ಶಿವಮೊಗ್ಗ: ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಅಗತ್ಯವಾದ ಮೂಲಭೂತ ಸೌಕರ್ಯ, ಹುದ್ದೆ ಭರ್ತಿ, ಅಭಿವೃದ್ದಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಸೂಕ್ತ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರಾದ ಡಾ.ಶರಣಪ್ರಕಾಶ ಆರ್ ಪಾಟೀಲ ಅಧಿಕಾರಿಗಳಿಗೆ ತಿಳಿಸಿದರು.
ಇಂದು ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು ಸಂಸ್ಥೆಯ ಅಭಿವೃದ್ದಿಗೆ ಪೂರಕವಾಗಿ ಅಧಿಕಾರಿ/ಸಿಬ್ಬಂದಿ ಕಾರ್ಯ ನಿರ್ವಹಿಸುವಂತೆ ತಿಳಿಸಿದರು. ರೇಡಿಯೋಲಜಿಸ್ಟ್ ಹುದ್ದೆಗೆ ಅರ್ಜಿ ಕರೆದು ನೇಮಕ ಮಾಡಬೇಕು. ಪಿಜಿ ನರ್ಸಿಂಗ್ ವಿದ್ಯಾರ್ಥಿನಿಲಯಕ್ಕೆ ಪ್ರಸ್ತಾವನೆ ಕಳುಹಿಸಿ, ಆಸ್ಪತ್ರೆಯಲ್ಲಿ ಆಂಕೋಸರ್ಜನ್, ನ್ಯೂರೋಸರ್ಜನ್, ನ್ಯೂರಾಲಜಿಸ್ಟ್‍ಗಳಿದ್ದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ನೇಮಕ ಮಾಡಿಕೊಂಡು ಸೇವೆ ಒದಗಿಸಲು ತಿಳಿಸಿದರು.
ಖಾಲಿ ಹುದ್ದೆ ಭರ್ತಿಗೆ ಡಿಪಿಸಿ ಸಿದ್ದಪಡಿಸಿ ಹುದ್ದೆಗಳ ಭರ್ತಿಗೆ ಕ್ರಮ ವಹಿಸಬೇಕು ಎಂದ ಅವರು ಆರೋಗ್ಯ ಇಲಾಖೆಯ ಖಾಲಿ ಹುದ್ದೆಗಳನ್ನು ಡಿಸಿ ಹಾಗೂ ಸಿಇಓ ಅರ್ಜಿ ಆಹ್ವಾನಿಸಿ ತುಂಬಲು ಸೂಚಿಸಿದರು ಮಲೆನಾಡಿನ ಹಲವು ಪಿಹೆಚ್‍ಸಿಗಳಲ್ಲಿ ವೈದ್ಯರಿಲ್ಲ. ತುಮರಿ, ಬ್ಯಾಕೋಡು ಸೇರಿದಂತೆ ಸಾಗರದ ಮೂರು ಪಿಹೆಚ್‍ಸಿ ಯಲ್ಲಿ ವೈದ್ಯರಿಲ್ಲದೆ ತುಂಬಾ ತೊಂದರೆಯಾಗುತ್ತಿದೆ ಎಂದು ತಿಳಿದು ಬಂದಿದ್ದು, ಇಲ್ಲಿಗೆ ವೈದ್ಯರನ್ನು ನೇಮಿಸಲು ಕ್ರಮ ವಹಿಸಬೇಕು. ಹಾಗೂ ಮೆಗ್ಗಾನ್ ಆಸ್ಪತ್ರೆಯ ಖಾಲಿ ಹುದ್ದೆ ಭರ್ತಿ ಸಂಬಂಧ ಕಡತ ಸಿದ್ದಪಡಿಸಿ ಸರ್ಕಾಕ್ಕೆ ಸಲ್ಲಿಸುವಂತೆ ತಿಳಿಸಿದರು.
