ನಂಜನಗೂಡು : ಪತ್ನಿ ಬೇರೆಯವರೊಂದಿಗೆ ಮೊಬೈಲ್ ಫೋನ್‌ನಲ್ಲಿ ಗಂಟೆಗಟ್ಟಲೇ ಮಾತನಾಡುತ್ತಾಳೆ ಎಂದು ಅನುಮಾನಗೊಂಡು ಪತಿ, ಆಕೆಯ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿರುವ ಘಟನೆ ನಂಜನಗೂಡು ತಾಲೂಕಿನ ರಾಂಪುರ ಗ್ರಾಮದಲ್ಲಿ ನಡೆದಿದೆ. ೨೭ ವರ್ಷದ ದೇವಮಣಿ ಹಲ್ಲೆಗೆ ಒಳಗಾದ ಮಹಿಳೆ ೩೭ ವರ್ಷದ ಪ್ರಕಾಶ್ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಪತ್ನಿ ದೇವಮಣಿ ಬೇರೆಯವರೊಂದಿಗೆ ಮೊಬೈಲ್ ಪೋನ್ ನಲ್ಲಿ ಮಾತನಾಡುತ್ತಿದ್ದಾಳೆ ಎಂದು ಪತಿ ಖ್ಯಾತೆ ತೆಗೆದಿದ್ದಾನೆ. ಪತಿ ಮತ್ತು ಪತ್ನಿ ಇಬ್ಬರ ನಡುವೆ ಜಗಳ ಶುರುವಾಗಿದೆ. ಇಬ್ಬರ ಜಗಳವು ವಿಕೋಪಕ್ಕೆ ತಿರುಗಿ, ಪತಿ ಪ್ರಕಾಶ್ ಮಚ್ಚಿನಿಂದ ಹೆಂಡತಿಯ ಕೈಗೆ ಮತ್ತು ಕುತ್ತಿಗೆ ಸೇರಿದಂತೆ ತಲೆಗೆ ಬಲವಾಗಿ ಹೊಡೆದ ಪರಿಣಾಮ ಪತ್ನಿ ಕೆಳಗಡೆ ಬಿದ್ದು ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದರು. ವಿಷಯ ತಿಳಿದು ಸ್ಥಳಕ್ಕೆ ಹುಲ್ಲಹಳ್ಳಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಗಂಭೀರವಾಗಿ ಗಾಯಗೊಂಡು ನರಳಾಡುತ್ತಿದ್ದ ದೇವಮಣಿಯನ್ನು ಆಂಬ್ಯುಲೆನ್ಸ್ ಮೂಲಕ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಈ ಸಂಬಂಧ ದೇವಮಣಿಯ ತಂದೆ ಮಹದೇವಪ್ಪ ಹುಲ್ಲಹಳ್ಳಿ ಪೊಲೀಸ್ ಠಾಣೆಗೆ ದೂರು ದಾಖಲು ಮಾಡಿದ್ದಾರೆ. ಪೊಲೀಸರು, ಹಲ್ಲೆ ನಡೆಸಿದ ಪ್ರಕಾಶ್ ಎಂಬಾತನನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.