ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ತಾಲ್ಲೂಕಿನ ಚಂದಗಾಲು ಗ್ರಾಮದ ನಾಲ್ವರು ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರು ಮೃತಪಟ್ಟಿದ್ದು ,ತಾಲೂಕು ಆಡಳಿತ ಮತ್ತು ಪೊಲೀಸರ ವೈಫಲ್ಯ ಎದ್ದು ಕಾಣುತ್ತಿದ್ದು, ಈ ಕೂಡಲೇ ಸರ್ಕಾರ ನೊಂದ ಎರಡು ಕುಟುಂಬಕ್ಕೆ ತಲಾ ೨೫ ಲಕ್ಷ ಪರಿಹಾರ ಕೊಡಬೇಕೆಂದು ಮಾಜಿ ಸಚಿವ ಸಾ.ರಾ.ಮಹೇಶ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಪಟ್ಟಣದ ತಾಲೂಕು ಆಡಳಿತ ಸೌಧದ ಮುಂಭಾಗ ತಾಲ್ಲೂಕು ಆಡಳಿತ ಮತ್ತು ಪೊಲೀಸರ ವೈಫಲ್ಯದ ವಿರುದ್ದ ಮಾಜಿ ಸಚಿವ ಸಾ.ರಾ.ಮಹೇಶ್ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಅವರುಗಳ ನೇತೃತ್ವದಲ್ಲಿ ಜೆಡಿಎಸ್-ಬಿಜೆಪಿ ಕಾರ್ಯಕರ್ತರೊಟ್ಟಿಗೆ ಪ್ರತಿಭಟನೆ ನಡೆಸಿ ಮಾತನಾಡಿದ ಅವರು ಈ ಘಟನೆ ನಡೆದು ಮೂರು ದಿನ ಕಳೆದರೂ ತಾಲ್ಲೂಕು ತಹಸೀಲ್ದಾರ್ ಚಂದಗಾಲು ಗ್ರಾಮಕ್ಕೆ ಭೇಟಿ ನೀಡಿ ಕುಟುಂಬದವರ ನೋವಿಗೆ ಸ್ಪಂದಿಸುವ ಕೆಲಸ ಮಾಡಿಲ್ಲ, ಪರಿಶಿಷ್ಟ ಪಂಗಡದ ಹೆಣ್ಣುಮಗಳು ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದರು ಏಕೆ ಯಾರಿಗೂ ಮಾಹಿತಿ ನೀಡಿಲ್ಲ, ಇದು ನಿಮ್ಮ ವೈಫಲ್ಯ ಎಂದು ತಹಸೀಲ್ದಾರ್ ಪೂರ್ಣಿಮಾ ವಿರುದ್ದ ಮಾಜಿ ಸಚಿವ ಸಾ.ರಾ.ಮಹೇಶ್ ಗುಡುಗಿದರು.

ಅಪ್ರಾಪ್ತೆ ಸಂತ್ರಸ್ತೆಯ ಮನೆಗೆ ಹೋಗಿ ಆರೋಪಿ ಗಲಾಟೆ ಮಾಡಿದರು ನಿಮ್ಮ ಗ್ರಾಮ ಸೇವಕ, ಗ್ರಾಮಲೆಕ್ಕಿಗ ಏಕೆ ಮಾಹಿತಿ ಪಡೆದು ನಿಮಗೆ ತಿಳಿಸಿಲ್ಲ, ಒಂದು ಹಳ್ಳಿಯಲ್ಲಿ ಜನನವಾಗಲಿ, ಸಾವಾಗಲಿ ಗ್ರಾಮಸೇವಕ, ಲೆಕ್ಕಿಗ ಹೋಗಿ ಮಾಹಿತಿ ಪಡೆಯುತ್ತಾರೆ ಇಷ್ಟೊಂದು ಗಂಭೀರ ಘಟನೆ ನಡೆದರು ಮಾಹಿತಿ ತಿಳಿದು ಕೊಳ್ಳದೇ ಇರುವುದು ನಿಮ್ಮ ವೈಫಲ್ಯ ಎಂದರು.
ಮುಖ್ಯಮoತ್ರಿಗಳ ತವರು ಜಿಲ್ಲೆಯಲ್ಲಿ ಈ ಘಟನೆಯಾದರೂ ಅಧಿಕಾರಿಗಳು ಇದನ್ನು ಮುಚ್ಚಿ ಹಾಕುವ ಕೆಲಸ ಮಾಡಿದ್ದಾರೆ ಇದು ಯಾರಿಗೋಸ್ಕರ ಮಾಡಿದ್ದು, ಈ ಬ್ಗಗೆ ಸಮಗ್ರ ತನಿಖೆ ಆಗಬೇಕು ಎಂದು ಹುಣಸೂರಿನ ಉಪವಿಭಾಗಾಧಿಕಾರಿ ಮಹಮ್ಮದ್ ಹ್ಯಾರಿಸ್ ಸುಮೈರ್ ಅವರಿಗೆ ತಿಳಿಸಿದರು.
