ಹನಗೋಡು : ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದ ಗೃಹಿಣಿಯೊಬ್ಬರ ಶವ, ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ಕೂಡ್ಲೂರು ನಿವಾಸಿ ಅಂತೊಣಿ ಕಿರಣ್ ರವರ ಪತ್ನಿ ನಿತ್ಯ ನಿರ್ಮಲ(೨೫) ಸಾವನ್ನಪ್ಪಿದವರು.
ಈ ದಂಪತಿಗೆ ಒಂದು ವರ್ಷದ ಮಗು ಇದೆ. ತುಮಕೂರು ಜಿಲ್ಲೆಯ ಸಣ್ಣೇನಹಳ್ಳಿಯ ತೆರೆಸಮ್ಮ ಪದವಿವರೆಗೆ ವ್ಯಾಸಂಗ ಮಾಡಿದ್ದ ತನ್ನ ಮಗಳನ್ನು ಎರಡು ವರ್ಷಗಳ ಹಿಂದೆ ಹುಣಸೂರು ತಾಲೂಕಿನ ಕೂಡ್ಲೂರು ಗ್ರಾಮದ ಅಂತೋಣಿ ಕಿರಣ್‌ಗೆ ಮದುವೆ ಮಾಡಿ ಕೊಟ್ಟಿದ್ದರು. ಕೆಲವು ದಿನಗಳಿಂದ ಪತಿ ಅಂತೋಣಿಕಿರಣ್ ಮನೆ ಕಟ್ಟುತ್ತಿದ್ದೇನೆ ನನ್ನ ಮದುವೆ ವೇಳೆ ವರದಕ್ಷಿಣೆ ಕೊಟ್ಟಿಲ್ಲ. ಬೇರೆಯವರನ್ನು ಮದುವೆಯಾಗಿದ್ದರೆ ಲಕ್ಷಾಂತರ ವರದಕ್ಷಿಣೆ ಸಿಗುತ್ತಿತ್ತು ಈಗಲಾದರೂ ತವರು ಮನೆಯಿಂದ ಹಣ ತರುವಂತೆ ಪತ್ನಿಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದ್ದು.
ಈ ಬಗ್ಗೆ ಎರಡು ಮೂರುಬಾರಿ ನ್ಯಾಯ ಪಂಚಾಯ್ತಿಯೂ ನಡೆದಿತ್ತು. ಇತ್ತೀಚೆಗೆ ಪತಿಯ ಕಿರುಕುಳ ಹೆಚ್ಚಾಗಿತ್ತು. ಈ ಬಗ್ಗೆ ತಾಯಿಯೊಂದಿಗೆ ತನ್ನ ಸಂಕಷ್ಟವನ್ನು ನಿರ್ಮಲ ಹೇಳಿಕೊಂಡಿದ್ದಳು. ಆದರೆ ಸರಕಾರಿ ಶಾಲೆಯಲ್ಲಿ ಅಡುಗೆ ಕೆಲಸ ಮಾಡುವ ತಾಯಿ ತೆರೆಸಮ್ಮ ಏನೂ ಮಾಡಲಾಗದೆ ಊರಿನವರಿಗೆ ಗೊತ್ತಾದರೆ ಮರ್ಯಾದೆ ಹೋಗುತ್ತದೆ ಎಂದು ಅಂಜಿ ಮಗಳಿಗೆ ಸಮಾಧಾನ ಹೇಳುತ್ತಲೇ ಬಂದಿದ್ದರು.
