Friday, April 11, 2025
Google search engine

Homeಸ್ಥಳೀಯಸ್ವಚ್ಛ ಭಾರತ ಆಂದೋಲನ:ವಿದ್ಯಾರ್ಥಿಗಳಿಂದ ಏಕ ಬಳಕೆಯ ಪ್ಲಾಸ್ಟಿಕ್ ನಿಂದ ಪರಿಸರ ಸ್ನೇಹಿ ಇಕೋ ಬ್ರಿಕ್ಸ್- ಗ್ರೋ...

ಸ್ವಚ್ಛ ಭಾರತ ಆಂದೋಲನ:ವಿದ್ಯಾರ್ಥಿಗಳಿಂದ ಏಕ ಬಳಕೆಯ ಪ್ಲಾಸ್ಟಿಕ್ ನಿಂದ ಪರಿಸರ ಸ್ನೇಹಿ ಇಕೋ ಬ್ರಿಕ್ಸ್- ಗ್ರೋ ಬ್ಯಾಗ್ಸ್

ಮೈಸೂರು: ಮಂಗಳವಾರ ನಗರದ ಬಹು ಮುಖ್ಯ ವ್ಯಾಪಾರ-ವಹಿವಾಟುಗಳ ಕೇಂದ್ರವಾದ ಸಂತೆಪೇಟೆ, ಶಿವರಾಂ ಪೇಟೆ, ಡಿ ದೇವರಾಜ್ ಅರಸು ರಸ್ತೆ ಹೀಗೆ ಎಲ್ಲೆಡೆ ವಿದ್ಯಾರ್ಥಿಗಳ ಸಮೂಹವೇ ನೆರೆದಿತ್ತು. ಅವರೆಲ್ಲರೂ ಪ್ರತಿ ಅಂಗಡಿ-ಮಳಿಗೆ, ಮಾಲ್ ಗಳಿಗೆ ಭೇಟಿ ನೀಡಿ, ಮಾಲಕರು- ಗ್ರಾಹಕರಿಗೆ ಏಕ ಬಳಕೆಯ ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮವನ್ನು ಪರಿಣಾಮಕಾರಿಯಾಗಿ, ಉದಾಹರಣೆಗಳೊಂದಿಗೆ ವಿವರಿಸುತ್ತಿದ್ದರು.

ಜೊತೆಗೆ ಅಂಗಡಿಗಳಲ್ಲಿದ್ದ ಒಂದು ಲೀಟರ್ ನೀರಿನ ಬಾಟಲಿಗಳನ್ನು ಹಾಗು ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಂಗ್ರಹಿಸುತ್ತಿದ್ದರು. ಮಾರುಕಟ್ಟೆಗೆ ಬಂದಿದ್ದ ಸಾವಿರಾರು ಗ್ರಾಹಕರಿಗೆ ಕುತೂಹಲ… ಈ ಪೈಕಿ ಬಹುತೇಕ ಮಂದಿಯ ಕುತೂಹಲವನ್ನು ಮಕ್ಕಳು ಏಕ ಪ್ಲಾಸ್ಟಿಕ್ ಬಳಕೆಯ ಅಪಾಯದ ಬಗ್ಗೆ ವಿವರಿಸುತ್ತಾ ತಣಿಸುತ್ತಿದ್ದರು. ಈ ಪೈಕಿ ಹಲವಾರು ಮಂದಿಗೆ ಈ ಪ್ಲಾಸ್ಟಿಕ್ ತ್ಯಾಜ್ಯವನ್ನು ಹೇಗೆ ವಿಲೇವಾರಿ ಮಾಡಬಹುದು, ಪ್ಲಾಸ್ಟಿಕ್ ಗೆ ಪರ್ಯಾಯವಾಗಿ ಏನನ್ನು ಬಳಸ ಬಹುದು ಎಂಬುದು ತಿಳಿದಿರಲಿಲ್ಲ. ಅವರಿಗೆ ವೈಜ್ಞಾನಿಕ ಮಾಹಿತಿ ನೀಡಿ, ಅವರ ಹಳ್ಳಿಗಳನ್ನು ಪ್ಲಾಸ್ಟಿಕ್ ಮುಕ್ತಗೊಳಿಸುವ ನಿಟ್ಟಿನಲ್ಲಿ ಮಕ್ಕಳು ಪ್ರೇರೇಪಿಸುತ್ತಿದ್ದರು.