ಅಪ್ರಾಪ್ತೆ ಸಂತ್ರಸ್ತೆಯ ದೂರನ್ನು ಪಡೆದಿದ್ದರೆ ಇಂದು ಇಂತಹ ಘಟನೆಗಳು ನಡೆಯುತ್ತಿರಲಿಲ್ಲ ಇದರಲ್ಲಿ ಸಾಕಷ್ಟು ಪೋಲೀಸರ ವೈಫಲ್ಯ ಜೊತಗೆ ಯಾರಿಗೋಸ್ಕರ ದೂರು ಪಡೆಯಲಿಲ್ಲ ತನಿಖೆ ಒಳಪಡಿಸಿ ಎಂದರಲ್ಲದೆ ತಾಲ್ಲೂಕು ಆಡಳಿತ ಮತ್ತು ಪೊಲೀಸರ ವೈಫಲ್ಯದಿಂದ ವಾಲ್ಮೀಕಿ ಸಮುದಾಯದ ಇಬ್ಬರ ಪ್ರಾಣಹಾನಿಯಾಗಿದೆ ಆದ್ದರಿಂದ ಸರ್ಕಾರ ಆ ಎರಡು ಕುಟುಂಬದವರಿಗೂ ತಲಾ ೨೫ ಲಕ್ಷ ಪರಿಹಾರವನ್ನು ಘೋಷಣೆ ಮಾಡಬೇಕು ಎಂದು ರಾಜ್ಯ ಸರ್ಕಾರವನ್ನು ಮಾಜಿ ಸಚಿವ ಸಾ.ರಾ.ಮಹೇಶ್ ಒತ್ತಾಯ ಮಾಡಿದರು.
ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಮಾತನಾಡಿ ಸಿ.ಎಂ.ತವರು ಜಿಲ್ಲೆಯಲ್ಲಿ ವಾಲ್ಮೀಕಿ ಸಮುದಾಯದ(ನಾಯಕ) ಹೆಣ್ಣುಮಗಳಿಗೆ ನ್ಯಾಯ ಸಿಗಲಿಲ್ಲ ಎಂದರೆ, ಇನ್ಯಾವ ಸಮುದಾಯಕ್ಕೆ ನ್ಯಾಯ ಒದಗಿಸಲು ಇವರಿಂದ ಸಾದ್ಯ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಘಟನೆ ನಡೆದು ಮೂರು ದಿನ ಕಳೆದರು ಜಿಲ್ಲೆಯ ಉಸ್ತುವಾರಿ ಸಚಿವರು ಚಂದಗಾಲು ಗ್ರಾಮಕ್ಕೆ ಭೇಟಿ ನೀಡಿ ನೊಂದ ಕುಟುಂಬಕ್ಕೆ ಸಾಂತ್ವನ ಹೇಳಬೇಕಿತ್ತು ಏಕೆ ಬಂದಲ್ಲಿವೆoದು ತಿಳಿಯುತ್ತಿಲ್ಲ, ನಿಮ್ಮ ಇಲಾಖೆಯ ಒಳಗೊಂಡಿರುವoತೆ ಎಸ್.ಸಿ/ಎಸ್.ಟಿ.ದೌರ್ಜನ್ಯ, ಪೋಕ್ಸ್ ಕಾಯ್ದೆ, ಹಾಗೂ ೩೭೬ ಕೇಸು ದಾಖಲಾಗಿದೆ, ನಾಯಕ ಸಮುದಾಯದ ಇಬ್ಬರು ಮೃತಪಟ್ಟಿದ್ದಾರೆ ಇನ್ನೀಬ್ಬರು ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆ ಇಷ್ಟಾದರೂ ನಿಮಗೆ ಮಾಹಿತಿ ಇಲ್ವ ಅಥವಾ ನಿಮ್ಮ ಅಧಿಕಾರಿಗಳು ಮಾಹಿತಿನೇ ನೀಡಿಲ್ವ, ಎಂದು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ.ಮಹದೇವಪ್ಪ ಅವರನ್ನು ಪ್ರಶ್ನೆ ಮಾಡಿದರು.
