ಚಿಕ್ಕಬಳ್ಳಾಪುರ: ಯಾವುದೇ ಶಾಲೆಯ ಮಕ್ಕಳು ಓದಿನ ವಿಚಾರದಲ್ಲಿ ಹೆತ್ತವರಿಗೆ ತಲೆ ನೋವಾಗ ಬಾರದು ಹಾಗೂ ಗುರು ಹಿರಿಯರ ಮಾರ್ಗದರ್ಶನದಲ್ಲಿ ಮುನ್ನಡೆದರೆ ಯಶಸ್ಸು ನಿಮ್ಮದಾಗಲಿದೆ ಎಂದು ಧ್ಯಾನೋಪಾಸಕ ಅನಂತ್ ಭಟ್ ತಿಳಿಸಿದರು.
ನಗರದ ಕನ್ನಡ ಭವನದಲ್ಲಿ ನಡೆದ ಬ್ರೈಟ್ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಶಾಲೆ ಯಾವುದೇ ಆಗಲಿ, ಪರಿಸ್ಥಿಗಳು ಹೇಗೆ ಇರಲಿ ವಿದ್ಯಾರ್ಥಿಗಳು ಓದಿನ ವಿಷಯದಲ್ಲಿ ಮಾತ್ರ ತಂದೆ-ತಾಯಿಗೆ ಆಘಾತ ತರಬಾರದು ಎಂದು ಸಲಹೆ ನೀಡಿದರು ಅಲ್ಲದೆ ಶಾಲಾ-ಕಾಲೇಜುಗಳಲ್ಲಿ ಶಿಕ್ಷಣವು ಸಂತೋಷದಿಂದ ಕೂಡಿರಬೇಕೇ ವಿನಃ ಅಂಕಗಳಿಗಾಗಿ ಆತ್ಮಹತ್ಯೆಯಂತಹ ದುಷ್ಪರಿಣಾಮ ಗಳಿಗೆ ದಾರಿ ಮಾಡಿಕೊಡುವಂತಿರಬಾರದು ಎಂದು ತಿಳಿಸಿದರು.
ವಿದ್ಯಾಭ್ಯಾಸದ ಅವಧಿಯಲ್ಲಿ ವಿದ್ಯಾರ್ಥಿ ಮನಸ್ಸಿನಲ್ಲಿ ಶರಣಾಗತ ಭಾವ, ಭಾವಶುದ್ಧಿ ಮತ್ತು ಅರ್ಪಣಾ ಭಾವ ಇದ್ದಲ್ಲಿ ಯಶಸ್ಸು ಖಚಿತವಾಗುತ್ತದೆ. ಉತ್ತಮ ಅಂಕಗಳನ್ನು ಪಡೆದು ಬ್ರೈಟ್ ಶಾಲೆಗೆ ಗೌರವ ತರುತ್ತೇನೆ ಎಂಬ ಸಂಕಲ್ಪದೊಂದಿಗೆ ವಿದ್ಯಾರ್ಥಿಗಳು ಮುಂದುವರಿಯಬೇಕು. ಅಂಕಗಳೇ ವಿದ್ಯಾರ್ಥಿ ಜೀವನದ ಅಂತಿಮ ಸತ್ಯವಲ್ಲ ಎಂದು ಕರೆ ನೀಡಿದರು.
ಬಳಿಕ ಖಾಸಗಿ ಶಾಲೆಗಳ ಸಂಘದ ಪ್ರಧಾನ ಕಾರ್ಯದರ್ಶಿ ಮಹಮದ್ ತಮೀಮ್ ಮಾತನಾಡಿ, ಕೇವಲ 65 ಮಕ್ಕಳಿಂದ ಆರಂಭವಾದ ಬ್ರೈಟ್ ಶಾಲೆಯನ್ನು 500 ಮಕ್ಕಳ ಮಟ್ಟಕ್ಕೆ ತಲುಪಿಸುವುದು ಸುಲಭದ ಕೆಲಸವಲ್ಲ. ಶಾಲೆ ನಡೆಸುವುದು ಅತ್ಯಂತ ಕಷ್ಟಕರವಾದ ಕಾರ್ಯ ಎಂದು ಹೇಳಿದರು.