ನಗರದಲ್ಲಿ ಇದೆ ಮೊದಲ ಬಾರಿಗೆ ಇಂತಹ ಪ್ರಯತ್ನ ಒಂದಕ್ಕೆ ಪುಟಾಣಿ ಮಕ್ಕಳು ಕೈ ಹಾಕಿದ್ದರು. ಸರಕಾರದ ದಂಡ ನೀತಿಯಿಂದ ಪರಿಹಾರಗೊಳ್ಳದ ಪ್ಲಾಸ್ಟಿಕ್ ಸಮಸ್ಯೆಗೆ ಮಕ್ಕಳಿಲ್ಲಿ ಪ್ರೀತಿಯಿಂದ ಮಾಹಿತಿ ನೀಡುತ್ತಾ ಪರಿಹಾರ ಸೂಚಿಸುತ್ತಿದ್ದರು. ಪುಟ್ಟ ಮಕ್ಕಳು ಪುಟಾಣಿ ಹೆಜ್ಜೆ ಇಡುತ್ತಾ, ನಾಗರಿಕರನ್ನು ಮನ ಒಲಿಸುತ್ತಿದ್ದ ಸನ್ನಿವೇಶವೇ ಅತಿ ವಿಶಿಷ್ಟವಾಗಿತ್ತು.

ನಗರದ ಎಚ್ ಡಿ ಕೋಟೆ ರಸ್ತೆಯಲ್ಲಿರುವ ಪೂರ್ಣ ಚೇತನ ಶಾಲೆಯ ಪೂರ್ವ ಪ್ರಾಥಮಿಕದಿಂದಿಡಿದು ಹತ್ತನೇ ತರಗತಿಯವರೆಗಿನ ಸುಮಾರು 550 ವಿದ್ಯಾರ್ಥಿಗಳು ನಗರದಲ್ಲಿ ನಿಷೇಧಿತ ಏಕ ಬಳಕೆಯ ಪ್ಲಾಸ್ಟಿಕ್ ಬಳಕೆಗೆ ಕುಖ್ಯಾತಿಯಾಗಿರುವ ಮಾರುಕಟ್ಟೆ ಪ್ರದೇಶದಲ್ಲಿ ಏಕಕಾಲದಲ್ಲಿ ನಡೆಸಿದ ಈ ಪ್ಲಾಸ್ಟಿಕ್ ವಿರೋಧಿ ಅಭಿಯಾನ, ಸ್ವಚ್ಛ ಭಾರತ ಆಂದೋಲನಕ್ಕೆ ಇನ್ನಷ್ಟು ಮೆರಗು ನೀಡಿತು.

ವಿಶೇಷವೆಂದರೆ, ವಿದ್ಯಾರ್ಥಿಗಳು ಇಷ್ಟು ನೀರಿನ ಬಾಟಲ್ ಗಳನ್ನು ಹಾಗು ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಿದ್ದು ಒಂದು ವಿಶೇಷ ಉದ್ದೇಶಕ್ಕೆ. ಜುಲೈ 28ರಂದು ಶಾಲೆಯ ಈ ಎಲ್ಲಾ ಮಕ್ಕಳು ಜೊತೆ ಸೇರಿ, 2 ಗಂಟೆ ಅವಧಿಯಲ್ಲಿ ಒಂದು ಲೀಟರ್ ನೀರಿನ ಬಾಟಲ್ ಗಳಲ್ಲಿ 1,500 ಪರಿಸರ ಸ್ನೇಹಿ ಇಕೋ ಬ್ರಿಕ್ಸ್ ನಿರ್ಮಿಸಲಿದ್ದಾರೆ. ಜೊತೆಗೆ 10,000 ಗ್ರೋ ಬ್ಯಾಗ್ ಗಳಲ್ಲಿ ಅರಣ್ಯ ಇಲಾಖೆ ನೀಡಿರುವ ಬೀಜಗಳನ್ನು ಬಿತ್ತಲಿದ್ದಾರೆ. ಅಂದು ಬೆಳಗ್ಗೆ 11 ಗಂಟೆಗೆ ಈ ವಿಶ್ವದಾಖಲೆಯ ಪ್ರಯತ್ನ ಆರಂಭವಾಗಲಿದೆ. ಈ ಎರಡು ದಾಖಲೆಗಳ ಮುಖ್ಯ ಉದ್ದೇಶ ನಮ್ಮ ನೆಲವನ್ನು ನಮ್ಮ ಮುಂದಿನ ಪೀಳಿಗೆಗೆ ಸುರಕ್ಷಿತವಾಗಿ ಹಸ್ತಾಂತರಿಸುವುದು.

