ಮಂಡ್ಯ : ಭಾರತೀಯ ಜನತಾ ಪಕ್ಷ ಮಂಡ್ಯ ಲೋಕಸಭಾ ಕ್ಷೇತ್ರವನ್ನು ಮೈತ್ರಿ ಅಭ್ಯರ್ಥಿಗೆ ಬಿಟ್ಟುಕೊಟ್ಟ ಬೆನ್ನಲ್ಲೇ ಜೆಡಿಎಸ್ ಪಾಳಯದಲ್ಲಿ ಚುನಾವಣಾ ಚಟುವಟಿಕೆಗಳು ಗರಿಗೆದರಿದ್ದು, ಪ್ರಮುಖವಾಗಿ ನಡೆದ ಸಭೆಯಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸಂಸದೆ ಸುಮಲತಾ ವಿರುದ್ಧ ಕದನ ವಿರಾಮ ಘೋಷಿಸಿದ್ದಾರೆ.
ಅಂಬರೀಶ್ ಅವರೂ ನಾವೆಲ್ಲ ಒಟ್ಟಾಗಿ ಪ್ರೀತಿಯಿಂದ ಬೆಳೆದವರು. ನಮ್ಮ ಪಕ್ಷದಿಂದಲೇ ಅಂಬರೀಶ್ ಅವರು ಪಾರ್ಲಿಮೆಂಟ್ ಪ್ರವೇಶ ಮಾಡಿದ್ದರು. ವಿಧಿ ಆಟವೋ ಏನೋ ನಾನು ಮುಖ್ಯಮಂತ್ರಿ ಆಗಿದ್ದಾಗಲೇ ಡಾ.ರಾಜಕುಮಾರ್ ಅವರು, ಅಂಬರೀಶ್ ಅವರು ನಿಧನರಾದರು. ಕಂಠೀರವ ಸ್ಟುಡಿಯೋದಲ್ಲಿ ರಾಜ್ ಅವರ ಸ್ಮಾರಕಕ್ಕೆ ಸ್ಥಳ ನೀಡಿದ್ದು ನಾನೇ. ಆ ಮೇರುನಟನ ಸ್ಮಾರಕದ ಸಮೀಪದಲ್ಲಿಯೇ ಅಂಬರೀಶ್ ಅವರ ಸ್ಮಾರಕಕ್ಕೂ ಜಾಗ ಗುರುತಿಸಿ, ಗೌರವ ಕೊಟ್ಟೆ. ಇದೆಲ್ಲವನ್ನೂ ಆ ದೇವರೇ ನನ್ನಿಂದ ಮಾಡಿಸಿದ್ದಾನೆ ಎಂದು ನಂಬಿದ್ದೇನೆ ಎಂದರು.
ರಾಜಕಾರಣದಲ್ಲಿ ಟೀಕೆ ಪ್ರತಿ ಟೀಕೆಗಳು ಇರುತ್ತವೆ. ಸುಮಲತಾ ಅವರು ನಾವು ಪರಸ್ವರ ಟೀಕೆ ಟಿಪ್ಪಣಿ ಮಾಡಿಕೊಂಡಿದ್ದೇವೆ. ಅದು ಮುಗಿದ ಅಧ್ಯಾಯ. ಅದು ಸಂಬಂಧಗಳಿಗೆ ಧಕೆ ತರುವಂಥದ್ದು ಬೇಡ. ಸುಮಲತಾ ಅವರು ನನ್ನ ಸ್ವಂತ ಅಕ್ಕ ಇದ್ದಂತೆ. ಸಂಘರ್ಷವನ್ನು ಮುಂದುವರಿಸಿಕೊಂಡು ಹೋಗಲ್ಲ. ಅದರ ಅಗತ್ಯವೂ ಇಲ್ಲ ಎಂದು ಹೇಳಿದ ಕುಮಾರಸ್ವಾಮಿ ಸುಮಲತಾ ವಿರುದ್ಧ ಕದನ ವಿರಾಮ ಘೋಷಿಸಿದರು.