ಹೊಸದಿಲ್ಲಿ : ಮುಖ್ಯ ಚುನಾವಣಾ ಆಯುಕ್ತ ಹಾಗೂ ಚುನಾವಣಾ ಆಯುಕ್ತರ ನೇಮಕಕ್ಕೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯನ್ನು ಒಳಗೊಳ್ಳದ ಹೊಸ ಕಾನೂನಿನ್ವಯ ರಚನೆಗೊಂಡ ಸಮಿತಿಯ ಕಾರ್ಯಾಚರಣೆಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಸ್ವಯಂ ಸೇವಾ ಸಂಸ್ಥೆಯೊಂದು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಹಾಗೂ ದಿಪಾಂಕರ್ ದತ್ತಾ ಅವರಿದ್ದ ಪೀಠವು ಈ ಕುರಿತಂತೆ ಕೇಂದ್ರಕ್ಕೆ ನೋಟಿಸ್ ಜಾರಿ ಮಾಡಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಬಾಕಿ ಉಳಿದ ಇತರ ಅರ್ಜಿಗಳನ್ನು ಏಪ್ರಿಲ್‌ನಲ್ಲಿ ವಿಚಾರಣೆ ನಡೆಸುವುದಾಗಿ ಪೀಠ ಹೇಳಿದೆ. ಮುಖ್ಯ ಚುನಾವಣಾ ಆಯುಕ್ತ ಹಾಗೂ ಚುನಾವಣಾ ಆಯುಕ್ತರ (ನೇಮಕಾತಿ, ಕಚೇರಿಯ ಷರತ್ತುಗಳು) ಕಾಯ್ದೆ ೨೦೨೩ರ ಅನ್ವಯ ಸಂವಿಧಾನಾತ್ಮಕ ಮಾನ್ಯತೆಯನ್ನು ಪ್ರಶ್ನಿಸಿದ್ದ ಅರ್ಜಿಯ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್‌ನ ಪೀಠ ಮಂಗಳವಾರ ನಡೆಸಿತು.
ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು ಸ್ವಯಂ ಸೇವಾ ಸಂಸ್ಥೆಯ ಪರವಾಗಿ ವಾದ ಮಂಡಿಸಿದರು. `ಮುಖ್ಯ ಚುನಾವಣಾ ಆಯುಕ್ತ ಹಾಗೂ ಚುನಾವಣಾ ಆಯುಕ್ತರ ನೇಮಕ ಸಮಿತಿಯಲ್ಲಿ ಭಾರತೀಯ ಮುಖ್ಯ ನ್ಯಾಯಮೂರ್ತಿ ಇರಬೇಕು ಎಂಬ ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠದ ಆದೇಶಕ್ಕೆ ತದ್ವಿರುದ್ಧವಾದ ನಿಲುವು ನೂತನ ಕಾನೂನಿನಲ್ಲಿದೆ. ಇಬ್ಬರು ಚುನಾವಣಾ ಆಯುಕ್ತರು ನಿವೃತ್ತಿ ಹೊಂದಲಿದ್ದಾರೆ.
ಇಂಥ ಸಂದರ್ಭದಲ್ಲಿ ಈ ಕಾನೂನಿಗೆ ತಡೆ ನೀಡದಿದ್ದರೆ ಅರ್ಜಿ ಸಲ್ಲಿಸಿದ್ದೂ ವ್ಯರ್ಥವಾಗಲಿದೆ. ಹೀಗಾಗಿ ಮಧ್ಯಂತರ ಆದೇಶ ಮಾಡಬೇಕು ಎಂದು ಮನವಿ ಮಾಡಿದರು. ಕ್ಷಮಿಸಿ, ಈ ವಿಷಯದಲ್ಲಿ ನಾವು ಮಧ್ಯಂತರ ಆದೇಶ ಮಾಡುವುದಿಲ್ಲ. ಸಾಂವಿಧಾನಿಕ ಸಿಂಧುತ್ವ ವಿಷಯವು ಎಂದಿಗೂ ನಿರುಪಯುಕ್ತವಾಗುವುದಿಲ್ಲ. ಮಧ್ಯಂತರ ಆದೇಶ ನೀಡುವ ಸಂದರ್ಭದಲ್ಲಿ ನಮಗೆ ನಮ್ಮ ಮಿತಿಗಳ ಅರಿವಿದೆ ಎಂದು ಪೀಠವು ಹೇಳಿತು. ಮುಖ್ಯ ಚುನಾವಣಾಧಿಕಾರಿ ಹಾಗೂ ಇತರ ಚುನಾವಣಾಧಿಕಾರಿಗಳ ನೇಮಕವನ್ನು ಸಮಿತಿಯ ಶಿಫಾರಸಿನ ಮೇಲೆ ರಾಷ್ಟ್ರಪತಿ ಅವರು ಮಾಡಬಹುದು.
ಈ ಸಮಿತಿಯ ಅಧ್ಯಕ್ಷತೆಯನ್ನು ಪ್ರಧಾನಮಂತ್ರಿ ವಹಿಸಲಿದ್ದಾರೆ. ಲೋಕಸಭೆಯ ವಿರೋಧ ಪಕ್ಷದ ನಾಯಕ, ಪ್ರಧಾನಿ ನೇಮಕ ಮಾಡುವ ಕೇಂದ್ರ ಸಂಪುಟದ ಒಬ್ಬ ಸಚಿವ ಸದಸ್ಯರಾಗಿರಲಿದ್ದಾರೆ. ಈ ಸಮಿತಿಯಲ್ಲಿ ಪ್ರಧಾನಿ ಮತ್ತು ಪ್ರಧಾನಿಯಿಂದ ನೇಮಕಗೊಂಡ ಸಚಿವ ಇರುವುದರಿಂದ ಸಮಿತಿಯಲ್ಲಿ ಒಂದು ಕಡೆಯವರ ಪ್ರಭಾವ ಹೆಚ್ಚಾಗಲಿದೆ. ಹೀಗಾಗಿ ಈ ಕಾನೂನಿಗೆ ತಡೆ ಹೇರಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.