Monday, June 9, 2025
Google search engine

Homeರಾಜ್ಯರೈತರಿಗೆ ಹಗಲು ವೇಳೆಯೇ ವಿದ್ಯುತ್ ಪೂರೈಕೆ: ಜೂನ್ 11ರಂದು 'ಕುಸುಮ್-ಸಿ' ಯೋಜನೆಗೆ ಸಿಎಂ ಉದ್ಘಾಟನೆ

ರೈತರಿಗೆ ಹಗಲು ವೇಳೆಯೇ ವಿದ್ಯುತ್ ಪೂರೈಕೆ: ಜೂನ್ 11ರಂದು ‘ಕುಸುಮ್-ಸಿ’ ಯೋಜನೆಗೆ ಸಿಎಂ ಉದ್ಘಾಟನೆ

ಬೆಂಗಳೂರು: ರಾಜ್ಯ ಸರ್ಕಾರ ರೈತರಿಗೆ ಹಗಲು ವೇಳೆಯಲ್ಲೇ ಸಮರ್ಪಕ ವಿದ್ಯುತ್ ಪೂರೈಸುವ ಉದ್ದೇಶದಿಂದ ‘ಕುಸುಮ್-ಸಿ’ ಯೋಜನೆಯನ್ನು ಜಾರಿಗೊಳಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೂನ್ 11ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ನೇತಾಜಿ ಕ್ರೀಡಾಂಗಣದಲ್ಲಿ ಈ ಮಹತ್ವದ ಯೋಜನೆಗೆ ಅಧಿಕೃತ ಚಾಲನೆ ನೀಡಲಿದ್ದಾರೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದರು.

ಈ ಯೋಜನೆಯ ಉದ್ದೇಶ ಕೃಷಿ ಪಂಪ್ಸೆಟ್‌ಗಳಿಗೆ ಸ್ಥಳೀಯವಾಗಿ ಉತ್ಪಾದಿತ ಸೌರ ವಿದ್ಯುತ್ ಪೂರೈಸುವ ಮೂಲಕ, ಹಗಲು ಸಮಯದಲ್ಲಿ ನಿರಂತರ, ಗುಣಮಟ್ಟದ ವಿದ್ಯುತ್ ಒದಗಿಸುವುದು. ಫೀಡರ್‌ಗಳ ಬಳಿಯಲ್ಲಿ ಸೌರ ಘಟಕಗಳನ್ನು ಸ್ಥಾಪಿಸಲಾಗುತ್ತಿದ್ದು, ಇದರಿಂದ ಟ್ರಾನ್ಸ್‌ಫಾರ್ಮರ್‌ಗಳ ಮೇಲಿನ ಒತ್ತಡವೂ ತಗ್ಗಲಿದೆ. ಗೌರಿಬಿದನೂರು ತಾಲ್ಲೂಕಿನ ತೊಂಡೇಬಾವಿ ಹೋಬಳಿಯ ಹನುಮೇನಹಳ್ಳಿ ಮತ್ತು ಚರಕಮಟ್ಟೇನಹಳ್ಳಿ ಗ್ರಾಮಗಳಲ್ಲಿ 60 ಎಕರೆ ಭೂಮಿಯಲ್ಲಿ 20 ಮೆಗಾವಾಟ್ ಸಾಮರ್ಥ್ಯದ ಸೌರ ಘಟಕವನ್ನು ಸ್ಥಾಪಿಸಲಾಗಿದೆ.

