Friday, April 4, 2025
Google search engine

Homeಅಪರಾಧನಿಗಧಿತ ಅವಧಿಯಲ್ಲಿ ಶೌಚಾಲಯ ನಿರ್ಮಾಣಕ್ಕೆ ಅನುದಾನ ಬಳಕೆ ಮಾಡದ 318 ಪಿಡಿಒಗಳ ಅಮಾನತು

ನಿಗಧಿತ ಅವಧಿಯಲ್ಲಿ ಶೌಚಾಲಯ ನಿರ್ಮಾಣಕ್ಕೆ ಅನುದಾನ ಬಳಕೆ ಮಾಡದ 318 ಪಿಡಿಒಗಳ ಅಮಾನತು

ಬೆಂಗಳೂರು: ನಿಗಧಿತ ಅವಧಿಯ ಒಳಗೆ ಶೌಚಾಲಯಗಳ ನಿರ್ಮಾಣಕ್ಕೆ ಅನುದಾನ ಬಳಕೆ ಮಾಡದ 318 ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು (ಪಿಡಿಒ) ಅಮಾನತು ಮಾಡಲು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸೂಚಿಸಿದೆ.

ಸ್ವಚ್ಛ ಭಾರತ್ ಮಿಷನ್‌ ಯೋಜನೆಯಡಿ ವೈಯಕ್ತಿಕ ಶೌಚಾಲಯ ನಿರ್ಮಾಣ ಮಾಡಲು ‘ಸಿಟಿಜನ್‌ ಪೋರ್ಟಲ್‌’ ಮೂಲಕ ಸಲ್ಲಿಕೆಯಾದ ಬೇಡಿಕೆ ಆಧಾರದಲ್ಲಿ ಪ್ರತಿ ಪಂಚಾಯಿತಿವಾರು ಪಟ್ಟಿ ಸಿದ್ಧಪಡಿಸಲಾಗಿತ್ತು. ಎಲ್ಲ ಪಂಚಾಯಿತಿಗಳಿಂದ ಸಲ್ಲಿಕೆಯಾಗಿದ್ದ 4.85 ಲಕ್ಷ ಶೌಚಾಲಯಗಳಲ್ಲಿ 3.60 ಲಕ್ಷ ಶೌಚಾಲಯಗಳಿಗೆ ಅನುದಾನ ಬಿಡುಗಡೆ ಮಾಡಲಾಗಿತ್ತು. ಬಿಡುಗಡೆಯಾದ ಅನುದಾನವನ್ನು ನಿಗದಿತ ಅವಧಿಯ ಒಳಗೆ ಖರ್ಚು ಮಾಡದ ಪಿಡಿಒಗಳನ್ನು ಅಮಾನತು ಮಾಡಲು ಆದೇಶ ಹೊರಡಿಸಿರುವ ಇಲಾಖೆ, ತಕ್ಷಣ ಕ್ರಮ ಕೈಗೊಳ್ಳುವಂತೆ 30 ಜಿಲ್ಲೆಗಳ ಜಿಲ್ಲಾ ಪಂಚಾಯಿತಿ ಸಿಇಒಗಳಿಗೆ ಪತ್ರ ಬರೆದಿದೆ.

ಪ್ರತಿ ಘಟಕಕ್ಕೆ ₹12 ಸಾವಿರ ಸಹಾಯಧನ:

