ಮಂಡ್ಯ/ಕುಶಾಲನಗರ: ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಹರಳಹಳ್ಳಿಯ ವೈದ್ಯ ಸತೀಶ್ (40), ಕುಶಾಲನಗರ ಆನೆಕಾಡು ಸಮೀಪ ಕಾರಿನಲ್ಲಿ ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಇವರು ಮೈಸೂರು ಜಿಲ್ಲೆ, ಕೊಣಸೂರು ಸರ್ಕಾರಿ ಆಸ್ಪತ್ರೆಯ ಗುತ್ತಿಗೆ ವೈದ್ಯರಾಗಿ ಕೆಲಸ ಮಾಡುತ್ತಿದ್ದರು.
ಡಾ.ಸತೀಶ್ ಕೂಡ ಹೆಣ್ಣು ಭ್ರೂಣಗಳನ್ನು ಪತ್ತೆ ಮಾಡುವ ಕೆಲಸದಲ್ಲಿ ಭಾಗಿಯಾಗಿದ್ದರು ಎನ್ನಲಾಗ್ತಿದೆ. ಆಲೆಮನೆಯಲ್ಲಿ ಭ್ರೂಣಲಿಂಗ ಪತ್ತೆ ಪ್ರಕರಣದ ಪ್ರಮುಖ ಆರೋಪಿ ನವೀನ್ ಕುಮಾರ್ ಜೊತೆ ಅವರು ಸಂಪರ್ಕದಲ್ಲಿದ್ದರು ಎಂಬ ಆರೋಪವಿತ್ತು.ಈ ಹಿಂದೆ ಈ ವೈದ್ಯನ ವಿರುದ್ದ ಪ್ರಕರಣ ಕೂಡ ದಾಖಲಾಗಿ ಪ್ರಕರಣ ವಿಚಾರಣೆ ಹಂತದಲ್ಲಿತ್ತು. ನೆನ್ನೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹುಲ್ಲೇನಹಳ್ಳಿಯ ಆಲೆಮನೆ ವೀಕ್ಷಣೆಗೆ ಬಂದಿದ್ದಾಗ ಗ್ರಾಮಸ್ಥರು ಈ ವೈದ್ಯನ ಬಗ್ಗೆ ಸಚಿವರ ಬಳಿ ದೂರು ಹೇಳಿದ್ರು.
ಸಚಿವರು ಕೂಡ ಅಧಿಕಾರಿಗಳು ಹಾಗು ಪೊಲೀಸರಿಗೆ ಈ ವೈದ್ಯನ ವಿರುದ್ದ ಕ್ರಮ ಜರುಗಿಸುವಂತೆ ಸೂಚಿಸಿದ್ರು. ಸಚಿವರ ಈ ಆದೇಶದ ಬಳಿಕ ಮಂಡ್ಯದ ಶಿವಳ್ಳಿಯಲ್ಲಿ ಆಯುರ್ವೇದ ವೈದ್ಯನಾಗಿ ಕ್ಲೀನಿಕ್ ನಡೆಸ್ತಿದ್ದ ವೈದ್ಯ ಕ್ಲೀನಿಕ್ ತೆರೆಯದೆ ನಾಪತ್ತೆಯಾಗಿದ್ದ . ಶುಕ್ರವಾರ ಮಡಿಕೇರಿ ಕಡೆಗೆ ಹೊರಟಿದ್ದ ಅವರು ಮಧ್ಯಾಹ್ನದ ವೇಳೆ ಕುಶಾಲನಗರದ ಆನೆಕಾಡು ಸಮೀಪ ರಸ್ತೆಬದಿ ಕಾರು ನಿಲ್ಲಿಸಿ ವಿಷದ ಇಂಜೆಕ್ಷನ್ ಚುಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ವೈದ್ಯನ ಸಾವಿನ ಹಿಂದೆ ಹಲವಾರು ಅನುಮಾನಗಳು ಹುಟ್ಟಿಕೊಂಡಿದೆ. ಜೊತೆಗೆ ವೈದ್ಯನ ಸಾವು ಆತ್ಮಹತ್ಯೆಯೋ? ಕೊಲೆಯೋ? ಎಂಬುದರ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.