ಮೈಸೂರು : ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಈಡಿ ತನಿಖಾ ಸಂಸ್ಥೆಯು ರಾಜಕೀಯ ಮಾಡುತ್ತಿದ್ದು ಇದು ಸರಿಯಲ್ಲ ಎಂಬುದಾಗಿ ಸುಪ್ರೀಂ ಕೋರ್ಟ್ ಅಭಿಪ್ರಾಯ ಪಟ್ಟಿದ್ದು, ಈಡಿ ತನಿಖಾ ಸಂಸ್ಥೆ ಏಕೆ ರಾಜಕೀಯ ದಾಳ ಆಗುತ್ತಿದೆ ಎಂದು ನೇರವಾಗಿ ಪ್ರಶ್ನೆ ಮಾಡಿರುವುದು ನ್ಯಾಯಕ್ಕೆ ಸಿಕ್ಕ ಜಯವಾಗಿದೆ ಎಂದು ಸಂಸದ ಸುನೀಲ್ ಬೋಸ್ ಅಭಿಪ್ರಾಯ ಪಟ್ಟಿದ್ದಾರೆ.
ಈ ಸಂಬಂಧ ಸೋಮವಾರ ಮಾಧ್ಯಮ ಪ್ರಕಟಣೆ ನೀಡಿರುವ ಅವರು, ದೇಶವೊಂದರ ಪ್ರಮುಖ ತನಿಖಾ ಸಂಸ್ಥೆಗಳನ್ನು ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿರುವ ಬಿಜೆಪಿಯು ದೇಶಾದ್ಯಂತ ವಿಪಕ್ಷಗಳನ್ನು ಹೆದರಿಸಿ ಚುನಾವಣೆ ಮಾಡುತ್ತಿರುವುದು ನಿಜಕ್ಕೂ ಖಂಡನೀಯವಾಗಿದ್ದು, ಸುಪ್ರೀಂ ಕೋರ್ಟ್‌ನ ಈ ಆದೇಶ ರಾಜಕೀಯ ಪ್ರೇರಿತವಾಗಿ ವರ್ತಿಸುವ ತನಿಖಾ ಸಂಸ್ಥೆಗಳಿಗೆ ಅಗತ್ಯವಾಗಿ ನೀಡಬೇಕಿದ್ದ ಎಚ್ಚರಿಕೆ ಆಗಿದೆ ಎಂದು ಹೇಳಿದ್ದಾರೆ.
ಪ್ರಜಾಪ್ರಭುತ್ವದ ಸೌಂದರ್ಯವಾದ ಜನಾಭಿಪ್ರಾಯವನ್ನು ಭ್ರಷ್ಟ ಗೊಳಿಸುವ ಬಿಜೆಪಿಗರ ಹೀನಾಯ ಪ್ರಯತ್ನಗಳು ಇಲ್ಲಿಗೆ ಕೊನೆಯಾಗಬೇಕು. ಇಲ್ಲವಾದರೆ ಮುಂದೆ ಜನರೇ ಇವರಿಗೆ ಪಾಠ ಕಲಿಸುವ ದಿನಗಳು ದೂರವಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.