ಹೊಸೂರು : ಗಾಂಧೀಜಿ ಸೇರಿದಂತೆ ಅನೇಕ ಮಹಾನೀಯರ ತ್ಯಾಗ ಬಲಿದಾನದಿಂದ ನಮ್ಮ ದೇಶ ಸ್ವಾತಂತ್ರ್ಯ ಪಡೆದಿದ್ದು ಸರ್ವರು ನೆಮ್ಮದಿಯಿಂದ ಬದುಕು ನಡೆಸಬೇಕು. ಆ ನಿಟ್ಟಿನಲ್ಲಿ ನಮ್ಮ ಸರ್ಕಾರ ನಡೆದುಕೊಳ್ಳುತ್ತಿದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಕೆ.ಆರ್.ನಗರ ಪಟ್ಟಣದ ಡಾ.ರಾಜ್‌ಕುಮಾರ್ ಬಾನಾಂಗಳದಲ್ಲಿ ತಾಲೂಕು ಆಡಳಿತದ ವತಿಯಿಂದ ಮಂಗಳವಾರ ಆಯೋಜಿಸಿದ್ದ 77ನೇ ಸ್ವಾತಂತ್ರ್ಯ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಧ್ವಜ ವಂದನೆ ಸ್ವೀಕರಿಸಿ ಮಾತನಾಡಿದ ಅವರು ಮಹಾತ್ಮ ಗಾಂಧೀಜಿಯವರು ಮಧ್ಯ ರಾತ್ರಿಯಲ್ಲಿ ಮಹಿಳೆ ಯಾವುದೇ ತೊಂದರೆ ಇಲ್ಲದಂತೆ ಓಡಾಡಿದಾಗ ಮಾತ್ರ ದೇಶ ಪೂರ್ಣ ಸ್ವಾತಂತ್ರ್ಯ ಕಾಣಲಿದೆ ಎಂದು ಹೇಳಿದ್ದರು. ಆದ್ದರಿಂದ ಪ್ರತಿಯೊಬ್ಬರು ಮಹಿಳೆಯರಿಗೆ ಗೌರವ ಕೊಡುವುದನ್ನು ರೂಡಿಸಿಕೊಳ್ಳಿ ಎಂದು ಮನವಿ ಮಾಡಿದರು.
ಸರ್ಕಾರ ಶಕ್ತಿ ಯೋಜನೆ, ಗೃಹಲಕ್ಷ್ಮೀ ಯೋಜನೆ ಜಾರಿಗೆ ತಂದು ಮಹಿಳೆಯರಿಗೆ ವಿಶೇಷ ಗೌರವ ನೀಡಿದೆ ಇದರ ಜತೆಗೆ ರಾಜಕೀಯ ಸ್ಥಾನ ಮಾನಗಳನ್ನು ನೀಡಲಿದೆ.
ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಸಂಗೊಳ್ಳಿ ರಾಯಣ್ಣ ರವರ ಜಯಂತಿಯನ್ನು ಕೂಡ ಇಂದೇ ಆಚರಣೆ ಮಾಡುತ್ತಿದ್ದು ರಾಯಣ್ಣರಂತಹ ಹೋರಾಟದ ಮನೋಭಾವನೆಯನ್ನು ವಿದ್ಯಾರ್ಥಿಗಳು ಮತ್ತು ಯುವ ಪೀಳಿಗೆ ಅಳವಡಿಸಿಕೊಳ್ಳಬೇಕೆಂದು ಕಿವಿ ಮಾತು ಹೇಳಿದರು.
1500ಕ್ಕೂ ಹೆಚ್ಚು ಮಕ್ಕಳಿಗೆ ವಿವಿಧ ಶಾಲಾ ಶಿಕ್ಷಕರುಗಳು ದೇಶಭಕ್ತಿ ಗೀತೆಗೆ ಉತ್ತಮವಾದ ನೃತ್ಯ ಮಾಡುವಂತೆ ವಿದ್ಯಾರ್ಥಿಗಳನ್ನು ತಯಾರು ಮಾಡಿದ್ದಕ್ಕಾಗಿ ಅಭಿನಂದನೆ ಸಲ್ಲಿಸಿದ ಶಾಸಕ ಡಿ.ರವಿಶಂಕರ್ ಮುಂದೆ ನಡೆಯುವ ರಾಷ್ಟ್ರೀಯ ಹಬ್ಬಗಳಿಗೆ ಸಾರ್ವಜನಿಕರು ಕೂತು ವೀಕ್ಷಿಸಲು ಮೈದಾನದ ಸುತ್ತಾ ಶಾಮೀಯಾನ ಮತ್ತು ಚೇರುಗಳ ವ್ಯವಸ್ಥೆ ಮಾಡಿಸಬೇಕೆಂದು ತಾಲೂಕು ಆಡಳಿತಕ್ಕೆ ಸೂಚಿಸಿದರು.
