ವರದಿ : ಚಪ್ಪರದಹಳ್ಳಿ ವಿನಯ್ ಕುಮಾರ್
ಬೆಟ್ಟದಪುರ : ವಿದ್ಯಾರ್ಥಿಗಳು ಅಂಕಗಳಿಗೆ ಓದದೆ ಜ್ಞಾನಾರ್ಜನೆಗೆ ಓದಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದು ಚಲನಚಿತ್ರ ನಟ ರಿಷಿ ತಿಳಿಸಿದರು.
ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಅನಿಕೇತನ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಹಾಗೂ ಕ್ರೀಡಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮೊದಲು ವಿಚಾರಗಳನ್ನು ಅರಿಯಬೇಕು ಅನಂತರ ಓದಬೇಕು. ವಿಚಾರಗಳನ್ನು ಅರ್ಥಮಾಡಿಕೊಂಡು ಶಿಕ್ಷಕರ ಜೊತೆ ಒಡನಾಟ ಇಟ್ಟುಕೊಂಡು ಶಿಕ್ಷಣ ಕಲಿತರೆ ಮುಂದಿನ ವಿದ್ಯಾಭ್ಯಾಸದ ಹಾದಿ ಸುಲಭವಾಗಿರುತ್ತದೆ ಎಂದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಬ್ಬರು ಪ್ರತಿದಿನ ವಿದ್ಯಾರ್ಥಿಗಳಾಗಬೇಕು. ವಿಚಾರಗಳನ್ನು ಕಲಿಯುವ ಉದ್ದೇಶದಿಂದ ಪ್ರತಿಯೊಬ್ಬ ಪ್ರಜೆಯೂ ವಿದ್ಯಾರ್ಥಿಯಾಗಿ ಪ್ರತಿದಿನ ಕಲಿಯುತ್ತಿರಬೇಕು. ಯಾವ ಉದ್ದೇಶಕ್ಕಾಗಿ ಶಿಕ್ಷಣ ಸಂಸ್ಥೆಗಳ ನಡೆಸುತ್ತಾರೆ ಎಂಬುದು ಮುಖ್ಯವಾಗಿರುತ್ತದೆ. ಉತ್ತಮ ವಾತಾವರಣ ಹೊಂದಿರುವ ಈ ಕಾಲೇಜಿನವರು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಕೊಟ್ಟು ವಿದ್ಯಾರ್ಥಿಗಳಿಗೆ ವಿದ್ಯಾ ದಾನ ಮಾಡುತ್ತಿರುವುದು ಪ್ರಶಂಶನೀಯ ಎಂದರು.
ಸಂಸ್ಥೆಯ ಕಾರ್ಯದರ್ಶಿ ಡಾ. ಜೆ.ಸೋಮಣ್ಣ ಮಾತನಾಡಿ ನಮ್ಮ ಸಂಸ್ಥೆಯು ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಸೇವೆಯಾಗಿ ಪರಿಗಣಿಸಿ ವಿದ್ಯಾಭ್ಯಾಸವನ್ನು ನೀಡುತ್ತಿದ್ದೇವೆ. ಗುರಿ ಮುಟ್ಟಲು ಏಕ ಮಾತ್ರ ಸಾಧನ ಶಿಕ್ಷಣ, ಆದ್ದರಿಂದ ಬರುವ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಪಡೆಯಬೇಕು ಎಂದರು.
ಈ ಸಂದರ್ಭದಲ್ಲಿ ಕಿರುತರೆ ನಟ ದೇವನ್, ಸಂಸ್ಥೆಯ ಅಧ್ಯಕ್ಷ ಅಪ್ಪಣ್ಣ, ಗೌರವ ಸಲಹೆಯ ಮಂಡಳಿ ಸದಸ್ಯರಾದ ಆರ್.ಎಸ್ ದೊಡ್ಡಣ್ಣ, ಜಿ.ಟಿ ನಾಗರಾಜು, ಸಣ್ಣಸ್ವಾಮಿಗೌಡ, ಕೊಣಸೂರು ಮೂರ್ತಿ, ಎಂ.ಆರ್.ಪಿ ಪ್ರೌಢಶಾಲೆಯ ಮುಖ್ಯಶಿಕ್ಷಕ ದೇವರಾಜು, ಶಿಕ್ಷಕರಾದ ದೇವರಾಜು, ಮಹೇಶ್, ಪ್ರಾಂಶುಪಾಲ ಬಸವರಾಜು, ಟಿ.ಆರ್ ಶಕುಂತಲಾ, ಟಿ.ಆರ್ ಪ್ರಶಾಂತ್ ಸೇರಿದಂತೆ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಇದ್ದರು.