿಂತ ಮಿಗಿಲಾದ ಶಕ್ತಿ ಯಾವುದು ಇಲ್ಲ ಎಂದು ಮಕ್ಕಳು ಅರ್ಥೈಸಿಕೊಳ್ಳಬೇಕು ಹಾಗೂ ತಂದೆ- ತಾಯಿಯರನ್ನು ಗೌರವಿಸಬೇಕು.ವಿದ್ಯಾರ್ಥಿಗಳು ಜೀವನದಲ್ಲಿ ಮೌಲ್ಯಗಳಿಗೆ ಬೆಲೆ ಕೊಡಬೇಕು ಎಂದು ತಿಳಿಸಿದರು
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಮೀರಾ ಶಿವಲಿಂಗಯ್ಯ ರವರು ಮಾತನಾಡಿ ಪುರೋಹಿತ ತಿರುನಾರಾಯಣ ನರಸಿಂಹಾಚಾರ್ (ಪುತಿನ) ಕನ್ನಡದ ನವೋದಯ ಕಾಲದ ಪ್ರಮುಖ ಕವಿ, ಗೀತನಾಟಕಕಾರರು ಮತ್ತು ವಿದ್ವಾಂಸರು (1905-1998). ಮಂಡ್ಯ ಜಿಲ್ಲೆಯ ಮೇಲುಕೋಟೆಯವರಾದ ಇವರು ಸಂಸ್ಕೃತ ಮತ್ತು ಇಂಗ್ಲಿಷ್‌ನಲ್ಲಿ ಪಾಂಡಿತ್ಯ ಹೊಂದಿದ್ದು, “ಯದುಗಿರಿಯ ವೀಣೆ”, “ಗೋಕುಲ ನಿರ್ಗಮನ” (ಗೀತನಾಟಕ) ಮುಂತಾದ ಕೃತಿಗಳ ಮೂಲಕ ಭಕ್ತಿ ಹಾಗೂ ಭಾವಗೀತೆಗಳಿಗೆ ಹೊಸ ಆಯಾಮ ನೀಡಿದವರು ಎಂದು ತಿಳಿಸಿದರು.
ಪು.ತಿ.ನ ರವರ ನಾಟಕಗಳಲ್ಲಿ ಸಂಗೀತವೇ ಪ್ರಧಾನವಾಗಿದ್ದು ಜೊತೆಗೆ ಆಧ್ಯಾತ್ಮಿಕ ಚಿಂತನೆಯನ್ನು ಹೊಂದಿದವರು ಅವರು. ಪು.ತಿ.ನ ರವರ ಸಮಾಧಿಯನ್ನು ಹೂದೋಟಕ್ಕೆ ಪರಿವರ್ತಿಸಲಾಗಿದೆ ಎಂದು ತಿಳಿಸಿದರು.
ಪು.ತಿ.ನ ರವರು ಹಣತೆ ಹಂಸದಾಮಯಂತಿ ಅಹಲ್ಯ ಶ್ರೇಷ್ಠ ಕೃತಿ ಬರೆದು ಪದ್ಮಶ್ರೀ ಹಾಗೂ ಕೇಂದ್ರ ಸಾಹಿತ್ಯ ಪ್ರಶಸ್ತಿಯನ್ನು ಪಡೆದಿದ್ದು, 60ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿದ್ದರು. ಅವರ ಹಣತೆ ಎಲ್ಲರಿಗೂ ಬೆಳಕಾಗಲಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಡಾ. ಪು.ತಿ.ನ ಟ್ರಸ್ಟ್ ನ ಅಧ್ಯಕ್ಷರು ಪ್ರೊ. ಎಂ ಕೃಷ್ಣೇಗೌಡ, ಕನ್ನಡದ ಪ್ರಖ್ಯಾತ ಲೇಖಕರು ಜೋಗಿ, ಕರ್ನಾಟಕ ಸಂಘ ಡಾ. ಜಯಪ್ರಕಾಶ್ ಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸದಸ್ಯ ಕಾರ್ಯದರ್ಶಿ ಹಾಗೂ ಸಹಾಯಕ ನಿರ್ದೇಶಕರು ಡಾ. ಬಿ. ವಿ.ನಂದೀಶ್, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹರ್ಷ,ಡಾ. ಪು.ತಿ.ನ.ಟ್ರಸ್ಟ್ ನ ಸದಸ್ಯರು ಪಿ. ಸುಮಾರಾಣಿ ಶಂಭು, ಕುಮಾರ ಕೊಪ್ಪ, ರವರು ಉಪಸ್ಥಿತರಿದ್ದರು.