ಮುಂದುವರೆದು, ಚಿಕ್ಕಬಳ್ಳಾಪುರ ತಾಲೂಕಿನಲ್ಲಿ 42 ಖಾಸಗಿ ಶಾಲೆಗಳಿದ್ದು, ಜಿಲ್ಲೆಯಲ್ಲಿ ಒಟ್ಟು 242 ಶಾಲೆಗಳಿವೆ. ಪೋಷಕರು ಗುರುಗಳು ಮತ್ತು ಶಾಲೆಯನ್ನು ನಂಬಿ ಮಕ್ಕಳನ್ನು ಸೇರಿಸಬೇಕು. ಕೇವಲ ಶುಲ್ಕದ ಲೆಕ್ಕದಲ್ಲಿ ಶಾಲೆಯನ್ನು ಅಳೆಯಬಾರದು ಎಂದು ಮನವಿ ಮಾಡಿದರು.
ಪ್ರತಿಯೊಂದು ಮಗುವಿನಲ್ಲಿಯೂ ವಿಶೇಷ ಪ್ರತಿಭೆ ಅಡಗಿದ್ದು, ಅದನ್ನು ಹೊರ ತೆಗೆಯುವ ಕಾರ್ಯ ವನ್ನು ಶಿಕ್ಷಕರು ಮಾಡುತ್ತಿದ್ದಾರೆ. ಜೊತೆಗೆ ಮನೆಯ ವಾತಾವರಣವೂ ಮಕ್ಕಳ ಕಲಿಕೆಯ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಪೋಷಕರು ಮಕ್ಕಳ ಮಾತನ್ನಷ್ಟೇ ನಂಬುವ ಬದಲು ಶಿಕ್ಷಕರನ್ನು ಗೌರವಿಸಬೇಕು. ಯಾವುದೇ ಕಾರಣಕ್ಕೂ ಮಕ್ಕಳ ಮುಂದೆ ಶಿಕ್ಷಕರನ್ನು ನಿಂದಿಸಬಾರದು ಎಂದು ಕಿವಿಮಾತು ಹೇಳಿದರು.
ನಂತರ ಶಾಲೆಯ ಸಂಸ್ಥಾಪಕ ಸಾಕಿಬ್ ಪಾಷ ಮಾತನಾಡಿ, ಬ್ರೈಟ್ ಶಾಲಾ ವಾರ್ಷಿಕೋತ್ಸವದ ಅಂಗವಾಗಿ ನಡೆದ ನೈಟ್ ಉತ್ಸವದಲ್ಲಿ ನಿಂತು ಮಾತನಾಡುತ್ತಿರುವುದು ನನಗೆ ಅಪಾರ ಸಂತೋಷ ತಂದಿದೆ ಎಂದರು.
ಶಿಕ್ಷಣವು ಸಂತೋಷಕರವಾಗಿಯೂ ಅರ್ಥಪೂರ್ಣವಾಗಿಯೂ ಇರಬೇಕು. ಶಿಕ್ಷಣದ ಜೊತೆಗೆ ಮೌಲ್ಯ ಗಳನ್ನು ಕಲಿಸುವ ಕಾರ್ಯವನ್ನು ನಮ್ಮ ಶಾಲೆ ಮಾಡುತ್ತಿದೆ. ಶಿಕ್ಷಕರು ದೇಶ ಕಟ್ಟುವ ಸೇನಾನಿಗಳು. ಅವರ ಮೇಲೆ ವಿಶ್ವಾಸ ಇಟ್ಟಲ್ಲಿ ಮಕ್ಕಳ ಬೆಳವಣಿಗೆ ಇನ್ನಷ್ಟು ಉತ್ತಮವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಮೂಡಿ ಬಂದ ಹತ್ತಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಪೋಷಕರು ಮತ್ತು ಅತಿಥಿಗಳ ಮನಸೂರೆಗೊಂಡವು. ಇದೇ ವೇಳೆ ಸಾಧಕರನ್ನು ಸನ್ಮಾನಿಸ ಲಾಯಿತು. ಶಿವಕುಮಾರ್, ಮಧುಸೂದನ ನಾಯಕ್, ಮಹಮದ್ ತಮೀಮ್, ಹಿನಾ ಕೌಸರ್, ಸಾಕಿಬ್ ಪಾಷಾ, ಚಾಂದ್ ಪಾಷಾ, ರುಕ್ಸಾನಾ, ನಗೀನಾ ತಾಜ್, ರಹಿನಾ ಕೌಸರ್, ಸಾದಿಯಾ ತಾಜೀನ್, ಪವಿತ್ರ, ಶರ್ಮಿಳಾ, ಗಂಗಾಧರ್, ಚಂದ್ರಶೇಖರ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.