ಗ್ರಾಮೀಣ ಪ್ರದೇಶದ ಮನೆಗಳಲ್ಲಿ ಶೌಚಾಲಯ ನಿರ್ಮಿಸಿಕೊಳ್ಳಲು ಅರ್ಜಿ ಸಲ್ಲಿಸುವ ಸಾಮಾನ್ಯ ವರ್ಗ, ಹಿಂದುಳಿದ ವರ್ಗಗಳು ಹಾಗೂ ಅಲ್ಪ ಸಂಖ್ಯಾತ ಸಮುದಾಯದ ಪ್ರತಿ ಕುಟುಂಬಕ್ಕೂ ಸ್ವಚ್ಛ ಭಾರತ್ ಯೋಜನೆಯಡಿ ಕೇಂದ್ರ ಸರ್ಕಾರ ₹7,200 ಹಾಗೂ ರಾಜ್ಯ ಸರ್ಕಾರ ₹4,800 ಸೇರಿ ₹12 ಸಾವಿರ ಸಹಾಯಧನ ನೀಡುತ್ತಿವೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಟುಂಬಗಳಿಗೆ ₹15 ಸಾವಿರ ನಿಗದಿ ಮಾಡಲಾಗಿದೆ.

ದಕ್ಷಿಣ ಕನ್ನಡ ಬಿಟ್ಟು ರಾಜ್ಯದ 30 ಜಿಲ್ಲೆಗಳಿಗೂ ಬೇಡಿಕೆಯ ಆಧಾರದಲ್ಲಿ ಅನುದಾನ ಬಿಡುಗಡೆ ಮಾಡಲಾಗಿತ್ತು. ಅವುಗಳಲ್ಲಿ 318 ಪಂಚಾಯಿತಿಗಳು ಆಗಸ್ಟ್‌ ಅಂತ್ಯದವರೆಗೂ ಒಂದೂ ಶೌಚಾಲಯ ನಿರ್ಮಿಸದೇ, ಅನುದಾನವನ್ನು ಹಾಗೆಯೇ ಉಳಿಸಿಕೊಂಡಿದ್ದವು. ಈ ಕುರಿತು ಗ್ರಾಮೀಣಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಈಚೆಗೆ ನಡೆದ ಸಭೆಯಲ್ಲಿ ಚರ್ಚೆ ನಡೆದಿತ್ತು. ಅನುದಾನ ಬಳಕೆ ಮಾಡದ ಎಲ್ಲ ಪಂಚಾಯಿತಿಗಳ ಪಿಡಿಒ ಹಾಗೂ ಜಿಲ್ಲಾ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಲು ಸಭೆಯಲ್ಲಿ ಸೂಚಿಸಲಾಗಿತ್ತು.

ರಾಜ್ಯವನ್ನು ‘ಬಯಲು ಬಹಿರ್ದೆಸೆ ಮುಕ್ತ ರಾಜ್ಯ’ವೆಂದು ಘೋಷಿಸಿ ಆರು ವರ್ಷ ಕಳೆದರೂ ಗ್ರಾಮೀಣ ಪ್ರದೇಶಗಳಲ್ಲಿ ಶೌಚಾಲಯಗಳಿಗೆ ಸಾಕಷ್ಟು ಬೇಡಿಕೆ ಇದೆ.

2012ರಲ್ಲಿ ಶೌಚಾಲಯಗಳ ಸಮೀಕ್ಷೆ ನಡೆಸಿದಾಗ ಇದ್ದ 70.32 ಲಕ್ಷ ಕುಟುಂಬಗಳಲ್ಲಿ ಶೇ 65ರಷ್ಟು ಕುಟುಂಬಗಳು ವೈಯಕ್ತಿಕ ಶೌಚಾಲಯವನ್ನೇ ಹೊಂದಿರಲಿಲ್ಲ. ಉದ್ಯೋಗ ಖಾತ್ರಿ ಯೋಜನೆಯನ್ನೂ ಬಳಸಿಕೊಂಡು ಸಮರೋಪಾದಿಯಲ್ಲಿ ಶೌಚಾಲಯಗಳನ್ನು ನಿರ್ಮಿಸಲಾಯಿತು. 2018ರಲ್ಲಿ ಕರ್ನಾಟಕವನ್ನು ‘ಬಯಲು ಬಹಿರ್ದೆಸೆ ಮುಕ್ತ ರಾಜ್ಯ’ವೆಂದು ಘೋಷಿಸಲಾಗಿತ್ತು.

RELATED ARTICLES
- Advertisment -
Google search engine

Most Popular