ಬೆಂಗಳೂರು: ಪಕ್ಷದ 18 ಶಾಸಕರನ್ನು 6 ತಿಂಗಳ ಕಾಲ ಅಮಾನತು ಮಾಡಿರುವ ಸ್ಪೀಕರ್ ಕ್ರಮಕ್ಕೆ ರಾಜ್ಯ ಬಿಜೆಪಿ ಅಸಮಾಧಾನ ವ್ಯಕ್ತಪಡಿಸಿದ್ದು, ಇದು ಕಾನೂನುಬಾಹಿರ, ಅಸಾಂವಿಧಾನಿಕ ಹಾಗೂ ಏಕಪಕ್ಷೀಯ ನಿರ್ಧಾರ ಎಂದು ಟೀಕಿಸಿದೆ. ಅಷ್ಟೇ ಅಲ್ಲದೆ, ಶಾಸಕರ ಕರ್ತವ್ಯಕ್ಕೆ ಅಡ್ಡಿಪಡಿಸುವ ರೀತಿಯಲ್ಲಿ ಆದೇಶಿಸಿದ್ದು, ಮತದಾರರಿಗೂ ಅಪಮಾನ ಆದಂತಾಗಿದೆ. ಹೀಗಾಗಿ ಸ್ಪೀಕರ್ ಆದೇಶ ಹಿಂಪಡೆಯಬೇಕು ಎಂದು ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಶುಕ್ರವಾರ ಸ್ಪೀಕರ್ ಅವರು ಬಿಜೆಪಿಯ 18 ಶಾಸಕರನ್ನು 6 ತಿಂಗಳು ಅಮಾನತು ಮಾಡಿರುವುದು ಸಂಪೂರ್ಣವಾಗಿ ಕಾನೂನುಬಾಹಿರ ನಿರ್ಧಾರ. ಹೋರಾಟ ಮಾಡುತ್ತಿದ್ದವರ ರಕ್ಷಣೆ ಮಾಡಬೇಕಿದ್ದ ಸ್ಪೀಕರ್ ಅವರು ಈ ರೀತಿಯ ಆದೇಶ ಮಾಡಿದ್ದು ದುರಂತ ಎಂದರು.
ಅಮಾನತುಗೊಂಡ ಶಾಸಕರು ಲಾಬಿ, ಗ್ಯಾಲರಿ ಪ್ರವೇಶಿಸುವಂತಿಲ್ಲ ಎಂದು ಸ್ಪೀಕರ್ ಆದೇಶಿಸಿದ್ದಾರೆ. ಅವರೇನು ಟೆರರಿಸ್ಟ್‌ಗಳಾ? ನಕ್ಸಲರಾ? ಶಾಸಕರ ಹಕ್ಕನ್ನು ಮೊಟಕುಗೊಳಿಸುವ ಷಡ್ಯಂತ್ರ ಹಿಂದೆಂದೂ ನಡೆದಿರಲಿಲ್ಲ. ಜನ ಆಯ್ಕೆ ಮಾಡಿ ಕಳುಹಿಸಿರುವ ಶಾಸಕರ ಸೂಚನೆಗಳನ್ನು ಸ್ವೀಕರಿಸುವುದಿಲ್ಲ ಎಂದು ಆದೇಶಿಸಲು ಇವರ್ಯಾರು? ಕ್ಷೇತ್ರಾಭಿವೃದ್ಧಿಗೆ 2 ಪೈಸೆ ಬಿಡುಗಡೆ ಮಾಡುವ ಯೋಗ್ಯತೆಯೂ ಈ ಸರಕಾರಕ್ಕೆ ಇಲ್ಲ. ಸ್ಪೀಕರ್ ಈ ರೀತಿ ಆದೇಶ ಮಾಡಿದ್ದಾರೆ.
ಆಡಳಿತ ಪಕ್ಷದವರ ತಾಳಕ್ಕೆ ತಕ್ಕಂತೆ ಸ್ಪೀಕರ್ ಕುಣಿದಿದ್ದಾರೆ. ಇದನ್ನು ಖಂಡಿಸುತ್ತೇವೆ. ಈ ಆದೇಶ ಹಿಂಪಡೆಯಬೇಕು. ಇದು ಶಾಸಕರಿಗೆ ಮಾತ್ರವಲ್ಲದೆ, ಕ್ಷೇತ್ರದ ಜನರಿಗೂ ಅವಮಾನ ಮಾಡಿದ್ದೀರಿ. 6 ತಿಂಗಳು ಕ್ಷೇತ್ರವು ಜನಪ್ರತಿನಿಧಿ ಇಲ್ಲದಂತಾಗುತ್ತದೆ. ಕ್ಷೇತ್ರದ ಅಭಿವೃದ್ಧಿ, ಜನತೆಯ ಹಿತದೃಷ್ಟಿಯಿಂದ ಹಿಂಪಡೆಯಬೇಕು ಎಂದು ಒತ್ತಾಯಿಸಿದರು. ಈ ವೇಳೆ ಮೇಲ್ಮನೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಚಿವ ಎನ್. ಮಹೇಶ್ ಇದ್ದರು.
ಅಸಂಬದ್ಧವಾಗಿ ನಡೆದುಕೊಂಡಿದ್ದ ಕಾಂಗ್ರೆಸ್
ವಿಧಾನಪರಿಷತ್ತಿನಲ್ಲಿ ಈ ಹಿಂದೆ ಸಭಾಪತಿ ಪೀಠದಲ್ಲಿದ್ದ ಉಪಸಭಾಪತಿ ಧರ್ಮೇಗೌಡರ ಜತೆಗೆ ಇದೇ ಕಾಂಗ್ರೆಸಿಗರು ಅಸಂಬದ್ಧವಾಗಿ ನಡೆದುಕೊಂಡಿದ್ದರು. ಅವರನ್ನು ಕುರ್ಚಿಯಿಂದ ಎತ್ತಿ ಹೊರಹಾಕಿದ್ದರು. ಆಗಲೂ ಯಾರನ್ನೂ 6 ತಿಂಗಳು ಅಮಾನತು ಮಾಡಿರಲಿಲ್ಲ. ಸಭಾಧ್ಯಕ್ಷರು, ಆ ಪೀಠಕ್ಕೆ ಅವಮಾನ ಮಾಡುವ ಯಾವ ಘಟನೆಯೂ ಶುಕ್ರವಾರದ ದಿನ ನಡೆದಿಲ್ಲ. ಆದರೂ ಅಮಾನತಿನ ಶಿಕ್ಷೆ ಕೊಟ್ಟಿರುವುದು ಅಸಾಂವಿಧಾನಿಕ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.