ಬೆಂಗಳೂರು: ಇನ್‌ಫೋರ್ಸ್‌ಮೆಂಟ್ ಡೈರೆಕ್ಟೊರೆಟ್ (ಇಡಿ) ನ ವರ್ತನೆ, ಕಾರ್ಯವೈಖರಿ ಮತ್ತು ಅದರ ರಾಜಕೀಯ ಬಳಕೆಯ ವಿರುದ್ಧವಾಗಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಮಹತ್ವದ್ದಾಗಿದ್ದು, ಇದರಿಂದ ನ್ಯಾಯಾಂಗದ ಪ್ರಭಾವ ಮತ್ತು ಗಣ್ಯತೆಯು ಮತ್ತಷ್ಟು ಖಚಿತಗೊಂಡಿದೆ ಎಂದು ಬಮುಲ್ ಅಧ್ಯಕ್ಷ ಹಾಗೂ ಮಾಜಿ ಸಂಸದ ಡಿ.ಕೆ. ಸುರೇಶ್ ಅಭಿಪ್ರಾಯಪಟ್ಟಿದ್ದಾರೆ.
ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ಇ.ಡಿ ಸಂಸ್ಥೆ ರಾಜಕೀಯ ಪ್ರಯೋಜನಕ್ಕಾಗಿ ದುರ್ಬಳಕೆ ಆಗುತ್ತಿದೆ ಎಂಬ ಅಭಿಪ್ರಾಯವನ್ನು ಬಹುಶಃ ಎಲ್ಲರೂ ಹೊಂದಿದ್ದಾರೆ. ಇದು ಮೊದಲ ಬಾರಿಗೆ ಸುಪ್ರೀಂ ಕೋರ್ಟ್ ಇಡಿಗೆ ‘ಬ್ರೇಕ್’ ಹಾಕುತ್ತಿರುವುದಲ್ಲ. ಕಳೆದ ಎರಡು ವರ್ಷಗಳಿಂದ ಕೂಡ ಈ ವಿಚಾರವಾಗಿ ತೀವ್ರ ಚಿಂತೆ ವ್ಯಕ್ತಪಡಿಸುತ್ತಲೇ ಬಂದಿದೆ,” ಎಂದರು.
ಇದನ್ನು ರಾಜಕೀಯ ಅಸ್ತ್ರವಾಗಿ ಬಳಸಲಾಗುತ್ತಿರುವುದರ ಪರಿಣಾಮ ವಿರೋಧ ಪಕ್ಷದ ನಾಯಕರನ್ನು ಗುರಿ ಮಾಡಲಾಗುತ್ತಿದೆ ಎಂಬುದು ಸ್ಪಷ್ಟವಾಗಿದೆ. ಇತ್ತೀಚೆಗೆ ಮದ್ರಾಸ್ ಹೈಕೋರ್ಟ್ ಕೂಡ ಇಡಿ ಅಧಿಕಾರಿಗಳ ವಿರುದ್ಧ ತೀವ್ರ ಟೀಕೆಗಳನ್ನು ವ್ಯಕ್ತಪಡಿಸಿದ್ದು, ಇದರ ತೀವ್ರತೆ ಎಷ್ಟು ಹೆಚ್ಚಾಗಿದೆ ಎಂಬುದನ್ನು ಸೂಚಿಸುತ್ತದೆ.
ರಾಜಕೀಯ ನಾಯಕರುಗಳು ಇಡಿಯಿಂದ ಡ್ಯಾಮೇಜ್ ಆಗುತ್ತಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ, “ರಾಜಕೀಯದಲ್ಲಿ ಎಲ್ಲಾ ರೀತಿಯ ಸವಾಲುಗಳನ್ನು ಎದುರಿಸಲು ನಾವು ಸಿದ್ಧರಾಗಿರಬೇಕು. ಆದರೆ, ಕೆಲವರು ಇದನ್ನು ಶಕ್ತಿಯ ಅಸ್ತ್ರವಾಗಿ ಬಳಸುತ್ತಾ, ಪ್ರತಿಪಕ್ಷ ನಾಯಕರನ್ನು ಸಂಕಷ್ಟಕ್ಕೆ ನೂಕಲು ಪ್ರಯತ್ನಿಸುತ್ತಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪು ಈ ಷಡ್ಯಂತ್ರಗಳಿಗೆ ಬಲವಾದ ಹೊಡೆತ ನೀಡಿದೆ,” ಎಂದರು.
ನಿಮ್ಮ ಮೇಲಿನ ಪ್ರಕರಣವೂ ರಾಜಕೀಯ ಷಡ್ಯಂತ್ರದ ಭಾಗವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ, ಇಡಿಯಿಂದ ಸಿಬಿಐಗೆ, ಆದಾಯ ತೆರಿಗೆ ಇಲಾಖೆಗೆ ಪತ್ರ ಬರೆಯುವಂತಹ ಕಾರ್ಯಗಳ ಮೂಲಕ ನಿರಂತರವಾಗಿ ಒತ್ತಡ ಹಾಕುವ ಪ್ರಯತ್ನವಾಗುತ್ತಿದೆ. ಇದು ನ್ಯಾಯಕ್ಕಾಗಿ ನಡೆಯುವ ಹೋರಾಟವಲ್ಲ, ಇದು ರಾಜಕೀಯ ಹೆಣೆತೆಯ ಭಾಗವಾಗಿದೆ ಎಂದು ಅವರು ವಿವರಿಸಿದರು.
