Monday, April 21, 2025
Google search engine

Homeಸ್ಥಳೀಯಕಠಿಣ ಪರಿಶ್ರಮದಿಂದ ಮಾತ್ರ ಯಶಸ್ಸು ಸಾಧ್ಯ

ಕಠಿಣ ಪರಿಶ್ರಮದಿಂದ ಮಾತ್ರ ಯಶಸ್ಸು ಸಾಧ್ಯ


ಮೈಸೂರು: ಮಾನಸಿಕ ಸಿದ್ಧತೆ, ಕಠಿಣ ಪರಿಶ್ರಮ ಇದ್ದಲ್ಲಿ ಉದ್ಯಮಶೀಲತೆ ಸೇರಿದಂತೆ ಯಾವುದೇ ಕ್ಷೇತ್ರದಲ್ಲಿ ಬೇಕಾದರೂ ಯಶಸ್ವಿಯಾಗಬಹುದು ಎಂದು ಇಂಡಿಯಾ ಅಸೋಸಿಯೇಷನ್ ಆಫ್ ಅಮೆರಿಕಾ ಅಧ್ಯಕ್ಷ ಸತೀಶ್ ನಂಜಪ್ಪ ತಿಳಿಸಿದರು.
ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟದ ಭರವಸೆ ಕೋಶ (ಐಕ್ಯುಎಸಿ), ಕನ್ನಡ ಮತ್ತು ಇಂಗ್ಲಿಷ್ ವಿಭಾಗ, ಜನಪರ ಸಾಹಿತ್ಯ ಪರಿಷತ್ತು ವತಿಯಿಂದ ಶನಿವಾರ ಏರ್ಪಡಿಸಿದ್ದ ವಿಶೇಷ ಉಪನ್ಯಾಸದಲ್ಲಿ ವಿಜ್ಞಾನ ಕ್ಷೇತ್ರದಲ್ಲಿ ಮಹಿಳಾ ಉದ್ಯಮಶೀಲತೆ ಕುರಿತು ಮಾತನಾಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಅವರು, ಬೇರೆಯವರು ಏನೇ ಸಲಹೆ- ಸಹಕಾರ ಕೊಡಬಹುದು. ಆದರೆ ಅಂತಿಮ ನಿರ್ಧಾರ ನಮ್ಮದೇ ಆಗಿರುತ್ತದೆ. ಆದ್ದರಿಂದ ಒಳಿತು- ಕೆಡಕುಗಳ ಬಗ್ಗೆ ಯೋಚಿಸಿ ತೀರ್ಮಾನ ಮಾಡಬೇಕು ಎಂದರು.
ಹಣ, ಉದ್ಯೋಗ ಸಂಪಾದನೆ ಮಾಡಬೇಕಾದರೆ ಜ್ಞಾನ ಬೇಕು. ಅದಕ್ಕಾಗಿ ವಿದ್ಯಾರ್ಥಿನಿಯರು ಗುಂಪು ಚರ್ಚೆಯಲ್ಲಿ ತೊಡಗಬೇಕು. ಸಂದೇಹ ಬಂದ ವಿಷಯಗಳ ಬಗ್ಗೆ ಅಧ್ಯಾಪಕರ ಬಳಿ ಚರ್ಚಿಸಬೇಕು ಎಂದು ಸಲಹೆ ನೀಡಿದರು.
ನದಿ ಒಂದು ಸಮನಾಗಿ ಹರಿಯುತ್ತಿರುತ್ತದೆ. ಅದರ ಗುರಿ ಸಮುದ್ರ ಸೇರುವುದೇ ಆಗಿರುತ್ತದೆ. ಅದೇ ರೀತಿ ವಿದ್ಯಾರ್ಥಿನಿಯರ ಸಾಧನೆಗೆ ಚಿಂತನಾಲಹರಿ ಮುಖ್ಯವಾಗುತ್ತದೆ. ಮಹಿಳೆಯರಲ್ಲಿ ಗಟ್ಟಿತನ ಇದ್ದರೆ ಮಾತ್ರ ಏನಾದರೂ ಸಾಧಿಸಲು ಸಾಧ್ಯವಾಗುತ್ತದೆ ಎಂದು ಅವರು ಪೆಪ್ಸಿ ಕಂಪನಿ ಸಿಇಒ ಇಂದಿರಾ ನೂಯಿ ಅವರು ಕಥೆಯ ಮೂಲಕ ವಿವರಿಸಿದರು.
ಭಾರತ ಅದರಲ್ಲೂ ಕರ್ನಾಟಕ ಐಟಿ-ಬಿಟಿ ಕ್ಷೇತ್ರದಲ್ಲಿ ಹೆಸರು ಮಾಡಿದೆ. ಐಟಿ ಎಂದರೇ ಇನ್ಪೋಸಿಸ್‌ನ ಎನ್.ಆರ್.ನಾರಾಯಣಮೂರ್ತಿ, ಬಿಟಿ ಎಂದರೇ ಕಿರಣ್ ಮಂಜುಂದಾರ್ ಅವರ ಹೆಸರು ಪ್ರಸ್ತಾಪವಾಗುತ್ತದೆ ಎಂದರು.
