ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಮಲೆ ಮಹದೇಶ್ವರ ಬೆಟ್ಟದ ತಾಳಬೆಟ್ಟದ ಬಳಿ ಆತ್ಮಹತ್ಯೆಗೆ ಯತ್ನಿಸಿ ಚಾಮರಾಜ ನಗರ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲೂಕಿನ ಚಂದಗಾಲು ಗ್ರಾಮದ ಸಂತ್ರಸ್ತೆ ಮತ್ತು ಸಂತ್ರಸ್ತೆ ತಾಯಿ ಗೌರಮ್ಮ ಅವರನ್ನು ಚಾಮರಾಜ ನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್, ಮೈಸೂರು ಜಿಲ್ಲಾ ಉಸ್ತುಚಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ,ಕೆ.ಆರ್.ನಗರದ ಶಾಸಕ ಡಿ.ರವಿಶಂಕರ್ ಭೇಟಿ ಮಾಡಿ ಸಾಂತ್ವನ ಹೇಳಿದರು.

ಚಾಮರಾಜನಗರದ ಹೊರವಲಯದ ಯಡಪುರ ಬಳಿ ಇರುವ ವೈದ್ಯಕೀಯ ಕಾಲೇಜಿನ ಬೋಧನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತರನ್ನು ಭೇಟಿ ಮಾಡಿ ಆಸ್ಪತ್ರೆಯ ವೈದ್ಯಾಧಿಕಾರಿಗಳಿಂದ ಆರೋಗ್ಯದ ಕುರಿತು
ಮಾಹಿತಿ ಪಡೆದರು.
ಸಂತ್ರಸ್ತರ ಆರೋಗ್ಯ ಕ್ಷೇಮವನ್ನು ವಿಚಾರಿಸಿದ ಅವರು ಸಂತ್ರಸ್ತರು ಆದಷ್ಟು ಬೇಗನೇ ಚೇತರಿಸಿಕೊಳ್ಳಲು ಸೂಕ್ತ ಚಿಕಿತ್ಸೆ ನೀಡುವಂತೆ ಸ್ಥಳದಲ್ಲಿಯೇ ಇದ್ದ ವೈದ್ಯರಿಗೆ ಸೂಚಿಸಿದರು. ಸಂತ್ರಸ್ತರು ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ಆರೋಗ್ಯ ಪರಿಸ್ಥಿತಿ ಹೇಗಿತ್ತು ?, ಈಗ ಹೇಗಿದೆ ಎಂಬುದರ ಸವಿವರ ಮಾಹಿತಿ ಪಡೆದ ಬಳಿಕ ಸಂತ್ರಸ್ತರಿಗೆ ನಿಮಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು, ಧೈರ್ಯವಾಗಿರುವಂತೆ ಭರವಸೆ ತುಂಬಿದರು.
ಈ ಸಂದರ್ಭದಲ್ಲಿ ಸಚಿವರಿಗೆ ಮಾಹಿತಿ ನೀಡಿದ ಕೆ.ಆರ್.ನಗರದ ಶಾಸಕ ಡಿ.ರವಿಶಂಕರ್ ಘಟನೆಯಲ್ಲಿ ಮೃತರಾದ ಮಹದೇವನಾಯಕ ಮತ್ತು ಲೀಲಾವತಿ ಕುಟುಂಬಕ್ಕೆ ತಾವು ವೈಯಕ್ತಿಕವಾಗಿ ಎರಡು ಲಕ್ಷ ಸಹಾಯ ಮಾಡಿದ್ದು ಸರ್ಕಾರದಿಂದ ಸಿಗುವ ಪರಿಹಾರ ಮತ್ತು ಸವಲತ್ತು ಒದಗಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಎ.ಆರ್. ಕೃಷ್ಣಮೂರ್ತಿ, ಕಾಡಾ ಅಧ್ಯಕ್ಷರಾದ ಮರಿಸ್ವಾಮಿ, ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಮೈಸೂರು ಜಿಲ್ಲಾಧಿಕಾರಿ ಕೆ.ವಿ. ರಾಜೇಂದ್ರ, ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಪದ್ಮನಿ ಸಾಹು ,ಕೆ.ಆರ್.ನಗರ ಕುರುಬರ ಸಂಘದ ಅಧ್ಯಕ್ಷ ಚೀರನಹಳ್ಳಿ ಶಿವಣ್ಣ , ಎಸ್.ಟಿ.ಘಟಕದ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ತಿಪ್ಪೂರುಮಹದೇವ ನಾಯಕ, ಸಮಾಜ ಮುಖಂಡ ಹೊಸೂರು ಕಲ್ಲಹಳ್ಳಿ ಶ್ರೀನಿವಾಸ್, ಗ್ರಾ.ಪಂ.ಸದಸ್ಯ ಮುಂಜನಹಳ್ಳಿ ಮಹದೇವನಾಯಕ, ಇತರರು ಇದ್ದರು.