ರಾಜ್ಯದಲ್ಲಿ ಸ್ಥಾಪನೆಯಾಗಿರುವ ಇದುವರೆಗಿನ ಅತಿದೊಡ್ಡ ಘಟಕವಿದು. ಯೋಜನೆಯ ಮೊತ್ತ ಮೊದಲ ಹಂತದಲ್ಲಿ 2,400 ಮೆಗಾವಾಟ್ ಸೌರ ವಿದ್ಯುತ್ ಉತ್ಪಾದನೆ ಗುರಿಯಾಗಿದ್ದು, ಸುಮಾರು 6.19 ಲಕ್ಷ ಕೃಷಿ ಪಂಪ್ಸೆಟ್‌ಗಳಿಗೆ ಹಗಲು ಸಮಯದಲ್ಲಿ ವಿದ್ಯುತ್ ಪೂರೈಕೆ ನೀಡಲು ಯೋಜನೆ ರೂಪಿಸಲಾಗಿದೆ. ಈಗಾಗಲೇ 200 ಮೆಗಾವಾಟ್ ಘಟಕಗಳ ನಿರ್ಮಾಣ ಪೂರ್ಣಗೊಂಡಿದ್ದು, ಮುಂದಿನ ತಿಂಗಳುಗಳಲ್ಲಿ 545 ಮೆಗಾವಾಟ್ ಸಾಮರ್ಥ್ಯದ ಘಟಕಗಳನ್ನು 93 ಸ್ಥಳಗಳಲ್ಲಿ ಸ್ಥಾಪನೆಗೊಳ್ಳಲಿದೆ. ಡಿಸೆಂಬರ್ 2025ರೊಳಗೆ ಪೂರ್ಣ ಗುರಿ ಸಾಧಿಸುವ ಯೋಜನೆಯಿದೆ.

ಪ್ರತಿ ಮೆಗಾವಾಟ್‌ಗಾಗಿ 4 ಎಕರೆ ಭೂಮಿ ಅಗತ್ಯವಿದ್ದು, ಸರ್ಕಾರಿ ಭೂಮಿ ಉಚಿತವಾಗಿ ನೀಡಲು ಸಿಎಂ ಸೂಚನೆ ನೀಡಿದ್ದಾರೆ. ಖಾಸಗಿ ಭೂಮಿಗೆ ಮಾಲೀಕರಿಗೆ ಎಕರೆಗೆ ಕನಿಷ್ಠ ₹25,000 ಪರಿಹಾರ ನೀಡಲಾಗುತ್ತದೆ. ವಿದ್ಯುತ್ ಉತ್ಪಾದನೆಗಾಗಿ ಖಾಸಗಿ ಸಂಸ್ಥೆಗಳು ಭೂಮಿ ಗುತ್ತಿಗೆಗೆ ಪಡೆದು ಘಟಕಗಳನ್ನು ನಿರ್ಮಿಸುತ್ತವೆ, ಸರ್ಕಾರ ಅವರಿಂದ ವಿದ್ಯುತ್ ಖರೀದಿ ಮಾಡಿ ಆಯಾ ಪ್ರದೇಶದ ರೈತರಿಗೆ ಪೂರೈಸುತ್ತದೆ.

ಈ ಯೋಜನೆಯು ಹಗಲು ಸಮಯದಲ್ಲಿ ಉಚಿತ ವಿದ್ಯುತ್ ನೀಡುವ ನಿಟ್ಟಿನಲ್ಲಿ ಕ್ರಾಂತಿಕಾರಿ ಹೆಜ್ಜೆಯಾಗಿ ಪರಿಗಣಿಸಲಾಗುತ್ತಿದ್ದು, ರೈತರ ಕೃಷಿ ಅವಲಂಬನೆಯು ಹೆಚ್ಚು ಸುಲಭ ಹಾಗೂ ಸಮರ್ಥವಾಗಲಿದೆ ಎಂದು ಸಚಿವ ಜಾರ್ಜ್ ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ. ಎನ್. ಶಿವಶಂಕರ್, ಕ್ರೆಡಲ್ ಎಂಡಿ ಕೆ.ಪಿ. ರುದ್ರಪ್ಪಯ್ಯ, ತಾಂತ್ರಿಕ ನಿರ್ದೇಶಕ ಎಚ್.ಜೆ. ರಮೇಶ್ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular