ತಾಂಡವಪುರ: ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ಚಿಕ್ಕಯ್ಯನ ಛತ್ರ ಹೋಬಳಿ ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ತಾಂಡವಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಗ್ರಾಮೇಕ್ಸ್ ಪೇಪರ್ ಮಿಲ್ ಕಂಪನಿ ಮಾಲೀಕರು ಏಕಾಏಕಿ ಕಂಪನಿಗೆ ಬೀಗ ಮುದ್ರೆ ಬಿದ್ದಿರುವುದರಿಂದ ಕಂಪನಿಯ ಕಾರ್ಮಿಕರು ಬೀದಿಗೆ ಬಿದ್ದಿರುವ ಘಟನೆ ವರದಿಯಾಗಿದೆ.
ಕಂಪನಿಯು ಕಳೆದ 21 ವರ್ಷಗಳಿಂದಲೂ ಉತ್ತಮ ಲಾಭದಲ್ಲಿ ನಡೆದುಕೊಂಡು ಬಂದಿದೆ ಕಂಪನಿಯಲ್ಲಿ ಕಾಯಂ ನೌಕರರು ಹಾಗೂ ಗುತ್ತಿಗೆ ನೌಕರರು ಸೇರಿದಂತೆ ಒಟ್ಟು 300ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದು ಕಂಪನಿ ಮಾಲಿಕರು ಕಳೆದ ಒಂದು ವರ್ಷದಿಂದ ನಮ್ಮ ಕಂಪನಿ ನಷ್ಟದಲ್ಲಿ ನಡೆಯುತ್ತಿದೆ ಎಂದು ಹೇಳುತ್ತಲೆ ಬಂದಿದ್ದು ಈ ಬಗ್ಗೆ ಸಂಬಂಧಪಟ್ಟ ಕಾರ್ಮಿಕ ಇಲಾಖೆಯಲ್ಲಿ ಸಭೆ ಕೂಡ ನಡೆದಿದ್ದು ಕಂಪನಿಯ ಮಾಲೀಕರು ಬೇಕು ಅಂತಾನೆ ಏಕಾಏಕಿ ಕಂಪನಿಗೆ ಬೀಗ ಜಡಿದಿರುವುದರಿಂದ ಕಂಪನಿಯ ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ.
ನಾವು ಯಾವುದೇ ಕಾರಣಕ್ಕೂ ಕಂಪನಿಯನ್ನು ಬೇರೆಯವರಿಗೆ ಮಾರಾಟ ಮಾಡಲು ಹಾಗೂ ಬೇರೆ ಕಾರ್ಮಿಕರು ಕಂಪನಿಯ ಒಳಗೆ ಕೆಲಸ ಮಾಡಲು ಬಿಡುವುದಿಲ್ಲ ಕಂಪನಿಯ ಕಾರ್ಮಿಕರಿಗೆ ಬರಬೇಕಾದ ಸೂಕ್ತ ಪರಿಹಾರವನ್ನು ಕೊಟ್ಟು ಕಂಪನಿಯ ಮಾಲೀಕರು ತಮ್ಮ ಕಂಪನಿಯನ್ನು ಬೇರೆಯವರಿಗೆ ಮಾರಾಟ ಮಾಡಲಿ ಅಥವಾ ಮುಚ್ಚಿಕೊಳ್ಳಲಿ ನಮ್ಮದೇನು ಅಭ್ಯಂತರವಿಲ್ಲ. ಕಂಪನಿಯ ಕಾರ್ಮಿಕರಿಗೆ ಸೂಕ್ತ ಪರಿಹಾರ ಕೊಡುವ ತನಕವು ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಕಾರ್ಮಿಕ ಮುಖಂಡ ಚಂದ್ರಶೇಖರ್ ಮೇಟಿ ಅವರು ತಿಳಿಸಿದರು.
ಕಾರ್ಮಿಕರು ಕಂಪನಿಯ ಮುಂದೆ ಧರಣಿ ಹೋರಾಟವನ್ನು ಇಂದಿನಿಂದಲೇ ಹಮ್ಮಿಕೊಂಡಿದ್ದಾರೆ. ಈ ಬಗ್ಗೆ ನಮ್ಮ ವರುಣ ಕ್ಷೇತ್ರದ ಶಾಸಕರು ಹಾಗೂ ರಾಜ್ಯದ ಮುಖ್ಯಮಂತ್ರಿಗಳು ಆದ ಸಿದ್ದರಾಮಯ್ಯನವರು ಇತ್ತ ಗಮನಹರಿಸಿ ಕಾರ್ಮಿಕರ ಸಮಸ್ಯೆಗೆ ಸ್ಪಂದಿಸಬೇಕು ಎಂದು ಕಾರ್ಮಿಕರು ಮನವಿ ಮಾಡಿದರು. ಈ ಸಂದರ್ಭದಲ್ಲಿ ಕಾರ್ಮಿಕರ ಹಾಗೂ ಕಾರ್ಮಿಕ ಮುಖಂಡರುಗಳು ಹಾಜರಿದ್ದರು.