Monday, April 21, 2025
Google search engine

Homeಅಪರಾಧಕಾನೂನುಚುನಾವಣಾ ಬಾಂಡ್ ಯೋಜನೆ ರದ್ದುಗೊಳಿಸಿದ ಸುಪ್ರೀಂ; ಬಯಲಾಗಲಿದೆ ದೇಣಿಗೆ ವಿವರ, ನಗದೀಕರಿಸದ ಹಣ ದೇಣಿಗೆದಾರರಿಗೆ ಮರುಪಾವತಿ

ಚುನಾವಣಾ ಬಾಂಡ್ ಯೋಜನೆ ರದ್ದುಗೊಳಿಸಿದ ಸುಪ್ರೀಂ; ಬಯಲಾಗಲಿದೆ ದೇಣಿಗೆ ವಿವರ, ನಗದೀಕರಿಸದ ಹಣ ದೇಣಿಗೆದಾರರಿಗೆ ಮರುಪಾವತಿ

ರಾಜಕೀಯ ಪಕ್ಷಗಳಿಗೆ ಅನಾಮಧೇಯ ದೇಣಿಗೆಗಳನ್ನು ನೀಡಲು ಅನುಮತಿಸುವ ಚುನಾವಣಾ ಬಾಂಡ್ ಯೋಜನೆಯನ್ನು ಸುಪ್ರೀಂ ಕೋರ್ಟ್‌ ಗುರುವಾರ ರದ್ದುಗೊಳಿಸಿ ಮಹತ್ವದ ತೀರ್ಪು ನೀಡಿದೆ.

ಯೋಜನೆ ಜಾರಿಗೆ ತರಲೆಂದು ಆದಾಯ ತೆರಿಗೆ ಕಾಯಿದೆ ಮತ್ತು ಜನ ಪ್ರತಿನಿಧಿ ಕಾಯಿದೆಗೆ ಮಾಡಿದ ತಿದ್ದುಪಡಿಗಳನ್ನು ಸಿಜೆಐ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿ ಆರ್‌ ಗವಾಯಿ, ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರನ್ನೊಳಗೊಂಡ ಐವರು ಸದಸ್ಯರ ಸಾಂವಿಧಾನಿಕ ಪೀಠ ಸರ್ವಾನುಮತದಿಂದ ರದ್ದುಗೊಳಿಸಿತು.

ಚುನಾವಣಾ ಬಾಂಡ್ ಯೋಜನೆಯು ತನ್ನ ಅನಾಮಧೇಯ ಸ್ವರೂಪದಿಂದಾಗಿ ಮಾಹಿತಿ ಹಕ್ಕಿನ ಉಲ್ಲಂಘನೆಯಾಗಿದ್ದು ಸಂವಿಧಾನದ 19 (1) (ಎ) ವಿಧಿಯಡಿ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 139 ಮತ್ತು ಹಣಕಾಸು ಕಾಯಿದೆಯ 2017ರ ಸೆಕ್ಷನ್ 13 (ಬಿ) ಗೆ ತಿದ್ದುಪಡಿ ಮಾಡಿ ಸೆಕ್ಷನ್ 29 (1) (ಸಿ) ಗೆ ಅವಕಾಶ ನೀಡುವ ಚುನಾವಣಾ ಬಾಂಡ್ ಯೋಜನೆ ಸಂವಿಧಾನದ 19 (1) (ಎ) ವಿಧಿಯನ್ನು ಉಲ್ಲಂಘಿಸುತ್ತದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.

ಚುನಾವಣಾ ಬಾಂಡ್‌ಗಳನ್ನು ವಿತರಿಸುವ ಬ್ಯಾಂಕ್ ಅಂದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಚುನಾವಣಾ ಬಾಂಡ್‌ಗಳನ್ನು ಸ್ವೀಕರಿಸಿದ ರಾಜಕೀಯ ಪಕ್ಷಗಳ ವಿವರಗಳನ್ನು ಮತ್ತು ಸ್ವೀಕರಿಸಲಾದ ಎಲ್ಲಾ ವಿವರಗಳನ್ನು ಮಾರ್ಚ್ 6 ರೊಳಗೆ ಭಾರತದ ಚುನಾವಣಾ ಆಯೋಗಕ್ಕೆ (ಇಸಿಐ) ಸಲ್ಲಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.

ಮಾರ್ಚ್ 13ರೊಳಗೆ, ಚುನಾವಣಾ ಆಯೋಗ ತನ್ನ ಅಧಿಕೃತ ಜಾಲತಾಣದಲ್ಲಿ ಆ ಮಾಹಿತಿಯನ್ನು ಪ್ರಕಟಿಸಬೇಕು ಬಳಿಕ ರಾಜಕೀಯ ಪಕ್ಷಗಳು ಚುನಾವಣಾ ಬಾಂಡ್‌ಗಳ ಮೊತ್ತವನ್ನು ಖರೀದಿದಾರರ ಖಾತೆಗೆ ಮರುಪಾವತಿಸಬೇಕು ಎಂದು ಕೂಡ ನಿರ್ದೇಶಿಸಿದೆ.