ತಾಲೂಕಿನ ಸುಗ್ಗನಹಳ್ಳಿ ಗ್ರಾಮದ ಯೋಧ ಸುರೇಶ್ ನಿಧನಕ್ಕೆ ಸಂತಾಪ ಸೂಚಿಸಿದ ಶಾಸಕರು ಯೋಧನ ಕುಟುಂಬದವರು ಬಯಸಿದ್ದಲ್ಲಿ ಅವರ ಪುತ್ರಿ ಪ್ರಕೃತಿಯ ಶಿಕ್ಷಣ ವೆಚ್ಚವನ್ನು ವಯಕ್ತಿಕವಾಗಿ ಭರಿಸುತ್ತೇನೆ ಎಂದು ತಿಳಿಸಿದರು.
ವೇದಿಕೆಯಲ್ಲಿ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಕೆ.ಆರ್.ನಗರ ತಾಲೂಕು ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಎಸ್.ರವಿಕುಮಾರ್, ಜಿಪಂ ಮಾಜಿ ಸದಸ್ಯ ಜಿ.ಆರ್.ರಾಮೇಗೌಡ, ಪ್ರಸೂತಿ ತಜ್ಞ ಡಾ.ದರ್ಶನ್, ಶಿಕ್ಷಕ ಪುಟ್ಟಣಯ್ಯ, ತಾಲೂಕು ಕಛೇರಿ ಸಿಬ್ಬಂಧಿ ರೂಪೇಶ್, ಬಿಎಲ್‌ಒ ಕಮಲಮ್ಮ, ಪೌರಕಾರ್ಮಿಕ ಶ್ರೀರಾಮ, ಸಾನಿಟರಿ ದಪೇದಾರ್ ಕೃಷ್ಣ, ಯೋಗಪಟು ಪದ್ಮ ರವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಮೆರವಣಿಗೆಯಲ್ಲಿ ಭಾಗವಹಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟ ಎಲ್ಲಾ ಶಾಲೆಗಳ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ನಾಡ ಹಬ್ಬದ ಸಮಿತಿಯ ವತಿಯಿಂದ ನೆನಪಿನ ಕಾಣಿಕೆ ನೀಡಿ ಅಭಿನಂದಿಸಲಾಯಿತು.
ತಹಸಿಲ್ಧಾರ್ ಸಿ.ಎಸ್.ಪೂರ್ಣಿಮ ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರ್ಯ ದಿನದದ ಸಂದೇಶ ನೀಡಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಟಿ.ಕೆ.ಚಿನ್ನಸ್ವಾಮಿ, ಜಿಪಂ ಮಾಜಿ ಸದಸ್ಯ ಜಯರಾಮೇಗೌಡ, ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಮಿಕ್ಸರ್‌ಶಂಕರ್, ಸದಸ್ಯರಾದ ಕೋಳಿಪ್ರಕಾಶ್, ನಟರಾಜ್, ಶಂಕರ್‌ಸ್ವಾಮಿ, ಶಿವುನಾಯಕ್, ಮಾಜಿ ಸದಸ್ಯ ಕೆ.ವಿನಯ್, ಮುಖ್ಯಾಧಿಕಾರಿ ಸುಧಾರಾಣಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಮಹದೇವ್, ನಗರಾಧ್ಯಕ್ಷ ಎಂ.ಜೆ.ರಮೇಶ್, ಇಒ ಹೆಚ್.ಕೆ.ಸತೀಶ್, ಬಿಇಒ ಆರ್.ಕೃಷ್ಣಪ್ಪ, ಟಿಎಸ್‌ಡಬ್ಲೂö್ಯ ಎಸ್.ಎಂ.ಅಶೋಕ್‌ಕುಮಾರ್, ಟಿಹೆಚ್‌ಒ ಡಾ.ಕೆ.ಆರ್.ಮಹೇಂದ್ರಪ್ಪ, ಬಿಸಿಎಂ ಅಧಿಕಾರಿ ಚಂದ್ರಕಲಾ, ಇಸಿಒ ದಾಸಪ್ಪ, ಸಿಆರ್‌ಪಿ ವಸಂತಕುಮಾರ್ ಇನ್ನಿತರರು ಹಾಜರಿದ್ದರು.