ಹೊಸದಿಲ್ಲಿ: ಯುವಜನರ ಸಾಮರ್ಥ್ಯವು ದೇಶದ ಸಾಮರ್ಥ್ಯವಾಗಿದ್ದು, ಅವರ ಯಶಸ್ಸು ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ವಿಕಸಿತ ಭಾರತ ಯುವ ನಾಯಕರ ಸಂವಾದ 2026ರ ಸಮಾರೋಪ ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು, ಯುವಜನರ ಮೇಲೆ ತಮಗೆ ಅಪಾರ ನಂಬಿಕೆ ಇದೆ ಎಂದು ಹೇಳಿದರು.
ನಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಮತ್ತು ಈಗ ದೇಶದ ಪ್ರಧಾನಿಯಾಗಿರುವಾಗ, ನಮ್ಮ ಯುವ ಜನತೆಯ ಮೇಲೆ ಅಪಾರ ನಂಬಿಕೆ ಮತ್ತು ಭರವಸೆಗಳನ್ನು ವ್ಯಕ್ತಪಡಿಸಿದ್ದೇನೆ. ದೇಶದ ಯುವ ಸಮುದಾಯ ದೇಶದ ಅಭಿವೃದ್ಧಿಯಲ್ಲಿ ತಮ್ಮದೇ ಆದ ಕೊಡುಗೆ ನೀಡುತ್ತದೆ ಎಂದು ನಾನು ಆರಂಭದಿಂದಲೂ ನಂಬಿದ್ದೇನೆ ಎಂದು ಪ್ರಧಾನಿ ಮೋದಿ ಹೇಳಿದರು.
ಸ್ವಾಮಿ ವಿವೇಕಾನಂದರ ಜನ್ಮ ವಾರ್ಷಿಕೋತ್ಸವದಂದು ಅವರ ಕೊಡುಗೆಗಳನ್ನು ಸ್ಮರಿಸಿದ ಪ್ರಧಾನಿ ಮೋದಿ, ಪ್ರತಿ ವರ್ಷ ಜನವರಿ 12 ರಂದು, ಸ್ವಾಮಿ ವಿವೇಕಾನಂದರ ಗೌರವಾರ್ಥವಾಗಿ ನಾವು ರಾಷ್ಟ್ರೀಯ ಯುವ ದಿನವನ್ನು ಆಚರಿಸುತ್ತೇವೆ. ಅವರ ಜೀವನ ಮತ್ತು ಬೋಧನೆಗಳು ನಮಗೆ ಸ್ಫೂರ್ತಿ ನೀಡುತ್ತಲೇ ಇರುತ್ತವೆ. ವಿಕಸಿತ ಭಾರತ ಯುವ ನಾಯಕರ ಸಂವಾದಕ್ಕೂ ವಿವೇಕಾನಂದ ಅವರೇ ಪ್ರೇರಣೆ ಎಂದರು.
ನಾವು ಸ್ವಾತಂತ್ರ್ಯದ 100 ವರ್ಷಗಳನ್ನು ಪೂರ್ಣಗೊಳಿಸುವ 2047ರ ಪ್ರಯಾಣವು ಭಾರತಕ್ಕೆ ಮುಖ್ಯವಾಗಿದ್ದು, ಇದು ನಿಮ್ಮ ಜೀವನದಲ್ಲಿಯೂ ಅತ್ಯಂತ ಮುಖ್ಯವಾದ ಸಮಯ. ಇದು ನಿಮಗೆ ಒಂದು ಸುವರ್ಣಾವಕಾಶ. ನಿಮ್ಮ ಸಾಮರ್ಥ್ಯವು ಭಾರತದ ಸಾಮರ್ಥ್ಯವಾಗುತ್ತದೆ. ನಿಮ್ಮ ಯಶಸ್ಸು ಭಾರತದ ಯಶಸ್ಸನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದು ಪ್ರಧಾನಿ ಮೋದಿ ಯುವಕರನ್ನುದ್ದೇಶಿಸಿ ಹೇಳಿದರು.
ಈಗ ಭಾರತದಲ್ಲಿ ಸ್ಟಾರ್ಟ್‌ಅಪ್ ಕ್ರಾಂತಿ ಆರಂಭವಾಗಿದ್ದು, ಯೋಜನೆಗಳ ಮೂಲಕ ದೇಶ ಕಟ್ಟುವ ಕಾರ್ಯದಲ್ಲಿ ಯುವಜನರ ಭಾಗವಹಿಸುವಿಕೆ ಹೆಚ್ಚಿದೆ ಎಂದು ಪ್ರಧಾನಿ ಮೋದಿ ಸಂತಸ ವ್ಯಕ್ತಪಡಿಸಿದರು. ವಿಕಸಿತ ಭಾರತ ಯುವ ನಾಯಕರ ಸಂವಾದ 2026 ರ ಅಂತಿಮ ದಿನದಂದು, ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡೆ ಮತ್ತು ಕಾರ್ಮಿಕ ಮತ್ತು ಉದ್ಯೋಗ ಸಚಿವ ಮನುಷ್ಕ್ ಮಾಂಡವಿಯಾ ಸಭೆಯನ್ನುದ್ದೇಶಿಸಿ ಮಾತನಾಡಿದರು.



