ಮಂಗಳೂರು(ದಕ್ಷಿಣ ಕನ್ನಡ): ಪತ್ನಿಯನ್ನು ಗುಂಡಿಕ್ಕಿ ಕೊಂದ ಗಂಡ ತಾನು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ನೆಲ್ಲೂರು ಕೆಮ್ರಾಜೆ ಗ್ರಾಮದ ಕೋಡಿಮಜಲು ಎಂಬಲ್ಲಿ ನಡೆದಿದೆ.

ಕೊಲೆ ಆರೋಪಿ, ಕೃಷಿಕ ರಾಮಚಂದ್ರ ಗೌಡ ಎಂಬುವವರು ಕುಡಿದು ಬಂದು ಜಗಳವಾಡುವುದು ಇತ್ತೀಚೆಗೆ ವಿಪರೀತವಾಗಿತ್ತೆನ್ನಲಾಗಿದೆ. ಅವರಿಗೆ ಅಡಿಕೆ, ರಬ್ಬರ್ ಹೀಗೆ ಸುಮಾರು 5 ಎಕ್ರೆಯಷ್ಟು ಕೃಷಿ ಭೂಮಿ ಇದೆ. ಬೆಳೆಗಳಿಗೆ ಕಾಡುಪ್ರಾಣಿಗಳ ಉಪಟಳವಿರುವುದರಿಂದ ಲೈಸೆನ್ಸ್ ಇರುವ ಕೋವಿ ಕೂಡ ಅವರು ಇರಿಸಿಕೊಂಡಿದ್ದರು. ಅವರ ಪತ್ನಿ ಶ್ರೀಮತಿ ವಿನೋದ (43) ಹಾಗೂ ಮೂವರು ಪುತ್ರರಿದ್ದರು.
ಸುಮಾರು ಮೂರು ತಿಂಗಳ ಹಿಂದೆ ಅವರು ಕುಡಿದು ಬಂದು ಪತ್ನಿಯೊಡನೆ ಜಗಳವಾಡುತ್ತಿದ್ದಾಗ ಮಧ್ಯಪ್ರವೇಶಿಸಿದ ಮಕ್ಕಳನ್ನು ಕೋವಿ ಹಿಡಿದುಕೊಂಡು ಅಟ್ಟಾಡಿಸಿದ್ದರೆನ್ನಲಾಗಿದೆ. ಈ ಘಟನೆ ಪೋಲೀಸ್ ಠಾಣೆಯ ಮೆಟ್ಟಿಲೇರಿ ಪೋಲೀಸರ ಸೂಚನೆಯಂತೆ ಮನೆಯಲ್ಲಿದ್ದ ಕೋವಿಯನ್ನು ಸುಳ್ಯದ ಕೋವಿ ಮಳಿಗೆಯಲ್ಲಿ ಮೂರು ತಿಂಗಳ ಅವಧಿಗೆ ಡೆಪಾಸಿಟ್ ಮಾಡಿಸಲಾಗಿತ್ತು. ಅವಧಿ ಮುಗಿದ ಹಿನ್ನೆಲೆಯಲ್ಲಿ ಶ್ರೀಮತಿ ವಿನೋದರವರ ವಿನಂತಿಯ ಮೇರೆಗೆ ಸ್ಥಳೀಯ ಸಾಮಾಜಿಕ ಕಾರ್ಯಕರ್ತರೊಬ್ಬರು ಕೋವಿ ಬಿಡಿಸಿಕೊಳ್ಳಲು ಸಹಕರಿಸಿದ್ದರು. ಕೋವಿಯನ್ನು ಮನೆಗೆ ವಾಪಸ್ ತಂದು ಮೂರು ದಿನವಷ್ಟೆ ಆಗಿತ್ತು.
ನಿನ್ನೆ ರಾತ್ರಿ ಕುಡಿದು ಬಂದು ಪತ್ನಿ ವಿನೋದ ಹಾಗೂ ಪುತ್ರ ಪ್ರಶಾಂತ್ ರೊಡನೆ ರಾಮಚಂದ್ರ ಗೌಡರು ಜಗಳ ಆರಂಭಿಸಿದ್ದಾರೆ. ಈ ರೀತಿ ಜಗಳವಾಡುವುದನ್ನು ಹಿರಿಮಗ ಪ್ರಶಾಂತ್ ವಿರೋಧಿಸಿದ್ದಾನೆ. ರಾಮಚಂದ್ರ ಗೌಡರು ಮನೆಯಲ್ಲಿದ್ದ ಕೋವಿ ಎತ್ತಿಕೊಂಡು, ಮಗನಿಗೆ ಗುಂಡಿಕ್ಕಲು ಬಂದಿದ್ದಾರೆ. ಇದನ್ನು ಕಂಡ ಪತ್ನಿ ವಿನೋದರವರು ಅಡ್ಡ ಬಂದಿದ್ದಾರೆ. ಗಂಡನನ್ನು ತಡೆಯಲು ಪ್ರಯತ್ನಿಸಿ, ಅವರು ಮಲಗುತ್ತಿದ್ದ ಕೊಠಡಿಯ ಕಡೆಗೆ ದೂಡಿಕೊಂಡು ಬಂದಿದ್ದಾರೆ. ಆ ವೇಳೆ ರಾಮಚಂದ್ರ ಗೌಡರು ಕೋವಿಯ ಟೈಗರ್ ಎಳೆದಿದ್ದಾರೆ. ಗುಂಡು ವಿನೋದರವರ ಎದೆಯನ್ನು ಹೊಕ್ಕು ಸಾವನ್ನಪ್ಪಿದ್ದಾರೆ. ತದನಂತರ ಆರೋಪಿಯು ಆಸಿಡನ್ನು ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಎಸ್ಪಿ ಯತೀಶ್ ಹೇಳಿದ್ದಾರೆ.