ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯಲ್ಲಿ ಒಂಟಿ ಮನೆ ನಿರ್ಮಾಣಕ್ಕಾಗಿ 25ನೇ ಫೆಬ್ರವರಿ 2025ರ ಒಳಗಾಗಿ ಅರ್ಜಿ ಸಲ್ಲಿಸಲು ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ರವರು ನಾಗರಿಕರಲ್ಲಿ ಮನವಿ ಮಾಡಿದರು.
ಬೊಮ್ಮನಹಳ್ಳಿ ವಲಯ ವ್ಯಾಪ್ತಿಯಲ್ಲಿ ‘ಮುಖ್ಯ ಆಯುಕ್ತರ ನಡೆ ವಲಯದ ಕಡೆ ಕಾರ್ಯಕ್ರಮ’ದಲ್ಲಿ ಸಾರ್ವಜನಿಕರಿಂದ ಬಂದ ದೂರುಗಳಿಗೆ ಸ್ಪಂದಿಸುವ ವೇಳೆ, 30ಕ್ಕೂ ಹೆಚ್ಚು ನಾಗರಿಕರು ಒಂಟಿ ಮನೆ ಯೋಜನೆಯಲ್ಲಿ ಅನುದಾನ ಒದಗಿಸಲು ಮನವಿ ಮಾಡಿದರು.
ಅದಕ್ಕೆ ಮುಖ್ಯ ಆಯುಕ್ತರು ಪ್ರತಿಕ್ರಯಿಸಿ, 2022 ರಿಂದ 24 ರವರೆಗೆ ಒಂಟಿ ಮನೆಗಾಗಿ ಬಂದಿರುವ ಅರ್ಜಿಗಳನ್ನು ಪರಿಶೀಲನೆ ನಡೆಸಲಾಗಿದ್ದು, ಅರ್ಹ ಫಲಾನುಭವಿಗಳಿಗೆ ಶೀಘ್ರ ಅನುದಾನ ಒದಗಿಸಲಾಗುವುದೆಂದು ತಿಳಿಸಿದರು.
ಒಂಟಿ ಮನೆ ನಿರ್ಮಾಣಕ್ಕಾಗಿ ಇದುವರೆಗೆ ಅರ್ಜಿ ಸಲ್ಲಿಸದೇ ಇರುವವರು ಕೂಡಲೆ ಪಾಲಿಕೆ ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿ ಪಡೆದು 25ನೇ ಫೆಬ್ರವರಿ 2025ರ ಒಳಗಾಗಿ ಆಯಾ ವಲಯದ ಕಲ್ಯಾಣ ವಿಭಾಗದ ಸಹಾಯಕ ಕಂದಾಯ ಅಧಿಕಾರಿ ಕಛೇರಿಯಲ್ಲಿ ಅರ್ಜಿ ಸಲ್ಲಿಸಬಹುದೆಂದು ತಿಳಿಸಿದರು.
ಬೇಸಿಗೆ ಕಾಲ ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಮಿಯಾವಾಕಿ ಅರಣ್ಯದಲ್ಲಿ ನೆಟ್ಟಿರುವ ಸಸಿಗಳಿಗೆ ಜಲಮಂಡಳಿಯ ಸಂಸ್ಕರಣಾ ನೀರನ್ನು ಟ್ಯಾಂಕರ್ ಗಳ ಮೂಲಕ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಯಿತು. ಜೊತೆಗೆ ರಾಯಲ್ ರೆಸಿಡೆನ್ಸಿ ಪಾರ್ಕ್ ಗೆ ತ್ವರಿತವಾಗಿ ಫೆನ್ಸಿಂಗ್ ಮಾಡಲು ಸೂಚಿಸಲಾಯಿತು.