ಕರ್ನಾಟಕ ಅರಣ್ಯವಸತಿಧಾಮ ಮತ್ತು ವಿಹಾರ ಧಾಮಗಳ ಸಂಸ್ಥೆಯ ಮಾಜಿ ಅಧ್ಯಕ್ಷ ಅಪ್ಪಣ್ಣ ಮಾತನಾಡಿ ಈ ಘಟನೆಗೆ ರಾಜ್ಯ ಸರ್ಕಾರ ನೇರ ಹೊಣೆ ಹೊರಬೇಕಿದೆ, ನಿಮ್ಮ ಅಧಿಕಾರಿಗಳ ವೈಪಲ್ಯದಿಂದ ನಡೆದ ಘಟನೆ, ಕೆಆರ್.ನಗರ ತಾಲ್ಲೂಕಿನ ಇತಿಹಾಸದಲ್ಲಿ ಈ ರೀತಿಯ ಯಾವುದೇ ಸಮುದಾಯಕ್ಕೂ ಇಂತಹ ಅನ್ಯಾಯವಾಗಿಲ್ಲ, ಮಾತ್ತೇತ್ತಿದ್ದರೆ ನಾವು ಹಿಂದುಳಿದ ವರ್ಗಗಳ ನಾಯಕ ಎನ್ನುವು ನೀವು ಉಡಾಫೆ ಉತ್ತರ ಕೊಡಬೇಡಿ ನಿಮ್ಮದೇ ಜಿಲ್ಲೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ದ ಹರಿಹಾಯ್ದರು.
ಈ ಘಟನೆಯಲ್ಲಿ ನೊಂದ ಕುಟುಂಬದ ಸದಸ್ಯರುಒಬ್ಬರು ಮೃತಪಟ್ಟು ಮೂರು ದಿನ ಕಳೆದರೂ ತಾಲೂಕು ಆಡಳಿಕ್ಕೆ ಗೋತ್ತಾಗಲ್ಲಿಲ್ಲ ಎಂದರೆ ಜಿಲ್ಲೆಯಲ್ಲಿ ಅಧಿಕಾರಿಗಳು ಯಾವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಶೋಷಿತ ಸಮಾಜದವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕಾಣುತ್ತಿಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಹುಣಸೂರು ಉಪ ವಿಭಾಗಾಧಿಕಾರಿ ಮಹಮ್ಮದ್ ಹ್ಯಾರೀಸ್ ಸುಮೈರ್ ಅವರಿಗೆ ಮನವಿ ಪತ್ರ ನೀಡಲಾಯಿತು.

ರಾಜ್ಯ ಜೆಡಿಎಸ್ ಕಾರ್ಯದರ್ಶಿ ಚಂದ್ರಶೇಖರ್, ತಾಲೂಕು ವಕ್ತಾರ ಕೆ.ಎಲ್.ರಮೇಶ್, ಜಿ.ಪಂ ಮಾಜಿ ಅಧ್ಯಕ್ಷ ದ್ವಾರಕೀಶ್, ಜಿ.ಪಂ.ಮಾಜಿ ಸದಸ್ಯರಾದ ಎಂ.ಟಿ.ಕುಮಾರ್, ಅಮಿತ್ ವಿ ದೇವರಹಟ್ಟಿ, ಪುರಸಭಾ ಸದಸ್ಯರಾದ ಉಮೇಶ್, ಕೆ.ಎಲ್.ಜಗದೀಶ್, ಸಂತೋಷ್ ಗೌಡ, ಜೆಡಿಎಸ್ ನಗರ ಪ್ರಧಾನ ಕಾರ್ಯದರ್ಶಿ ರುದ್ರೇಶ್(ಅಯ್ಯ), ಜಿಲ್ಲಾ ಜೆಡಿಎಸ್ ಕಾರ್ಯದರ್ಶಿ ಹನಸೊಗೆ ನಾಗರಾಜ್, ವಕೀಲ ಅಂಕನಹಳ್ಳಿ ತಿಮ್ಮಪ್ಪ, ದಲಿತ ಮುಖಂಡ ಹಂಪಾಪುರ ಸೂರಿ, ವೀರಶೈವ ಮುಖಂಡ ಎಸ್.ವಿ.ಎಸ್.ಸುರೇಶ್, ಸಾಲಿಗ್ರಾಮ ತಾ ಬಿಜೆಪಿ ಅಧ್ಯಕ್ಷ ಸಾ.ರಾ.ತಿಲಕ್, ಕೆ.ಆರ್.