ಮಂಗಳೂರು (ದಕ್ಷಿಣ ಕನ್ನಡ) : ಇತ್ತೀಚಿಗೆ ಹತ್ಯೆಯಾದ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಬಂಧಿತ ಆರೋಪಿಯೊಬ್ಬನ ಕುಟುಂಬದ ಪರ ತನಿಖೆಗೆ ಮೊದಲೇ ಕ್ಲೀನ್ ಚಿಟ್ ಹೇಳಿಕೆ ನೀಡಿರುವ ಸ್ಪೀಕರ್ ಯು.ಟಿ. ಖಾದರ್ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಆಗ್ರಹಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಹಾಸ್ ಹತ್ಯೆ ಪ್ರಕರಣದ ತನಿಖೆಯಲ್ಲಿ ಸ್ಪೀಕರ್ ಯು.ಟಿ.ಖಾದರ್ ಅವರಿಗೆ ಯಾಕೆ ಅಷ್ಟೊಂದು ಕಾಳಜಿ ತನಿಖೆ ವಿಚಾರದಲ್ಲಿ ಹೇಳಿಕೆ ಕೊಡಲು ಅವರು ಯಾರು ಉಸ್ತುವಾರಿ ಸಚಿವರೇ ಎಂದು ಪ್ರಶ್ನಿಸಿದರು.
ಖಾದರ್ ಅವರದ್ದು ಒನ್ಸೈಡ್ ವರ್ತನೆ. ಅವರು ಸ್ಪೀಕರ್ ಆಗಿರುವ ತನಕ ಸುಹಾಸ್ ಶೆಟ್ಟಿ ಪ್ರಕರಣದಲ್ಲಿ ನ್ಯಾಯ ಸಿಗುವ ನಂಬಿಕೆ ಇಲ್ಲ. ಆದ್ದರಿಂದ ಅವರು ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲವಾದರೆ ರಾಜ್ಯಪಾಲರೇ ಮಧ್ಯೆ ಪ್ರವೇಶಿಸಿ ಅವರ ರಾಜೀನಾಮೆ ಪಡೆಯಲಿ ಎಂದು ಆಗ್ರಹಿಸಿದರು.
ಸ್ಪೀಕರ್ ಆದವರು ಅವರ ಜವಾಬ್ದಾರಿಯನ್ನು ನಿಭಾಯಿಸಬೇಕು.ಅದು ಬಿಟ್ಟು ಇಂತಹ ಹೇಳಿಕೆ ಕೊಟ್ಟದ್ದು ಯಾಕೆ? ಖಾದರ್ ಎರಡು ಬಾರಿ ಹೇಳಿಕೆ ಕೊಟ್ಟು ಯಾಕೆ ಸುಮ್ಮನಾಗಿದ್ದಾರೆ ಎಂದು ಪ್ರಶ್ನಿಸಿದರು
ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಬಂಧಿತ 8 ಮಂದಿಯ ಪೈಕಿ ರಂಜಿತ್ ಮತ್ತು ನಾಗರಾಜ ಕಳಸದವರು. ಅವರು ಅಲ್ಲಿ ಹೋಟೆಲ್, ಹೋಮ್ ಸ್ಟೇ ಹೊಂದಿರುವ ಮುಹಮ್ಮದ್ ಮುಸ್ತಫ ಎಂಬವರ ಕೆಲಸದವರು. ಮುಸ್ತಫ ಆಯೋಜಿಸಿದ್ದ ಕ್ರಿಕೆಟ್ ಟೂರ್ನಿಯಲ್ಲಿ ಯು.ಟಿ.ಖಾದರ್ ಮತ್ತು ಕಾಂಗ್ರೆಸ್ ಮುಖಂಡ ಇನಾಯತ್ ಅಲಿ ಪಾಲ್ಗೊಂಡಿದ್ದರು ಎಂದು ಸತೀಶ್ ಕುಂಪಲ ಆರೋಪಿಸಿದ್ದಾರೆ.