ಮೈಸೂರು: ಮಾರ್ಗಶಿರ ಮಾಸದ ಶುಕ್ಲ ಪಕ್ಷದ ಷಷ್ಠಿ ತಿಥಿಯನ್ನು ಚಂಪಾ(ಸ್ಕಂದ) ಷಷ್ಠಿ ಎಂದು ಕರೆಯಲಾಗುತ್ತದೆ. ಇದು ಸುಬ್ರಹ್ಮಣ್ಯನಿಗೆ ಪ್ರಿಯವಾದ ದಿನವಾಗಿದೆ. ಈ ದಿನ ಸುಬ್ರಹ್ಮಣ್ಯ ಸ್ವಾಮಿಯನ್ನು ವಿಗ್ರಹ ರೂಪದಲ್ಲಿ, ನಾಗನ ರೂಪದಲ್ಲಿ ಅಥವಾ ಹುತ್ತದ ರೂಪದಲ್ಲಿ ಪೂಜಿಸಲಾಗುತ್ತದೆ. ಈ ಆರಾಧನೆಯು ಸಂತಾನ ಪ್ರಾಪ್ತಿಗಾಗಿ, ಕುಜದೋಷ ನಿವಾರಣೆಗಾಗಿ ವಿಶೇಷವಾಗಿ ಆಚರಿಸಲ್ಪಡುತ್ತದೆ. ಭಾರತದಾದ್ಯಂತ ಈ ಚಂಪಾ ಷಷ್ಠಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಕುಕ್ಕೆ ಸುಬ್ರಹ್ಮಣ್ಯ, ಘಾಟಿ ಸುಬ್ರಹ್ಮಣ್ಯ ಮತ್ತು ಆಂಧ್ರದಲ್ಲಿರುವ ಕಾಳಹಸ್ತಿಯಂತಹ ಕ್ಷೇತ್ರಗಳು ಸುಬ್ರಹ್ಮಣ್ಯನ ಆರಾಧನೆಗೆ ಪ್ರಸಿದ್ಧವಾಗಿವೆ.
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿಯೂ ಚಂಪಾಷಷ್ಠಿಯನ್ನು ಭಕ್ತರು ಶ್ರದ್ಧಾಭಕ್ತಿಯಿಂದ ಆಚರಿಸಿದರು. ಜಯನಗರ ರೈಲ್ವೆ ಗೇಟ್ ಬಳಿ ಇರುವ ದೊಡ್ಡ ಸುಬ್ರಮಣ್ಯೇಶ್ವರ ಗುಡಿಗೆ ಮುಂಜಾನೆಯಿಂದಲೇ ತೆರಳಿದ ಭಕ್ತರು ನಾರಿಕೇಳ ಅಭಿಷೇಕ, ಕ್ಷೀರಾಭಿಷೇಕ ನಡೆಸಿ ದೀಪ, ಧೂಪದ ಆರತಿಗಳನ್ನು ಬೆಳಗಿ ಭಕ್ತಿಭಾವದಿಂದ ಪೂಜೆ ಸಲ್ಲಿಸಿದರು.
ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿರುವ ಸಿದ್ದಲಿಂಗಪುರದ ಪ್ರಸಿದ್ಧ ಶ್ರೀ ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇವಸ್ಥಾನದಲ್ಲಿಯೂ ಸುಬ್ರಹ್ಮಣ್ಯ ಷಷ್ಠಿಯ ಪ್ರಯುಕ್ತ ವಿಶೇಷ ಪೂಜೆ ನಡೆಯಿತು. ಸಹಸ್ರಾರು ಭಕ್ತರು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದು ಪ್ರಸನ್ನರಾದರು.



