Friday, February 27, 2026
Google search engine

Homeಅಪರಾಧಕಾನೂನುಹೈಕೋರ್ಟ್ ತೀರ್ಪಿಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ : ಬಾಗೇಪಲ್ಲಿ ಶಾಸಕ ಸ್ಥಾನಕ್ಕೆ ಮತ್ತೆ ಜೀವ

ಹೈಕೋರ್ಟ್ ತೀರ್ಪಿಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ : ಬಾಗೇಪಲ್ಲಿ ಶಾಸಕ ಸ್ಥಾನಕ್ಕೆ ಮತ್ತೆ ಜೀವ

ನವದೆಹಲಿ : ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಶಾಸಕ  ಎಸ್.ಎನ್. ಸುಬ್ಬಾರೆಡ್ಡಿ ಆಯ್ಕೆ ಅಸಿಂಧುಗೊಳಿಸಿ ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪಿಗೆ ಸುಪ್ರೀಂಕೋರ್ಟ್​​ ತಡೆಯಾಜ್ಞೆ ನೀಡಿದ್ದು, ಕಾಂಗ್ರೆಸ್​​ ನಾಯಕನಿಗೆ ತಾತ್ಕಾಲಿಕ ರಿಲೀಫ್​​ ನೀಡಿದೆ. ಆದಾಯ ಬಹಿರಂಗಪಡಿಸಿದರೆ ಸಾಕೇ, ವ್ಯವಹಾರವನ್ನೂ ಬಹಿರಂಗಪಡಿಸಬೇಕೇ ಎಂಬ ಬಗ್ಗೆ ವಿಚಾರಣೆ ಅಗತ್ಯವೆಂದು ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದ್ದು, 6 ವಾರದಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ಎದುರಾಳಿ ಅಭ್ಯರ್ಥಿಯಾಗಿದ್ದ  ಸಿ.ಮುನಿರಾಜುಗೆ ಸೂಚನೆ ನೀಡಿದೆ. ಸೆಪ್ಟೆಂಬರ್ ತಿಂಗಳಿಗೆ ನ್ಯಾಯಾಲಯ ವಿಚಾರಣೆ ಮುಂದೂಡಿದ್ದು, ಸುಪ್ರೀಂಕೋರ್ಟ್ ಈ ಆದೇಶದಿಂದ ಎಸ್.ಎನ್. ಸುಬ್ಬಾರೆಡ್ಡಿ ಶಾಸಕ ಸ್ಥಾನಕ್ಕೆ ಮತ್ತೆ ಜೀವ ಸಿಕ್ಕಿದೆ.

ಚುನಾವಣೆಯಲ್ಲಿ ಎಸ್‌.ಎನ್‌. ಸುಬ್ಬಾರೆಡ್ಡಿ ಸಲ್ಲಿಸಿದ್ದ ನಾಮಪತ್ರ ದೋಷದಿಂದ ಕೂಡಿದೆ. ಆಸ್ತಿ ಮಾಹಿತಿ ಮುಚ್ಚಿಟ್ಟು ಅವರು ಸುಳ್ಳು ಪ್ರಮಾಣಪತ್ರ ಸಲ್ಲಿಸಿದ್ದಾರೆ. ಹೀಗಾಗಿ ಅವರ ಆಯ್ಕೆಯನ್ನು ಅಸಿಂಧುಗೊಳಿಸಬೇಕೆಂದು ಬಿಜೆಪಿ ಪರಾಜಿತ ಅಭ್ಯರ್ಥಿ ಮುನಿರಾಜು ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದ ಸುಬ್ಬಾರೆಡ್ಡಿ, ಚುನಾವಣಾ ತಕರಾರು ಅರ್ಜಿಯಲ್ಲಿ ಯಾವುದೇ ಹುರುಳಿಲ್ಲ. ಹೀಗಾಗಿ ಅದನ್ನು ವಜಾ ಮಾಡಬೇಕೆಂದು ಮನವಿ ಮಾಡಿದ್ದರು. ಪರ ವಿರೋಧ ವಾದ ಆಲಿಸಿದ್ದ ಹೈಕೋರ್ಟ್ ಸುಬ್ಬಾರೆಡ್ಡಿ ಅರ್ಜಿಯನ್ನು ವಜಾ ಮಾಡಿದ್ದಲ್ಲದೆ, ಅವರ ಆಯ್ಕೆಯನ್ನು ಅಸಿಂಧುಗೊಳಿಸಿ ಆದೇಶಿಸಿತ್ತು. ಹೀಗಿದ್ದರೂ  ಎದುರಾಳಿ ಅಭ್ಯರ್ಥಿಯಾಗಿದ್ದ ಸಿ.ಮುನಿರಾಜು ವಿಜಯಿ ಎಂದು ಕೋರ್ಟ್​​ ಘೋಷಿಸಿರಲಿಲ್ಲ.

ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ 6 ತಿಂಗಳೊಳಗಾಗಿ ತಡೆಯಾಜ್ಞೆ ನೀಡದಿದ್ದರೆ, ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರಕ್ಕೆ ಮರು ಚುನಾವಣೆ ನಡೆಸುವುದು ಅನಿವಾರ್ಯ ಎನ್ನುವ ಸ್ಥಿತಿ ಉದ್ಭವಿಸಿತ್ತು. ಈ ಸಂಬಂಧ ಪ್ರತಿಕ್ರಿಯಿಸಿದ್ದ ಸುಬ್ಬಾರೆಡ್ಡಿ ಇದು ದೊಡ್ಡ ಪ್ರಕರಣವೇನಲ್ಲ. ಸೋತಿರುವವರೆಲ್ಲರೂ ಈ ರೀತಿ ರಾಜಕೀಯ ದ್ವೇಷ ತೀರಿಸಿಕೊಳ್ಳಲು ಮುಂದಾದರೆ, ಮುಂದಿನ ದಿನಗಳಲ್ಲಿ ಖಂಡಿತವಾಗಿಯೂ ಕಷ್ಟವಾಗುತ್ತದೆ ಎಂದಿದ್ದರು. ಅಲ್ಲದೆ ಹೈಕೋರ್ಟ್​​ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್​​ ಮೊರೆ ಹೋಗಿದ್ದರು. ಈಗ ಸರ್ವೋಚ್ಚ ನ್ಯಾಯಾಲಯ ಹೈಕೋರ್ಟ್​​ ತೀರ್ಪಿಗೆ ತಡೆ ನೀಡಿರುವ ಹಿನ್ನೆಲೆ ಕಾಂಗ್ರೆಸ್​​ ನಾಯಕ ಸುಬ್ಬಾರೆಡ್ಡಿಗೆ ಕಾನೂನು ಹೋರಾಟದಲ್ಲಿ ಮೊದಲ ಗೆಲುವು ಸಿಕ್ಕಂತಾಗಿದೆ.

ಶಾಸಕ ಸುಬ್ಬಾರೆಡ್ಡಿಗೆ ಸುಪ್ರೀಂಕೋರ್ಟ್​​ನಲ್ಲಿ ರಿಲೀಫ್ ಹಿನ್ನೆಲೆ ಬಾಗೇಪಲ್ಲಿಯಲ್ಲಿ ಬೆಂಬಲಿಗರಿಂದ ಸಂಭ್ರಮಾಚರಣೆ ನಡೆದಿದೆ. ಪಟ್ಟಣದಲ್ಲಿ ಪಟಾಕಿ ಸಿಡಿಸಿ, ಜೈಕಾರ ಕೂಗಿ ಸಂತಸ ವ್ಯಕ್ತಪಡಿಸಿದ್ದಾರೆ.

RELATED ARTICLES
- Advertisment -
Google search engine

Most Popular