ಇದರ ಜೊತೆಗೆ, ಈಗ ನಡೆಯುತ್ತಿರುವ ಸ್ವಚ್ಛ ಭಾರತ ಆಂದೋಲನದಲ್ಲಿ ಮೈಸೂರಿಗೆ ಮತ್ತೊಮ್ಮೆ ದೇಶದ ಅತಿ ಸ್ವಚ್ಛ ನಗರ ಎನ್ನುವ ಪ್ರಶಸ್ತಿ ದೊರಕುವಂತೆ ಮಾಡುವ ನಿಟ್ಟಿನಲ್ಲಿ ಮಕ್ಕಳ ಅಳಿಲು ಸೇವೆ ಇದಾಗಿದೆ.

ಸರಕಾರೀ ಶಾಲಾ ಮಕ್ಕಳೊಂದಿಗೆ ಕೈ ಜೋಡಣೆ: ಶಾಲೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀ ದರ್ಶನ್ ರಾಜ್ ಪ್ರಕಾರ, ಈ ಪ್ರಯತ್ನಗಳು ಕೇವಲ ದಾಖಲೆಗಷ್ಟೇ ಸೀಮಿತಗೊಳ್ಳದೆ ಒಂದು ಆಂದೋಲನ ರೂಪದಲ್ಲಿ ಮುಂದುವರೆಯಲಿದೆ. “ಮುಂದಿನ ದಿನಗಳಲ್ಲಿ ನಾವು ನಮ್ಮ ಸುತ್ತಮುತ್ತಲಿನ ಸರಕಾರಿ ಶಾಲೆಗಳ ಮಕ್ಕಳನ್ನೂ ಒಳಗೂಡಿಸಿಕೊಂಡು, ಈ ಗ್ರೋ ಬ್ಯಾಗ್ ಮೂಲಕ ನಗರಕ್ಕೆ ಹಸಿರು ಹೊದಿಸುವ ಕೆಲಸವನ್ನು ಮುಂದುವರೆಸುತ್ತೇವೆ. ಸ್ವಚ್ಛ ಹಾಗು ಹಸಿರು ಮೈಸೂರು ನಿರ್ಮಾಣ ನಿಟ್ಟಿನಲ್ಲಿ ನಮ್ಮ ಮಕ್ಕಳನ್ನು ಜವಾಬ್ದಾರಿಯುತ ಪ್ರಜೆಗಳಾಗಿಸುವುದೇ ನಮ್ಮ ಉದ್ದೇಶ,” ಎಂದು ಅವರು ತಿಳಿಸಿದರು.

ಶಾಲೆಯ ಒಂಭತ್ತನೆಯ ತರಗತಿ ವಿದ್ಯಾರ್ಥಿನಿ ಧಿತಾ ಎಸ್ ಪಟೇಲ್ ಪ್ರಕಾರ ಮಂಗಳವಾರದ ಈ ಪ್ರಯತ್ನಕ್ಕೆ ವ್ಯಾಪಾರಿಗಳ, ಗ್ರಾಹಕರ ಪ್ರತಿಕ್ರಿಯೆ ಅದ್ಭುತವಾಗಿತ್ತು. “ಪ್ಲಾಸ್ಟಿಕ್ ಸಮಸ್ಯೆಗೆ ಸುಲಭದ ಪರಿಹಾರ ಮನ ಓಲೈಸುವಿಕೆಯ ಮೂಲಕ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದು ಎಂಬುದು ನಮಗೆ ಮನದಟ್ಟಾಯಿತು,” ಎಂದು ಅವರು ತಿಳಿಸಿದರು.

RELATED ARTICLES
- Advertisment -
Google search engine

Most Popular