ಮಂಗಳವಾರ ಬೆಳಗ್ಗೆ ೧೦ ಗಂಟೆಗೆ ನಿರ್ಮಲ ತನ್ನ ತಾಯಿಗೆ ಪೋನ್ ಮಾಡಿ ನನಗೆ ಹಣ ತರುವಂತೆ ಚಿತ್ರ ಹಿಂಸೆ ನೀಡುತ್ತಿದ್ದಾರೆ. ಸಾಯಿಸುತ್ತೇನೆಂದು ಗಂಡ ಹಾಗೂ ಮನೆಯವರು ಹೊಡೆದಿದ್ದಾರೆ. ಬಂದು ನನ್ನನ್ನು ಕರೆದುಕೊಂಡು ಹೋಗುವಂತೆ ಹೇಳಿದ್ದಳು. ಶಾಲೆಯಲ್ಲಿ ಬಿಸಿಯೂಟ ತಯಾರಿ ಮಾಡುತ್ತಿದ್ದ ತೆರೆಸಮ್ಮನವರು ಮಗಳಿಗೆ ಸಮಾದಾನ ಹೇಳಿ, ಆಮೇಲೆ ಬರುತ್ತೇನೆ ಎಂದು ಹೇಳಿದ್ದರು. ಶಾಲೆಯ ಮದ್ಯಾಹ್ನದ ಅಡುಗೆ ಕೆಲಸ ಮುಗಿದ ನಂತರ ಮಗಳಿಗೆ ಪೋನ್ ಮಾಡಿದರೆ ಹೋಗದಿದ್ದರಿಂದ ಗಾಬರಿಯಾಗಿ ಅಳಿಯನ ಮನೆಯ ಅಕ್ಕಪಕ್ಕದವರಿಗೆ ಪೋನ್ ಮಾಡಿದಾಗ ಮಗಳ ಸಾವಿನ ಸುದ್ದಿ ತಿಳಿದು ಕಂಗೆಟ್ಟು ಗ್ರಾಮಸ್ಥರೊಂದಿಗೆ ಕೂಡ್ಲೂರಿಗೆ ಹೋದ ವೇಳೆ ಪತಿ ನಿತ್ಯ ನಿರ್ಮಲ ಸಾವನ್ನಪ್ಪಿದ್ದಾಳೆಂದು ಆಗಲೆ ಅಂತ್ಯಕ್ರಿಯೆಗೆ ತಯಾರಿ ಮಾಡಿಕೊಂಡಿದ್ದರು.
ಈ ನಡುವೆ ಎರಡೂ ಕಡೆಯವರ ನಡುವೆ ಗಲಾಟೆ ನಡೆದು ಶವವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ವೇಳೆ ಕುತ್ತಿಗೆ ಬಿಗಿದು ಗಾಯವಾಗಿರುವುದು ಪತ್ತೆಯಾಗಿ ಅನುಮಾನಗೊಂಡ ತೆರೆಸಮ್ಮ ಹುಣಸೂರು ಗ್ರಾಮಾಂತರ ಪೊಲೀಸರಿಗೆ ಮಗಳನ್ನು ಗಂಡನ ಮನೆಯವರು ಕೊಲೆ ಮಾಡಿ ನೇಣು ಹಾಕಿದ್ದಲ್ಲದೆ. ಮಾಹಿತಿ ನೀಡದೆ ಅಂತ್ಯ ಸಂಸ್ಕಾರಕ್ಕೆ ಮುಂದಾಗಿದ್ದಾರೆಂದು ದೂರು ನೀಡಿದ ಮೇರೆಗೆ ಠಾಣೆಯ ಇನ್ಸ್‌ಪೆಕ್ಟರ್ ಎನ್. ಮುನಿಯಪ್ಪ, ತಹಸೀಲ್ದಾರ್ ಜೆ. ಮಂಜುನಾಥ್. ಡಿವೈಎಸ್‌ಪಿ ಗೋಪಾಲಕೃಷ್ಣ ಬುಧವಾರ ಭೇಟಿ ನೀಡಿ ಪರಿಶೀಲಿಸಿ ಶವವನ್ನು ಮೈಸೂರಿನ ಕೆ.ಆರ್ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ಅಂತೋಣಿ ಕಿರಣ್ ಮತ್ತು ಆತನ ಕುಟುಂಬದವರನ್ನು ವಶಕ್ಕೆ ಪಡೆದಿದ್ದಾರೆ.