Saturday, January 3, 2026
Google search engine

Homeರಾಜ್ಯಕೈಮಗ್ಗ ಉತ್ತೇಜನಕ್ಕೆ ಜವಳಿ ನೀತಿಯಲ್ಲಿ ಪೂರಕ ಅಂಶಗಳನ್ನು ಅಳವಡಿಸಲಾಗುವುದು : ಸಚಿವ ಶಿವಾನಂದ ಪಾಟೀಲ

ಕೈಮಗ್ಗ ಉತ್ತೇಜನಕ್ಕೆ ಜವಳಿ ನೀತಿಯಲ್ಲಿ ಪೂರಕ ಅಂಶಗಳನ್ನು ಅಳವಡಿಸಲಾಗುವುದು : ಸಚಿವ ಶಿವಾನಂದ ಪಾಟೀಲ

ಬೆಂಗಳೂರು: ಕೈಮಗ್ಗ ಉತ್ತೇಜನಕ್ಕೆ ಪೂರಕವಾದ ಅಂಶಗಳನ್ನು ನೂತನ ಜವಳಿ ನೀತಿಯಲ್ಲಿ ಅಳವಡಿಸಲಾಗುವುದು ಎಂದು ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.

ಮಹಾಲಕ್ಷ್ಮಿಪುರಂ ಲೇಔಟ್‌ನ ರಾಣಿ ಅಬ್ಬಕ್ಕ ಮೈದಾನದಲ್ಲಿ ಆಯೋಜಿಸಿರುವ 15 ದಿನಗಳ ರಾಷ್ಟ್ರೀಯ ಕೈಮಗ್ಗ ಮೇಳವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ಹೊಸತನ ಅಳವಡಿಸಿಕೊಂಡರೆ ಮಾತ್ರ ಕೈಮಗ್ಗ ಉದ್ಯಮಕ್ಕೆ ಭವಿಷ್ಯ ಇದೆ. ಈ ನಿಟ್ಟಿನಲ್ಲಿ ಪೂರಕ ಅಂಶಗಳನ್ನು ಜವಳಿ ನೀತಿಯಲ್ಲಿ ಸೇರ್ಪಡೆ ಮಾಡಲಾಗುವುದು ಎಂದು ಹೇಳಿದರು.

ನೇಕಾರ ಸಮ್ಮಾನ್‌ ಯೋಜನೆಯಲ್ಲಿ ನೀಡುತ್ತಿದ್ದ 2,000 ರೂ. ಆರ್ಥಿಕ ನೆರವನ್ನು ರಾಜ್ಯ ಸರ್ಕಾರ 5,000 ರೂ.ಗಳಿಗೆ ಹೆಚ್ಚಳ ಮಾಡಿದ್ದು, 2024-25ನೇ ಸಾಲಿನಲ್ಲಿ 1,17,459 ನೇಕಾರರ ಬ್ಯಾಂಕ್‌ ಖಾತೆಗಳಿಗೆ 58.69 ಕೋಟಿ ರೂ. ಜಮಾ ಮಾಡಲಾಗಿದೆ.

2025-26ನೇ ಸಾಲಿನಲ್ಲಿ 1.2 ಲಕ್ಷ ಕೈಮಗ್ಗ ಮತ್ತು ವಿದ್ಯುತ್‌ ಮಗ್ಗ ನೇಕಾರರನ್ನು ಈ ಯೋಜನೆಯಲ್ಲಿ ಅಳವಡಿಸಲು 60 ಕೋಟಿ ರೂ. ಹಂಚಿಕೆ ಮಾಡಲಾಗಿದ್ದು, ಮೊದಲ ಕಂತಿನಲ್ಲಿ ತಲಾ 2,500 ರೂ.ನಂತೆ 29.99 ಕೋಟಿ ರೂ. ಡಿಬಿಟಿ ಮೂಲಕ ಬಿಡುಗಡೆ ಮಾಡಲಾಗಿದೆ ಎಂದು ವಿವರಿಸಿದರು. ನೇಕಾರರ ಮಕ್ಕಳ ಉನ್ನತ ಶಿಕ್ಷಣ ಪ್ರೋತ್ಸಾಹ ದೃಷ್ಟಿಯಿಂದ ವಿದ್ಯಾರ್ಥಿ ವೇತನ ನೀಡಲಾಗುತ್ತಿದ್ದು, 2024-25ನೇ ಸಾಲಿನಲ್ಲಿ 2,843 ವಿದ್ಯಾರ್ಥಿಗಳಿಗೆ 1.65 ಕೋಟಿ ರೂ. ಹಾಗೂ 2025-26ನೇ ಸಾಲಿನಲ್ಲಿ ಇದುವರೆಗೆ 1137 ವಿದ್ಯಾರ್ಥಿಗಳಿಗೆ 62.62 ಲಕ್ಷ ರೂ. ನೀಡಲಾಗಿದೆ ಎಂದರು.