ಬೊಮ್ಮನಹಳ್ಳಿ ವಲಯ ವ್ಯಾಪ್ತಿಯಲ್ಲಿ ಬರುವ ಪ್ರಮುಖ ರಸ್ತೆ, ವಾರ್ಡ್ ರಸ್ತೆಗಳಲ್ಲಿ ಬರುವ ರಸ್ತೆ ಗುಂಡಿಗಳನ್ನು ತ್ವರಿತಗತಿಯಲ್ಲಿ ಮುಚ್ಚಲು ಸೂಚಿಸಲಾಯಿತು. ಅದಕ್ಕೆ ಮುಖ್ಯ ಅಭಿಯಂತರರು ಪ್ರತಿಕ್ರಿಯಿಸಿ 15 ದಿನಗಳ ಒಳಗಾಗಿ ರಸ್ತೆ ಗುಂಡಿಗಳನ್ನು ಮುಚ್ಚುವುದಾಗಿ ತಿಳಿಸಿದರು. ಹೊಂಗಸಂದ್ರ ಮೆಟ್ರೋ ನಿಲ್ದಾಣದ ಬಳಿ ರಾಜಕಾಲುವೆ ಕಾಮಗಾರಿ ಕುರಿತಂತೆ ಸ್ಥಳ ಪರಿಶೀಲಿಸಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಜೊತೆ ಸಮನ್ವಯ ಸಾಧಿಸಿ ಕಾಮಗಾರಿ ಕೈಗೆತ್ತಿಕೊಂಡು ಶೀಘ್ರ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಾರ್ವಜನಿಕರಿಂದ ಸ್ವೀಕರಿಸಿದ ಪ್ರಮುಖ ಅಹವಾಲುಗಳು:
1. ಕೆಎಸ್‌ಟಿಡಿಸಿ ಸಂಸ್ಕರಣಾ ಘಟಕದ ಬಳಿ ದುರ್ವಾಸನೆ ಹೆಚ್ಚಾಗಿದ್ದು, ಆ ಸಮಸ್ಯೆಯನ್ನು ಬಗೆಹರಿಸಲು ಮನವಿ.
2. ಹೊಸ ಖಾತಾ ಪಡೆಯಲು ಸಮಸ್ಯೆಯಾಗುತ್ತಿದ್ದು, ತ್ವರಿತವಾಗಿ ಇಖಾತಾ ಸಿಗುವಂತೆ ಮಾಡಲು ಮನವಿ.
3. ಹುಳಿಮಾವಿನ ಸೋಮೇಶ್ವರ ಬಡಾವಣೆ ಬಳಿ ಚರಂಡಿಯಲ್ಲಿ ನೀರು ನಿಲ್ಲುತ್ತಿರುವ ಕಾರಣ ಸ್ಥಳೀಯ ನಿವಾಸಿಗಳಿಗೆ ಸಮಸ್ಯೆಯಾಗುತ್ತಿದ್ದು, ಅದನ್ನು ಬಗೆಹರಿಸಲು ಮನವಿ.
4. ಇಬ್ಬಲೂರು ಕೆರೆಯಲ್ಲಿ ಒತ್ತುವರಿಯಾಗಿದ್ದು, ಅದನ್ನು ತೆರವುಗೊಳಿಸಲು ಮನವಿ.
5. ಗುಂಡುತೋಪಿನ ಡಾನ್ ಭಾಸ್ಕೋ ಬಳಿಯ ರಸ್ತೆಯುದ್ದಕ್ಕೂ ಕಸ ಬಿಸಾಡುತ್ತಿದ್ದು, ಅದನ್ನು ಕೂಡಲೆ ತೆರವುಗೊಳಿಸಲು ಮನವಿ.
6. ಮಂಗಮ್ಮನ ಪಾಳ್ಯದ ಬಳಿ ರಾಜಕಾಲುವೆಯಲ್ಲಿ ಹೂಳೆತ್ತಲು ಮನವಿ.
ಈ ವೇಳೆ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಸತೀಶ್ ರೆಡ್ಡಿ, ವಲಯ ಆಯುಕ್ತರಾದ ರಮ್ಯಾ, ವಲಯ ಜಂಟಿ ಆಯುಕ್ತರಾದ ಅಜಿತ್, ಉಪ ಆಯುಕ್ತರಾದ ಡಿ.ಕೆ ಬಾಬು, ಮುಖ್ಯ ಅಭಿಯಂತರರಾದ ಶಶಿಕುಮಾರ್ ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.