ನಗರ ತಾ ಬಿಜೆಪಿ ಅಧ್ಯಕ್ಷ ಹೊಸೂರು ಧರ್ಮ, ಜಿಲ್ಲಾ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ದಾಕ್ಷಾಯಿಣಿ, ತಾ.ಜಾದಳ ಮಹಿಳಾ ಘಟಕದ ಅಧ್ಯಕ್ಷೆ ರಾಜಲಕ್ಷ್ಮೀ, ನಗರ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯಮ್ಮ, ಸಿಡಿಸಿ ಮಾಜಿ ಸದಸ್ಯೆ ಮೋಹನಕುಮಾರಿ, ಜೆಡಿಎಸ್ ಮುಖಂಡರಾದ ಸಿ.ಬಿ.ಲೋಕೇಶ್, ಚಂದಗಾಲು ರಘು, ಬಾಲಾಜಿಗಣೇಶ್, ಘನತೆಕುಮಾರ್, ಸಾ.ರಾ.ನಾಗೇಶ್, ಗೌಡ ಮಂಜು, ಲಾರಿ ಬಸವಣ್ಣ, ಬಂಗಾರಿ, ಮಧುವನಹಳ್ಳಿ ಶಿವಣ್ಣ, ಧರ್ಮರಾಜ್, ಗಳಿಗೆಕೆರೆ ಕೃಷ್ಣನಾಯಕ, ಪುರಸಭಾ ನಾಮಕರಣ ಮಾಜಿ ಸದಸ್ಯರಾದ ಜಿ.ಪಿ.ಮಂಜು, ಉಮಾಶಂಖರ್(ಗುಂಡಾ), ವಕೀಲ ದೊಡ್ಡಕೊಪ್ಪಲು ರಮೇಶ್, ಹೊಸೂರು ಮಧುಚಂದ್ರ,ನಾಗೇಶ್,ಬೆಗನಹಳ್ಳಿ ದೀಪು ಸೇರಿದಂತೆ ಅನೇಕ ನೂರಾರು ಕಾರ್ಯಕರ್ತರು ಇದ್ದರು.
ಚೆಕ್ ವಿತರಣೆ :
ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಮೃತರ ಕುಟುಂಬಕ್ಕೆ 8 ಲಕ್ಷದ ಪರಿಹಾರವನ್ನು ವಿತರಣೆ ಮಾಡಲಾಯಿತು.ಚಂದಗಾಲು ಗ್ರಾಮದಲ್ಲಿ ಮಾಜಿ ಸಚಿವ ಸಾ.ರಾ.ಮಹೇಶ್, ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ರಂಗೇಗೌಡ, ಅಡಿಷನಲ್ ಎಸ್.ಪಿ ನಂದಿನಿ, ತಹಸೀಲ್ದಾರ್ ಪೂರ್ಣಿಮಾ ಅವರ ಸಮ್ಮುಖದಲ್ಲಿ ವಿತರಣೆ ಮಾಡಲಾಯಿತು.
“ಕೆ.ಆರ್.ನಗರ ಮತ್ತು ಚಂದಗಾಲು ನಲ್ಲಿ ಬಾರಿ ಭದ್ರತೆ “
ಕೆ.ಆರ್.ನಗರ ತಾಲ್ಲೂಕಿನ ಚಂದಗಾಲು ಗ್ರಾಮದ ನಾಲ್ವರು ಆತ್ಮಹತ್ಯೆ ಯತ್ನ ಪ್ರಕರಣದಲ್ಲಿ ಮಹದೇವ ನಾಯಕ ಮೃತಪಟ್ಟಿದ್ದು, ಇದರ ಬೆನ್ನಲ್ಲೆ ಮತ್ತೊರ್ವ ಮಹಿಳೆ ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗಧೇ ಸಾವನ್ನಪ್ಪಿದ್ದು, ಆಪ್ರಾಪ್ತೆ ಸಂತ್ರಸ್ತೆಯ ತಾಯಿ ಲೀಲಾವತಿ (೪೦) ಮೃತ ಪಟ್ಟ ಹಿನ್ನಲೆಯಲ್ಲಿ ಕೆ.ಆರ್.