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿ ಎಸ್ಐಟಿ ರಚನೆಯ ಕುರಿತು ಅವರು ಮಾತನಾಡುತ್ತಾ, “ಶ್ರೀಕ್ಷೇತ್ರ ಧರ್ಮಸ್ಥಳ ರಾಜ್ಯದ ಬಹುತೇಕ ಮಂದಿ ಭಕ್ತರ ನಂಬಿಕೆಯ ಕೇಂದ್ರವಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಜನರಲ್ಲಿ ಏರ್ಪಟ್ಟಿರುವ ಅನುಮಾನಗಳನ್ನು ದೂರ ಮಾಡುವುದು ಸರ್ಕಾರದ ಕರ್ತವ್ಯ. ಇದು ಹಿಂದೂ ವಿರೋಧಿ ನೀತಿ ಅಲ್ಲ, ಹಿಂದೂ ಪರ ನಿಲುವಾಗಿದೆ,” ಎಂದರು.
ಇದೇ ವೇಳೆ ಬಿಬಿಎಂಪಿಯನ್ನು ಐದು ಪಾಲಿಕೆಗಳಾಗಿ ವಿಭಾಗಿಸುವ ಪ್ರಸ್ತಾಪದ ಕುರಿತು ಮಾತನಾಡಿದ ಅವರು, “ಬೆಂಗಳೂರು ನಗರ ವ್ಯಾಪಕವಾಗಿ ವಿಸ್ತಾರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಉತ್ತಮ ಆಡಳಿತ ನೀಡಲು ಈ ತೀರ್ಮಾನ ಅಗತ್ಯವಾಗಿದೆ. ಗ್ರಾಮಾಂತರ ಭಾಗಗಳು ನಗರೀಕರಣದ ವೇಗದಿಂದ ನಗರ ಭಾಗಗಳಾಗಿ ಪರಿವರ್ತಿತವಾಗುತ್ತಿವೆ. ಈ ಪ್ರದೇಶಗಳಲ್ಲಿ ಮೂಲಸೌಕರ್ಯ ಒದಗಿಸಲು ಗ್ರಾಮ ಪಂಚಾಯತ್ ವ್ಯವಸ್ಥೆಯಿಂದ ಸಾಧ್ಯವಿಲ್ಲ,” ಎಂದು ಅಭಿಪ್ರಾಯಪಟ್ಟರು.
ಡಿ.ಕೆ. ಶಿವಕುಮಾರ್ ದೆಹಲಿಗೆ ತೆರಳಿರುವ ಬಗ್ಗೆ ಮಾತನಾಡಿದ ಅವರು, “ಅವರು ಪಕ್ಷದ ಸಂಘಟನೆಯ ಬಗ್ಗೆ ಚರ್ಚಿಸಲು ಮತ್ತು ಕೇಂದ್ರ ಸರ್ಕಾರದೊಂದಿಗೆ ಅನುದಾನ ಹಾಗೂ ಯೋಜನೆಗಳ ಕುರಿತು ಮಾತುಕತೆ ನಡೆಸಲು ಹೋಗಿದ್ದಾರೆ. ಇದರಲ್ಲಿ ಹೊಸತನವಿಲ್ಲ,” ಎಂದರು. ಮೈಸೂರಿನ ಸಾಧನ ಸಮಾವೇಶದಲ್ಲಿ ಡಿ.ಕೆ.ಶಿವಕುಮಾರ್ ಹೆಸರನ್ನು ಪ್ರಸ್ತಾಪಿಸದಿರುವ ಕುರಿತು ಮುಖ್ಯಮಂತ್ರಿಗಳೇ ಸ್ಪಷ್ಟನೆ ನೀಡಿರುವ ಹಿನ್ನೆಲೆಯಲ್ಲಿ, ಈ ಬಗ್ಗೆ ಮತ್ತಷ್ಟು ಚರ್ಚೆ ಅಗತ್ಯವಿಲ್ಲ ಎಂದರು.
ಇಡಿಯ ಬಳಕೆ ರಾಜಕೀಯ ದುರೂದ್ಯೇಶಕ್ಕಾಗಿ ಆಗದಂತೆ ತಪ್ಪಿಸಬೇಕಾಗಿದೆ ಎಂಬ ಕಠಿಣ ಸಂದೇಶವನ್ನು ಸುಪ್ರೀಂ ಕೋರ್ಟ್ ತೀರ್ಪು ನೀಡಿದಂತಾಗಿದೆ ಎಂಬುದರಲ್ಲಿ ಡಿ.ಕೆ. ಸುರೇಶ್ ನಿಗದಿತ ನಿಲುವು ವ್ಯಕ್ತಪಡಿಸಿದ್ದಾರೆ.