ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಅಧಿಕಾರಿಗಳು ಬೃಹತ್ ದಾಳಿ ನಡೆಸಿದ್ದಾರೆ. ಬಜ್ಪೆ ಪ್ರದೇಶದಲ್ಲಿ 10 ಕಡೆ ಹಾಗೂ ಸುರತ್ಕಲ್‌ನಲ್ಲಿ 4 ಕಡೆ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದ ಎನ್ಐಎ, ಮಹತ್ವದ ದಾಖಲೆಗಳನ್ನು ಪರಿಶೀಲನೆ ಮಾಡಿದ್ದಾರೆ. ಜೊತೆಗೆ ಕೆಲವರನ್ನು ವಿಚಾರಣೆಗೆ ಒಳಪಡಿಸಿರುವ ಮಾಹಿತಿಯಿದೆ.
ಜೂನ್ 1 ರಂದು ರಾತ್ರಿ 8:30ಕ್ಕೆ ಮಂಗಳೂರು ಬಜ್ಪೆಯ ಕಿನ್ನಿಪದವು ಎಂಬಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿಯನ್ನು ಗುಂಪೊಂದು ಬರ್ಬರವಾಗಿ ಹತ್ಯೆ ಮಾಡಿದ್ದು, ರಾಜ್ಯದೆಲ್ಲೆಡೆ ಆಘಾತ ಸೃಷ್ಟಿಸಿತ್ತು. ಈ ಪ್ರಕರಣದಲ್ಲಿ ಬಜ್ಪೆ ಪೊಲೀಸರು ಈಗಾಗಲೇ 12 ಮಂದಿಯನ್ನು ಬಂಧಿಸಿದ್ದರು. ಪ್ರಕರಣದ ತೀವ್ರತೆಯನ್ನು ಮನಗಂಡ ಕೇಂದ್ರ ಗೃಹ ಇಲಾಖೆ, ಈ ಪ್ರಕರಣವನ್ನು ಎನ್ಐಎಗೆ ವಹಿಸಿತು.
ಸುಹಾಸ್ ಶೆಟ್ಟಿ ಪೋಷಕರು ಹಾಗೂ ಹಿಂದೂ ಮುಖಂಡರು ಪ್ರಕರಣವನ್ನು ಎನ್ಐಎಗೆ ವಹಿಸಬೇಕೆಂದು ನಿರಂತರವಾಗಿ ಒತ್ತಾಯಿಸಿದ್ದರು. ಈ ಹತ್ಯೆಗೆ ನಿಷೇಧಿತ ಪಿಎಫ್ಐ ಸಂಘಟನೆ ಹಾಗೂ ವಿದೇಶಗಳಿಂದ ಹಣದ ಮೂಲವಿರುವ ಶಕ್ತಿಗಳ ಭಾಗವಹಿಸುವಿಕೆ ಇದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಈ ಹಿನ್ನಲೆಯಲ್ಲಿ, ಎನ್ಐಎ ಕಾರ್ಯಾಚರಣೆ ಮತ್ತಷ್ಟು ಗಂಭೀರ ತಿರುವು ಪಡೆದುಕೊಂಡಿದೆ.