ಮೊದಲೆಲ್ಲಾ ಅಮೆರಿಕಾ ವೀಸಾ ಪಡೆಯಲು ಚೆನ್ನೈ, ಹೈದ್ರಾಬಾದ್, ಮುಂಬೈ ಇಲ್ಲವೇ ದೆಹಲಿಗೆ ಹೋಗಬೇಕಿತ್ತು. ಈಗ ನಮ್ಮ ಒಕ್ಕೂಟದ ಮನವಿ ಮೇರೆಗೆ ಬೆಂಗಳೂರಿನಲ್ಲಿಯೇ ವೀಸಾ ಕಚೇರಿ ತೆರೆಯಲು ಅಮೆರಿಕಾ ಸಮ್ಮಿತಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಾ ಭೇಟಿ ಕಾಲಕ್ಕೆ ಇದನ್ನು ಪ್ರಕಟಿಸಲಾಗಿದೆ ಎಂದರು.
ಮೈಸೂರು ವಿವಿ ಅಂಕಿ ಅಂಶಗಳ ಘಟಕದ ನೋಡಲ್ ಅಧಿಕಾರಿ ಪ್ರೊ.ಬಸಪ್ಪ ಮಾತನಾಡಿ, ವಿಜ್ಞಾನ ಪದವಿ ಮಾಡಿದವರು ಮುಂದೆ ಸ್ನಾತಕೋತ್ತರ ಪದವಿ, ಪಿಎಚ್.ಡಿ ಮಾಡಬಹುದು. ಸರ್ಕಾರದಿಂದ ಮಹಿಳಾ ಉದ್ಯಮಿಗಳಿಗೆ ಸಾಕಷ್ಟು ಸೌಲಭ್ಯಗಳು ದೊರೆಯುತ್ತದೆ. ಅದನ್ನು ಬಳಸಿಕೊಂಡು ಮುಂದೆ ಬರಬೇಕು ಎಂದು ಕರೆ ನೀಡಿದರು.
ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಕಿರಣ್ ಮಜುಮ್‌ದಾರ್ ಅವರ ಸಾಧನೆಯನ್ನು ವಿವರಿಸಿದ ಅವರು, ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು.
ಪ್ರಾಂಶುಪಾಲ ಡಾ.ಡಿ.ರವಿ ಮಾತನಾಡಿ, ೩೫೦೦ ವಿದ್ಯಾರ್ಥಿನಿಯರು ಇರುವ ಈ ಕಾಲೇಜಿನಲ್ಲಿ ಮಹಿಳಾ ಉದ್ಯಮಶೀಲತೆಯ ಬಗ್ಗೆ ಅಮೆರಿಕಾದಲ್ಲಿರುವ ಸತೀಶ್ ನಂಜಪ್ಪ ಹಾಗೂ ಜಾಗತಿಕ ಮಟ್ಟದಲ್ಲಿ ವಿಜ್ಞಾನಿಯಾಗಿ ಹೆಸರು ಮಾಡಿರುವ ಪ್ರೊ.ಬಸಪ್ಪ ಅವರೊಂದಿಗೆ ಸಂವಾದಿಸುವ ಅವಕಾಶ ಕೆಲವರಿಗೆ ದೊರೆತಿದೆ. ಅದೃಷ್ಟ ಎಂದರೇ ಇದೆ. ಇದನ್ನೇ ಅವಕಾಶವಾಗಿ ಬಳಸಿಕೊಂಡು ಭವಿಷ್ಯದಲ್ಲಿ ಮುಂದೆ ಬರಬೇಕು ಎಂದರು.
ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಜನಪರ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎಂ. ಮಹೇಶ ಚಿಕ್ಕಲ್ಲೂರು ಮಾತನಾಡಿದರು.
ಐಕ್ಯುಎಸಿ ಸಂಚಾಲಕ ವಿ.ನಂದಕುಮಾರ್, ಕನ್ನಡ ವಿಭಾಗದ ಮುಖ್ಯಸ್ಥ ಡಾ.ಸಿ.ಎಸ್.ಕೆಂಡಗಣ್ಣೇಗೌಡ, ಪ್ರಾಧ್ಯಾಪಕ ಡಾ.ಎಚ್.ಜೆ.ಭೀಮೇಶ್, ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಗೋವಿಂದರಾಜು, ಕಾವ್ಯಾ ಎಂ.ಕಟ್ಟಿ, ದರ್ಶಿನಿ ಭೂಮಿಕಾ ಕುಂಬಾರ್, ಡಾ.ಕೆ.ಸಿದ್ದರಾಜು, ಪರಶುರಾಮಮೂರ್ತಿ, ನಾಗೇಂದ್ರಕುಮಾರ್ ಮೊದಲಾದವರು ಇದ್ದರು.

RELATED ARTICLES
- Advertisment -
Google search engine

Most Popular