ಕೈಮಗ್ಗ ಉತ್ಪನ್ನಗಳ ಮಾರಾಟವನ್ನು ಉತ್ತೇಜಿಸಲು ಪ್ರತಿಶತ 20ರಷ್ಟು ರಿಯಾಯಿತಿ ನೀಡಲಾಗುತ್ತಿದ್ದು, 2024-25ನೇ ಸಾಲಿನಲ್ಲಿ ಈ ಉದ್ದೇಶಕ್ಕೆ 5.04 ಕೋಟಿ ರೂ., 2025-26ನೇ ಸಾಲಿನಲ್ಲಿ 54.93 ಲಕ್ಷ ರೂ. ಸರ್ಕಾರ ಕೈಮಗ್ಗ ನೇಕಾರರ ಸಹಕಾರ ಸಂಘ ಹಾಗೂ ಕೈಮಗ್ಗ ಮಹಾಮಂಡಳಗಳಿಗೆ ನೀಡಲಾಗಿದೆ ಎಂದು ತಿಳಿಸಿದರು.

ವಿದ್ಯುತ್‌ ಮಗ್ಗಗಳಿಗೆ ಹತ್ತು ಹೆಚ್‌ಪಿವರೆಗೆ ಪ್ರತಿಶತ ನೂರರಷ್ಟು ವಿದ್ಯುತ್‌ ರಿಯಾಯಿತಿ ನೀಡಲಾಗಿದ್ದು, 10.1 ರಿಂದ 20 ಹೆಚ್‌ಪಿವರೆಗಿನ ಮಗ್ಗಗಳಿಗೆ ಪ್ರತಿ ಯೂನಿಟ್‌ಗೆ 1.25 ರೂ.ಗಳಂತೆ ರಿಯಾಯಿತಿ ದರದಲ್ಲಿ ವಿದ್ಯುತ್‌ ಪೂರೈಕೆ ಮಾಡಲಾಗುತ್ತಿದೆ. ಇದುವರೆಗೆ ವಿದ್ಯುತ್‌ ಸಹಾಯ ಯೋಜನೆಗೆ 252.97 ಕೋಟಿ ರೂ.ಗಳನ್ನು ಜವಳಿ ಇಲಾಖೆಯಿಂದ ಇಂಧನ ಇಲಾಖೆಗೆ ಭರಿಸಲಾಗಿದೆ ಎಂದರು.

ಇನ್ನೂ ಕಲಬುರಗಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಸಮಗ್ರ ಜವಳಿ ಪಾರ್ಕ್‌ ನಿರ್ಮಾಣ ಮಾಡಲಾಗುತ್ತಿದ್ದು, ಮೂಲ ಸೌಕರ್ಯ ಕಲ್ಪಿಸಲು 390.26 ಕೋಟಿ ರೂ. ಬಿಡುಗಡೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.

ಜವಳಿ ಪಾರ್ಕ್‌ಗೆ 180 ಮೆಗಾ ವ್ಯಾಟ್‌ ವಿದ್ಯುತ್‌ ಪೂರೈಕೆಗೆ ಪವರ್‌ ಸ್ಟೇಷನ್‌ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಈ ಯೋಜನೆಗೆ ನಂದಿಕೂರು ಗ್ರಾಮದ ಎಸ್‌ಟಿಪಿಯಿಂದ 12.09 ಎಂಎಲ್‌ಡಿ ನೀರು ಪೂರೈಕೆ ಮಾಡಲು ಸಮೀಕ್ಷೆ ಕೈಗೊಂಡಿದ್ದು, ಪೈಪ್‌ಲೈನ್‌ ಡಿಸೈಜ್‌ ಕಾರ್ಯ ಪ್ರಗತಿಯಲ್ಲಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಗೋಪಾಲಯ್ಯ ಮಾತನಾಡಿ, ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ನೇಕಾರರ ಸಂಖ್ಯೆ ಅಧಿಕ ಪ್ರಮಾಣದಲ್ಲಿದ್ದು, ಶಾಸಕನಾಗಿ ಕೈಮಗ್ಗ ಅಭಿವೃದ್ಧಿಗೆ ಅಗತ್ಯ ಸಹಕಾರ ನೀಡುತ್ತೇನೆ ಎಂದರು.

ಕಾವೇರಿ ಹ್ಯಾಂಡ್‌ಲೂಮ್‌ ಅಧ್ಯಕ್ಷ ಜೆ.ಬಿ.ಗಣೇಶ್‌ ಮಾತನಾಡಿ, ಕಾವೇರಿ ಹ್ಯಾಂಡ್‌ಲೂಮ್ಸ್‌ ಪುನಶ್ಚೇತನಕ್ಕೆ ಸರ್ಕಾರದಿಂದ 25 ಕೋಟಿ ರೂ. ನೆರವು ಕೊಡಿಸಬೇಕು. ಕೆಎಚ್‌ಡಿಸಿ ಮಾದರಿಯಲ್ಲಿ 4 ಎಚ್‌ ಸೌಲಭ್ಯ ನೀಡಬೇಕು ಎಂದು ಜವಳಿ ಸಚಿವರಿಗೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಕಾರ್ಯದರ್ಶಿ ರೋಹಿಣಿ ಸಿಂಧೂರಿ, ಕೈಮಗ್ಗ ಮತ್ತು ಜವಳಿ ಇಲಾಖೆ ನಿರ್ದೇಶಕಿ, ಜವಳಿ ಅಭಿವೃದ್ಧಿ ಆಯುಕ್ತೆ ಕೆ. ಜ್ಯೋತಿ, ಕೆಎಸ್‌ಟಿಐಡಿಸಿ ಅಧ್ಯಕ್ಷ ಚೇತನ್‌, ಉಪಾಧ್ಯಕ್ಷ ಬಾಲಾಜಿ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular