Friday, April 4, 2025
Google search engine

Homeರಾಜ್ಯಸುದ್ದಿಜಾಲಸ್ವಾಮಿ ವಿವೇಕಾನಂದ ಇಡೀ ಜಗತ್ತಿಗೆ ಮಾರ್ಗದರ್ಶಕರು: ಸ್ವಾಮಿ ಶ್ರೀ ಮುಕ್ತಿದಾನಂದಾಜೀ ಮಹಾರಾಜ್

ಸ್ವಾಮಿ ವಿವೇಕಾನಂದ ಇಡೀ ಜಗತ್ತಿಗೆ ಮಾರ್ಗದರ್ಶಕರು: ಸ್ವಾಮಿ ಶ್ರೀ ಮುಕ್ತಿದಾನಂದಾಜೀ ಮಹಾರಾಜ್

ಮೈಸೂರು: ಸ್ವಾಮಿ ವಿವೇಕಾನಂದರು ಮಹಾ ವಿಶ್ವ ಚೈತನ್ಯ. ಅವರು ಇಡೀ ಜಗತ್ತಿಗೆ ಮಾರ್ಗದರ್ಶಕರು. ಅವರ ಚಿಂತನೆಗಳು ಸರ್ವಕಾಲಕ್ಕೂ ಪ್ರಸ್ತುತ. ವಿಶ್ವ ಸಹೋದರತ್ವ, ವಿಶ್ವ ಶಾಂತಿಯ ಹರಿಕಾರ ಅವರು ಎಂದು ರಾಮಕೃಷ್ಣ ಆಶ್ರಮ, ಮೈಸೂರು ಅಧ್ಯಕ್ಷರಾದ ಸ್ವಾಮಿ ಶ್ರೀ ಮುಕ್ತಿದಾನಂದಾಜೀ ಮಹಾರಾಜ್ ತಿಳಿಸಿದ್ದಾರೆ.

ಸತತ 14 ಗಂಟೆ 2 ನಿಮಿಷಗಳ ಕಾಲ ಸ್ವಾಮಿ ವಿವೇಕಾನಂದರ ಹುಟ್ಟು, ಬೆಳವಣಿಗೆ, ಜೀವನಗಾಥೆ, ಸಾಧನೆ ಮತ್ತು ವಿಶ್ವಕ್ಕೆ ಅವರ ಕೊಡುಗೆಗಳ ಬಗ್ಗೆ ಮಾತನಾಡಿ, ವೈಯಕ್ತಿಕ ವಿಭಾಗದಲ್ಲಿ ಎಲೈಟ್ ವರ್ಲ್ಡ್ ರೆಕಾರ್ಡ್ ಅಕಾಡೆಮಿ, ಏಷ್ಯನ್ ಅಕಾಡೆಮಿ, ಇಂಡಿಯ ರೆಕಾರ್ಡ್ಸ್ ನಲ್ಲಿ ಕೇವಲ 12ನೇ ವಯಸ್ಸಿನಲ್ಲೇ ವಿಶ್ವ ದಾಖಲೆ ನಿರ್ಮಿಸಿದ ನಗರದ ಪೂರ್ಣ ಚೇತನ ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿ ಮಹೇಶ್ ಕುಮಾರ್ ಎಚ್ಎಸ್ ನನ್ನು ಆಶೀರ್ವಾದ ಪೂರ್ವಕವಾಗಿ ಸನ್ಮಾನಿಸಿ ಅವರು ಮಾತನಾಡುತ್ತಿದ್ದರು.

ಸ್ವಾಮಿ ವಿವೇಕಾನಂದರ ಸಾಧನೆ- ಬೋಧನೆ- ಜೀವನಗಾಥೆಯ ಅಪ್ಪಟ ಅಭಿಮಾನಿಯಾಗಿರುವ ವಿದ್ಯಾರ್ಥಿ ಮಹೇಶ್ ಕುಮಾರ್ ಎಚ್ ಎಸ್ ಮೈಸೂರು ಜಿಲ್ಲೆಯ ಬನ್ನೂರು ಸಮೀಪದ ಹನುಮನಾಳು ಎಂಬ ಪುಟ್ಟ ಗ್ರಾಮದ ಸೋಮಶೇಖರ ಮತ್ತು ತಾಯಮ್ಮ ಎಂಬ ರೈತ ದಂಪತಿಯ ಪುತ್ರ. ಒಂದರಿಂದ ಐದನೇ ತರಗತಿಯವರೆಗೆ ಹನುಮನಾಳಿನಲ್ಲಿ ವ್ಯಾಸಂಗ ಮಾಡಿದ, ಆತನಿಗೆ ಆರನೇ ತರಗತಿಯಿಂದ ನಗರದ ಎಚ್ ಡಿ ಕೋಟೆ ರಸ್ತೆಯಲ್ಲಿರುವ ಪೂರ್ಣ ಚೇತನ ಪಬ್ಲಿಕ್ ಶಾಲೆಯಲ್ಲಿ ಉಚಿತ ಶಿಕ್ಷಣ ನೀಡಲಾಗುತ್ತಿದೆ.

ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡು, ಇತರರಿಗೂ ಸಾರುವ ಗುರಿಯನ್ನು ಹೊಂದಿರುವ ಮಹೇಶ ಇತ್ತೀಚಿಗೆ ಈ ವಿಶ್ವದಾಖಲೆ ಸೃಷ್ಟಿಸಿ, ಮೈಸೂರು ನಗರಕ್ಕೆ ಕೀರ್ತಿ ತಂದಿದ್ದಾನೆ. ಶಿಕ್ಷಕಿ ಶ್ರೀಮತಿ ತನುಜ ಆತನಿಗೆ ಅಗತ್ಯವಾದ ತರಭೇತಿ, ಸಹಾಯ, ಪ್ರೇರಣೆ ನೀಡಿದ್ದರು.

ಮಹೇಶನ ಸಾಧನೆಯನ್ನು ಕುರಿತು ಮಾತನಾಡುತ್ತಾ, ಕುಗ್ರಾಮದ ಪ್ರತಿಭೆಯಾಗಿದ್ದರೂ, ಸುಮಾರು ಐಧಾರು ವರ್ಷಗಳ ಹಿಂದೆಯೇ ತಮ್ಮ ರಾಮಕೃಷ್ಣ ಆಶ್ರಮಕ್ಕೆ ಭೇಟಿ ನೀಡಿ, ಸ್ವಾಮಿ ವಿವೇಕಾನಂದರ ಬಗ್ಗೆ ವಿಚಾರಧಾರೆಗಳನ್ನು ತಿಳಿದು, ಅವರ ವ್ಯಕ್ತಿತ್ವದಿಂದ ಪ್ರೇರಿತನಾಗಿ, ಮಹೇಶ, ತನ್ನ ಓದು, ಆಸಕ್ತಿ, ಶ್ರದ್ದೆ ಮತ್ತು ವಿಶೇಷ ಪ್ರಯತ್ನದಿಂದ ಇಂದು ಸತತವಾಗಿ 14 ಗಂಟೆ ಗಳ ಕಾಲ ಸ್ವಾಮಿ ವಿವೇಕಾನಂದರ ಬಗ್ಗೆ ಮಾತಾನಾಡಿದ್ದು ಒಂದು ವಿಶೇಷತೆಯೇ ಸರಿ. “ಇಷ್ಟು ಚಿಕ್ಕ ವಯಸ್ಸಿನಲ್ಲಿ 14 ಗಂಟೆಗಳ ಕಾಲ ಭಾಷಣ ಮಾಡುವುದು ಅಷ್ಟು ಸುಲಭದ ವಿಚಾರವಲ್ಲ. ಇದು ಮಹಾ ವಿಶ್ವ ಚೈತನ್ಯ ಸ್ವಾಮಿ ವಿವೇಕಾನಂದರ ಅನುಗ್ರಹ ಈತನ ಮೇಲಿರುವುದಕ್ಕೆ ಸಾಕ್ಷಿ. ಇಡೀ ಜಗತ್ತಿಗೆ ಮಾರ್ಗದರ್ಶಕರಾದ ಸ್ವಾಮಿ ವಿವೇಕಾನಂದರ ಚಿತ್ರಣವನ್ನು ಆತ ಶಬ್ದಗಳ ಮೂಲಕ ಎಲ್ಲರ ಮುಂದಿಟ್ಟಿದ್ದಾನೆ. ಭಗವಂತನು ಮಹೇಶನ ಆಂತರ್ಯಕ್ಕೆ ಸಹಜವಾಗಿ ಮೇಧಾಶಕ್ತಿ, ಬುದ್ಧಿ ಶಕ್ತಿ ಮತ್ತು ಕ್ರಿಯಾಶಕ್ತಿಯನ್ನು ಅಭಿವ್ಯಕ್ತಗೊಳಿಸುವ ಶಕ್ತಿ, ಪ್ರತಿಭೆ ನೀಡಿದ್ದಾನೆ. ಮಹೇಶ ಆಸಕ್ತಿ , ಶ್ರದ್ದೆ, ಬೆಳೆಸಿಕೊಂಡು, ಭಾರತ ದೇಶದ ಬಗ್ಗೆ ಒಂದು ಅದ್ಭುತ ದೇಶ ಪ್ರೇಮವನ್ನು ತೋರಿಸಿ ಇತರರಿಗೆ ಸ್ಪೂರ್ತಿಯಾಗಿರುತ್ತಾನೆ,” ಎಂದು ಸ್ವಾಮೀಜಿ ಅಭಿಪ್ರಾಯ ಪಟ್ಟರು.

“ಒಂದು ಸಣ್ಣ ಬೀಜ ಹೇಗೆ ಹೆಮ್ಮರವಾಗಿ ಬೆಳೆದು ಇತರರಿಗೆ ನೀರು, ಬೆಳಕು, ಆಮ್ಲಜನಕ ಒದಗಿಸುತ್ತದೆಯೋ ಹಾಗೆಯೇ ಈ ಪುಟ್ಟ ಬಾಲಕ ಮಹೇಶ ತನ್ನೆಲ್ಲ ಪಾಂಡಿತ್ಯವನ್ನು ಇಡೀ ಜಗತ್ತಿನ ಯುವ ಪೀಳಿಗೆಗೆ ಸಾರಲು ಹೊರಟಿದ್ದಾನೆ. ಈತನ ಭವಿಷ್ಯ ಉಜ್ವಲವಾಗಿರಲಿ ಎಂದು ಸ್ವಾಮೀಜಿ ಹಾರೈಸಿದರು.

“ಸ್ವಾಮಿ ವಿವೇಕಾನಂದರ ಆದರ್ಶ-ಬೋಧನೆಗಳನ್ನು ಮಕ್ಕಳು ಅಳವಡಿಸಿಕೊಂಡಲ್ಲಿ, ಅವರು ಸತ್ಪ್ರಜೆಗಳಾಗಿ, ಈ ವಿಶ್ವಕ್ಕೆ ಬಹು ದೊಡ್ಡ ಕೊಡುಗೆ ನೀಡಬಲ್ಲರು, ” ಎಂದು ಅವರು ಅಭಿಪ್ರಾಯಟ್ಟರು.

ಈ ಸಂದರ್ಭದಲ್ಲಿ ಮಾತನಾಡಿದ ಪೂರ್ಣ ಚೇತನ ಶಾಲೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದರ್ಶನ್ ರಾಜ್ ಬಿ ಶ್ರೀ ರಾಮಕೃಷ್ಣ ಪರಮಹಂಸ- ಮಾತೆ ಶಾರದಾ ದೇವಿ- ಸ್ವಾಮಿ ವಿವೇಕಾನಂದರ ಬೋಧನೆಗಳನ್ನು ವಿದ್ಯಾರ್ಥಿ ಜೀವನದಿಂದಲೇ ಮಕ್ಕಳು ಅಳವಡಿಸಿಕೊಳ್ಳಬೇಕು. ಅದು ಅವರ ಬದುಕಿಗೆ ಒಂದು ಧನಾತ್ಮಕ ಪ್ರೇರಣೆಯಾಗುತ್ತದೆ, ಎಂದು ಅಭಿಪ್ರಾಯಪಟ್ಟರು.

“ಆಧ್ಯಾತ್ಮಿಕತೆಯ ಸ್ಪರ್ಶವಿಲ್ಲದ ಆಧುನಿಕ ಶಿಕ್ಷಣ- ಜೀವನ, ಪರಿಮಳ ರಹಿತ ಹೂವಿನಂತೆ. ಅದು ಯಾವುದಕ್ಕೂ ಪ್ರಯೋಜನಕ್ಕೆ ಬಾರದು. ಇದನ್ನು ನಮ್ಮ ವಿದ್ಯಾರ್ಥಿಗಳು ಅರಿತುಕೊಳ್ಳಬೇಕು,” ಎಂದು ಅವರು ಅಭಿಪ್ರಾಯಪಟ್ಟರು.

ಶ್ರೀ ರಾಮಕೃಷ್ಣ ವಿದ್ಯಾಶಾಲಾದ ಸಂಚಾಲಕರಾದ ಸ್ವಾಮಿ ಶ್ರೀ ಯುಕ್ತೇಶಾನಂದ ಮಹಾರಾಜ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ವಿದ್ಯಾರ್ಥಿ ಸಾಧಕನನ್ನು ಆಶೀರ್ವದಿಸಿದರು.

RELATED ARTICLES
- Advertisment -
Google search engine

Most Popular