ಸಂಸ್ಥೆಯಲ್ಲಿ ಡಿ ಗ್ರೂಪ್ ಮತ್ತು ಸ್ಕ್ಯಾವೆಂಜರ್ ನಡುವಿನ ವೇತನ ವ್ಯತ್ಯಾಸಕ್ಕೆ ಸಂಬಂಧಿಸಿಂತೆ ಕಾರ್ಮಿಕ ಇಲಾಖೆ ಅಧಿಕಾರಿಗಳೊಂದಿಗೆ ಪರಿಶೀಲಿಸಿ ಸಮಸ್ಯೆ ಬಗೆಹರಿಸುವಂತೆ ಡಿಸಿ ಗೆ ಸೂಚನೆ ನೀಡಿದ ಅವರು ಕಾರ್ಮಿಕರ ಹಿತಾಸಕ್ತಿಯನ್ನು ಕಾಪಾಡಬೇಕು. ಅವರಿಗೆ ನಿಗದಿಯಾದ ವೇತನ ಭತ್ಯೆಗಳನ್ನು ಸರಿಯಾಗಿ ಪಾವತಿಯಾಗುತ್ತಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು ಎಂದರು. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮಂಜೂರಾದ ತಜ್ಞ ವೈದ್ಯರು ಸೇರಿದಂತೆ ಇತರೆ ಹುದ್ದೆಗಳನ್ನು ತುಂಬಲು ಸೂಕ್ತ ಕ್ರಮ ಕೈಗೊಳ್ಳಬೇಕು. ಹಾಗೂ ಆಸ್ಪತ್ರೆಗೆ ಅಗತ್ಯವಾದ ಉಪಕರಣ ಇತರೆ ಬೇಡಿಕೆಗಳ ಪ್ರಸ್ತಾವನೆ ಸಲ್ಲಿಸುವಂತ ತಿಳಿಸಿದರು.
ಸಚಿವರು, ಯೂಸರ್ ಚಾರ್ಜಸ್, ಎಬಿಎಆರ್‍ಕೆ ಮೊತ್ತಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಗುರಿ ನಿಗದಿಪಡಿಸಿಕೊಂಡು ಗುರಿ ಸಾಧಸಬೇಕು. ಡಿಎಂಇ ಯವರು ನಿಯಮಿತವಾಗಿ ಖರ್ಚುವೆಚ್ಚದ ಕುರಿತು ಪರಿಶೀಲಿಸಬೇಕು. ಓಬಿಜಿ, ಮಕ್ಕಳ ವಿಭಾಗ, ಔಷಧಿ ಖರೀದಿ ಸೇರಿದಂತೆ ಸಂಸ್ಥೆಯಲ್ಲಿ ನಡೆಯುತ್ತಿರುವ ವಿವಿಧ ಕಟ್ಟಡ ಮತ್ತಿತರೆ ಕಾಮಗಾರಿಗಳನ್ನು ಸೂಕ್ತವಾಗಿ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು ಕಾಲೇಜಿನ ವಿವಿಧ ವಿಭಾಗಳ ಮುಖ್ಯಸ್ಥರೊಂದಿಗೆ ಮಾತನಾಡಿದರು. ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ಮಾತನಾಡಿ, ಇಡೀ ಆಸ್ಪತ್ರೆಯ ಲೆಕ್ಕಪತ್ರವನ್ನು ಉತ್ತಮವಾಗಿ ನಿರ್ವಹಿಸಬೇಕು. ಜೊತೆಗೆ ವಾರ್ಷಿಕ ಆದಾಯದ ಕುರಿತು ಗುರಿ ನಿಗದಿಪಡಿಸಿ ಅಭಿವೃದ್ದಿ ನಿಟ್ಟಿನಲ್ಲಿ ಕೆಲಸ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಶಾಸಕರಾದ ಬೇಳೂರು ಗೋಪಾಲಕೃಷ್ಣ, ಡಿಎಂಇ ಸುಜಾತಾ ರಾಥೋಡ್, ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಿಥುನ್ ಕುಮಾರ್, ಸಿಮ್ಸ್ ನಿರ್ದೇಶಕ ಡಾ.ವಿರೂಪಾಕ್ಷಪ್ಪ, ವೈದ್ಯಕೀಯ ಅಧೀಕ್ಷಕ ಡಾ.ತಿಮ್ಮಪ್ಪ, ವಿವಿಧ ವಿಭಾಗಗಳ ಮುಖ್ಯಸ್ಥರು, ಹಾಜರಿದ್ದರು.