ನಗರ ಪಟ್ಟಣ ಮತ್ತು ಮೃತರ ಗ್ರಾಮ ಚಂದಗಾಲು ಗ್ರಾಮದಲ್ಲಿ ಮತ್ತು ಕೆ.ಆರ್.ನಗರ ಪಟ್ಟಣದಲ್ಲಿ ಮುನ್ನೆಚ್ಚರಿಕೆಯ ಕ್ರಮವಾಗಿ ಅಡಿಷನಲ್ ಎಸ್.ಪಿ ನಂದಿನಿ, ಹುಣಸೂರು ಗ್ರಾಮಾಂತರ ಡಿವೈಎಸ್ಪಿ ಗೋಪಾಲ ಕೃಷ್ಣ , ಸಿಪಿಐ ಕೃಷ್ಣರಾಜು,ಮುದ್ದು ಮಾದಯ್ಯ,ಮುನಿಯಪ್ಪ,ಶಭೀರ್,ಮಂಜಪ್ಪ.ಲೋಲಾಕ್ಷಿ,ಕೆ.ಕೆ.ರಘು, ಪಿಎಸ್ಐಗಳಾದ ರಾಮಣ್ಣ,ಯತೀಶ್,ರಂಗಸ್ವಾಮಿ, ಚೇತನ್ , ಕೃಷ್ಣಕಾಂತ್ ಕೋಳಿ,ಚೇತನ್ ಕುಮಾರ್,ವೀಣಾ,ಅಚ್ಚುತ್,ಪ್ರಕಾಶ್ ಎತ್ತಿನಮನಿ 4 ತುಕಡಿ ಕೆಎಸ್ಆಪಿ,3 ತುಕಡಿ ಡಿಆರ್ ಪೊಲೀಸರ ನೇತೃತ್ವದಲ್ಲಿ ಬಾರಿ ಬಿಗಿ ಭದ್ರತೆ ಮಾಡಲಾಗಿತ್ತು.
ಏನಿದು ಘಟನೆ :
ಕೆ.ಆರ್.ನಗರ ತಾಲೂಕಿನ ಚೀರನಹಳ್ಳಿ ಗ್ರಾಮದ ಲೋಕೇಶ್ ಎಂಬಾತ ಚಂದಗಾಲು ಗ್ರಾಮದ ಯುವತಿಗೆ ಕಿರುಕುಳ ನೀಡುತ್ತಿದ್ದು, ಇದನ್ನು ತಪ್ಪಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪೊಲೀಸರಿಗೆ ದೂರು ನೀಡಿದರೂ ಕೇಸು ದಾಖಲಿಸಿಕೊಳ್ಳದ ಹಿನ್ನೆಲೆಯಲ್ಲಿ ಮರ್ಯಾದೆಗೆ ಅಂಜಿ ಮನನೊಂದು ಒಂದೇ ಕುಟುಂಬದ ನಾಲ್ವರು ಚಾಮರಾಜನಗರ ಜಿಲ್ಲೆಯಲ್ಲೆಯ ಹನೂರು ತಾಲೂಕಿನ ತಾಳಬೆಟ್ಟದ ಬಳಿ ಆತ್ಮಹತ್ಯೆಗೆ ಚಂದಗಾಲು ಗ್ರಾಮದ ನಿವಾಸಿಗಳಾದ ಮಹದೇವನಾಯಕ(೬೫), ಪತ್ನಿ ಗೌರಮ್ಮ(೫೦), ಪುತ್ರಿ ಲೀಲಾವತಿ(೩೫) ಮತ್ತು ಮೊಮ್ಮಗಳು ಆತ್ಮಹತ್ಯೆಗೆ ಯತ್ನಿಸಿ ಮಹದೇವನಾಯಕ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಸೋಮವಾರ ಲೀಲಾವತಿ ಕೂಡ ಸಾವನ್ನಪ್ಪಿದ್ದು ಈ ಹಿನ್ನಲೆಯಲ್ಲಿ ಪ್ರತಿಭಟನೆಗಳು ನಡೆದಿದ್ದವು.
“ಘಟನೆಗೆ ಮೂರು ಪೊಲೀಸರ ತಲೆದಂಡ “
ಈ ಆತ್ಮಹತ್ಯೆ ಪ್ರಕರಣದಲ್ಲಿ ಪೊಲೀಸರ ನಿರ್ಲಕ್ಷದ ಕುರಿತು ಸಾಕಷ್ಟು ದೂರು ಮತ್ತು ಆರೋಪಗಳು ಕೇಳಿ ಬಂದ ಹಿನ್ನಲೆಯಲ್ಲಿ ಕೆ.ಆರ್.ನಗರ ಪೊಲೀಸ್ ವೃತ್ತ ನಿರೀಕ್ಷಕ ಸಂತೋಷ್ , ಎಎಸ್ಐ ಗಿರೀಶ್, ಮುಖ್ಯ ಪೇದೆ ರಾಘವೇಂದ್ರ ಅವರ ತಲೆದಂಡವಾಗಿದೆ.