ಸಿಜೆಐ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಬರೆದ ಎರಡು ತೀರ್ಪುಗಳು ಸಹಮತದಿಂದ ಕೂಡಿದ್ದವು.

ಈ ಯೋಜನೆಯು ಅಧಿಕಾರದಲ್ಲಿರುವ ಪಕ್ಷಕ್ಕೆ ಲಾಭ ಪಡೆಯಲು ಸಹಾಯ ಮಾಡುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

“ಆರ್ಥಿಕ ಅಸಮಾನತೆಯು ವಿಭಿನ್ನ ಮಟ್ಟದ ರಾಜಕೀಯ ತೊಡಗುವಿಕೆಗೆ ಕಾರಣವಾಗುತ್ತದೆ. ಮಾಹಿತಿಗೆ ಅವಕಾಶ ನೀಡಿದರೆ ಅದು ನೀತಿ ನಿರೂಪಣೆಯ ಮೇಲೆ ಪ್ರಭಾವ ಬೀರಲು ಕಾರಣವಾಗುತ್ತದೆ ಮತ್ತು ಬದಲಿ ವ್ಯವಹಾರ ವ್ಯವಸ್ಥೆಗಳಿಗೆ ಇಂಬು ನೀಡಿ ಅಧಿಕಾರದಲ್ಲಿರುವ ಪಕ್ಷಕ್ಕೆ ಸಹಾಯ ಮಾಡುತ್ತದೆ” ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.

ಚುನಾವಣಾ ಬಾಂಡ್ ಯೋಜನೆಯು ರಾಜಕೀಯದಲ್ಲಿ ಕಪ್ಪುಹಣ ನಿಗ್ರಹಿಸಲು ಸಹಾಯ ಮಾಡುತ್ತದೆ ಎಂದು ಹೇಳುವ ಮೂಲಕ ಅದನ್ನು ಸಮರ್ಥಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ದಾನಿಗಳ ಗೌಪ್ಯತೆ ಮುಖ್ಯವಾಗಿದ್ದರೂ, ಸಂಪೂರ್ಣ ವಿನಾಯಿತಿ ನೀಡುವ ಮೂಲಕ ರಾಜಕೀಯ ನಿಧಿಗೆ ಸಂಬಂಧಿಸಿದಂತೆ ಪಾರದರ್ಶಕತೆಯನ್ನು ಸಾಧಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಈ ಯೋಜನೆಯಡಿ ಸೆಪ್ಟೆಂಬರ್ 30, 2023ರವರೆಗೆ ಮಾರಾಟವಾದ ಚುನಾವಣಾ ಬಾಂಡ್‌ಗಳ ಮಾಹಿತಿ ನೀಡುವಂತೆ ತೀರ್ಪು ಕಾಯ್ದಿರಿಸುವ ವೇಳೆ ಸುಪ್ರೀಂ ಕೋರ್ಟ್ ಭಾರತದ ಚುನಾವಣಾ ಆಯೋಗಕ್ಕೆ (ಇಸಿಐ) ಸೂಚಿಸಿತ್ತು.

ಚುನಾವಣಾ ಬಾಂಡ್ ಯೋಜನೆಯು ದಾನಿಗಳಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ (ಎಸ್‌ಬಿಐ) ಬಾಂಡ್‌ಗಳನ್ನು ಖರೀದಿಸಿ ಅನಾಮಧೇಯವಾಗಿ ರಾಜಕೀಯ ಪಕ್ಷಕ್ಕೆ ಹಣ ಕಳುಹಿಸಲು ಅನುವು ಮಾಡಿಕೊಡುತ್ತಿತ್ತು.

ಚುನಾವಣಾ ಬಾಂಡ್‌ ಎಂಬುದು ಭರವಸೆಯ ಪತ್ರದ ರೂಪದಲ್ಲಿದ್ದು, ಅದನ್ನು ಯಾವುದೇ ವ್ಯಕ್ತಿ, ಕಂಪೆನಿ, ಸಂಸ್ಥೆ ಅಥವಾ ಸಂಘಟನೆಯ ವ್ಯಕ್ತಿಗಳು ಖರೀದಿಸಬಹುದಾಗಿದೆ. ಆ ವ್ಯಕ್ತಿ ಅಥವಾ ಸಂಸ್ಥೆಯು ಭಾರತೀಯತೆಯನ್ನು ಹೊಂದಿರಬೇಕಷ್ಟೆ. ಚುನಾವಣಾ ಬಾಂಡ್‌ ವಿಭಿನ್ನ ಬಗೆಯಲ್ಲಿದ್ದು, ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ನಿರ್ದಿಷ್ಟ ಉದ್ದೇಶಕ್ಕಾಗಿ ಅವುಗಳನ್ನು ನೀಡಲು ಯೋಜಿಸಲಾಗಿತ್ತು.

RELATED ARTICLES
- Advertisment -
Google search engine

Most Popular