ಚಾಮರಾಜನಗರ: ಮಂಡ್ಯದಲ್ಲಿ ನಡೆಯಲಿರುವ 87 ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಕನ್ನಡದ ಸಾಹಿತಿ, ಸಂಘಟಕ, ಕ್ರಿಯಾಶೀಲ, ಸರಳ, ಸಜ್ಜನ ವ್ಯಕ್ತಿತ್ವದ ಗೋ ರು ಚೆನ್ನಬಸಪ್ಪ ರವರ ಆಯ್ಕೆ ಅತ್ಯಂತ ಸೂಕ್ತವಾದ ಆಯ್ಕೆಯಾಗಿದ್ದು ಚೆನ್ನಬಸಪ್ಪನವರಿಗೆ ಸಂಸ್ಕೃತಿ ಚಿಂತಕ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ಅಭಿನಂದನೆ ಸಲ್ಲಿಸಿದ್ದಾರೆ.
ಕನ್ನಡ ನಾಡು, ನುಡಿ ,ಜನ ,ಜಲ ಭಾಷೆ, ಸಂಸ್ಕೃತಿ, ಪರಂಪರೆಯ ಉಳಿವಿಗಾಗಿ ನಿರಂತರವಾಗಿ ಇಡೀ ನಾಡನ್ನು ಸುತ್ತಿ ಕನ್ನಡ ಸಾಹಿತ್ಯ ಪರಿಷತ್ತನ್ನು ಕಟ್ಟಿ ಬೆಳೆಸಿದ ಮಹಾನ್ ವ್ಯಕ್ತಿ ಚನ್ನಬಸಪ್ಪನವರು. ಸಾಹಿತಿಯಾಗಿ, ಸಂಘಟಕರಾಗಿ ಶಿಕ್ಷಕರಾಗಿ, ವಿದ್ವಾಂಸರಾಗಿ ಸ್ವಾತಂತ್ರ್ಯ ಚಳುವಳಿಯಲ್ಲೂ ಭಾಗಿಯಾಗಿ ಸರ್ವೋತ್ಕೃಷ್ಟ ಅನುಭವದ ಗಣಿಯಾಗಿ ಕನ್ನಡದ ತೇರನ್ನು ಎಳೆಯುವ ಬಹುದೊಡ್ಡ ಜವಾಬ್ದಾರಿಯನ್ನು ಹೊತ್ತು ಸುಸೂತ್ರವಾಗಿ ಕನ್ನಡವನ್ನು ಕಟ್ಟುತ್ತಿರುವ ಚನ್ನಬಸಪ್ಪನವರಾಗಿ ಗಡಿ ಜಿಲ್ಲೆಯ ಪರವಾಗಿ ವಿಶೇಷವಾದ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನ ಸಂಘಟನೆಗಾಗಿ ಚಾಮರಾಜನಗರ ಜಿಲ್ಲೆಗೆ ಆಗಮಿಸಿ ಕನ್ನಡಕ್ಕಾಗಿ ಜೋಳಿಗೆ ವಿಶೇಷವಾದ ಕಾರ್ಯಕ್ರಮವನ್ನು ರೂಪಿಸಿ ಸುಭದ್ರ ಪರಿಷತ್ತನ್ನು ಕಟ್ಟಿದ ಚನ್ನಬಸಪ್ಪನವರು ಸರ್ವರಿಗೂ ಆದರ್ಶವಾಗಿ ಇದ್ದಾರೆ ಎಂದು ಋಗ್ವೇದಿ ಅಭಿನಂದನೆ ಸಲ್ಲಿಸಿದ್ದಾರೆ.