ಬೆಂಗಳೂರು: ಭೋವಿ ನಿಗಮದಲ್ಲಿ ನಡೆದ ಅಕ್ರಮ ತನಿಖೆ ಸಂಬಂಧ ವಿಚಾರಣೆ ಎದುರಿಸಿದ್ದ ವಕೀಲೆ, ಉದ್ಯಮಿ ಜೀವಾ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು, ಸಿಐಡಿ ಡಿವೈಎಸ್ಪಿ ಕನಕಲಕ್ಷ್ಮಿ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಲು ಸಿದ್ದತೆ ನಡೆಸುತ್ತಿದ್ದಾರೆ.
ಹೈಕೋರ್ಟ್ ಗರಂ ಆದ ಬೆನ್ನಲ್ಲೇ ಸಿಸಿಬಿ ಪೊಲೀಸರು ಎಚ್ಚೆತ್ತುಕೊಂಡು ಪ್ರಕರಣದ ಸಾಕ್ಷ್ಯಗಳನ್ನು ಕಲೆ ಹಾಕಲು ಮುಂದಾಗಿದ್ದಾರೆ. ಭೋವಿ ನಿಗಮದಲ್ಲಿನ ಅಕ್ರಮ ಆರೋಪ ಸಂಬಂಧ ತನಿಖೆಯ ಭಾಗವಾಗಿ ಉದ್ಯಮಿ ಜೀವಾ ಅವರನ್ನು ವಿಚಾರಣೆಗೆ ಕರೆಯಲು ಕಾರಣವೇನು? ಜೀವಾ ಅವರಿಗೆ ಸಂಬಂಧಿಸಿದ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗಿದೆಯೇ, ವಿಚಾರಣೆಗಾಗಿ ಅವರು ಎಷ್ಟು ಬಾರಿ ಸಿಐಡಿ ಕಚೇರಿಗೆ ಬಂದಿದ್ದಾರೆ? ಎಂಬಿತ್ಯಾದಿ ಮಾಹಿತಿಗಳನ್ನು ಸಿಸಿಬಿ ಪೊಲೀಸರು ಸಂಗ್ರಹಿಸುತ್ತಿದ್ದಾರೆ.
ಆತ್ಮಹತ್ಯೆಗೂ ಮುನ್ನ ಜೀವಾ ಅವರು ಬರೆದಿದ್ದಾರೆನ್ನಲಾದ 13 ಪುಟಗಳ ಡೆತ್ನೋಟನ್ನು ಎಫ್ಎಸ್ಎಲ್ಗೆ ಸದ್ಯದಲ್ಲೇ ಕಳುಹಿಸಿ, ಅದರಲ್ಲಿರುವ ಬರವಣಿಗೆ ಅವರದೇ ಎಂಬುವುದನ್ನು ಖಾತ್ರಿಪಡಿಸಿಕೊಳ್ಳಲಿದ್ದಾರೆ. ವಿಚಾರಣೆ ಸಂದರ್ಭದಲ್ಲಿ ಜೀವಾ ಅವರಿಗೆ ಡಿವೈಎಸ್ಪಿ ಕನಕಲಕ್ಷ್ಮಿ ಕಿರುಕುಳ ನೀಡಿದ್ದಾರೆಂಬ ಆರೋಪ ಕೇಳಿಬಂದಿದೆ. ಹಾಗಾಗಿ ಡಿವೈಎಸ್ಪಿ ಅವರಿಗೆ ವಿಚಾರಣೆಗಾಗಿ ಸದ್ಯದಲ್ಲೇ ನೋಟಿಸ್ ನೀಡಲು ಸಿಸಿಬಿ ಪೊಲೀಸರು ತಯಾರಿ ಮಾಡಿಕೊಳ್ಳುತ್ತಿದ್ದಾರೆ.
ಜೀವಾ ಅವರ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿ ಹೈಕೋರ್ಟ್ಗೆ ಬೆಂಗಳೂರು ವಕೀಲರ ಸಂಘ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಪೀಠ ಆತ್ಮಹತ್ಯೆ ಸ್ಥಳದಲ್ಲಿ ದೊರೆತ ಡೆತ್ನೋಟ್ನಲ್ಲಿ ಬರೆದಿರುವ ಆರೋಪಿಯನ್ನು ಇದುವರೆಗೆ ಏಕೆ ವಿಚಾರಣೆ ನಡೆಸಿಲ್ಲ, ಅವರ ಮೇಲೆ ಏಕೆ ಕ್ರಮಕೈಗೊಂಡಿಲ್ಲ, ಇನ್ನೂ ಏಕೆ ತನಿಖೆ ಆರಂಭಿಸಿಲ್ಲ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದೆ. ಹಾಗಾಗಿ ಇದೀಗ ಸಿಸಿಬಿ ಪೊಲೀಸರ ಸಿಐಡಿ ಡಿವೈಎಸ್ಪಿ ಕನಕಲಕ್ಷ್ಮಿ ಅವರಿಗೆ ವಿಚಾರಣೆಗಾಗಿ ನೋಟಿಸ್ ನೀಡಲು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.