ಗುಂಡ್ಲುಪೇಟೆ: ಆಷಾಢ ಮಾಸದ ಎರಡನೇ ಶುಕ್ರವಾರದ ಪ್ರಯುಕ್ತ ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ರಸ್ತೆಯಲ್ಲಿ ಶ್ರೀ ರಾಮೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಿತು.
ಶ್ರೀ ರಾಮೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪಾರ್ವತಮ್ಮನ ಮೂರ್ತಿಗೆ ಉಯ್ಯಾಲೆ ಮೇಲೆ ಕುಳಿತಿರುವ ಹಾಗೆ ಅಲಂಕಾರ ಮಾಡಿ, ಹಸಿರು ಬಣ್ಣದ ಸೀರೆಯುಡಿಸಿ ವಿವಿಧ ಹೂವಿಗಳಿಂದ ಅಲಂಕರಿಸಿ ದೇವಸ್ಥಾನದ ಅರ್ಚಕ ಶಂಕರ ನಾರಾಯಣ ಜೋಯಿಸಿ ವಿಶೇಷ ಪೂಜೆ ಸಲ್ಲಿಕೆ ಮಾಡಿದರು. ಇನ್ನೂ ಇದಕ್ಕು ಮೊದಲು ಪಾರ್ವತಮ್ಮನವರ ಮೂರ್ತಿಗೆ ಹಲವು ಅಭಿಷೇಕಗಳನ್ನು ನೆರವೇರಿಸಲಾಯಿತು.
ಎರಡನೇ ಆಷಾಢ ಶುಕ್ರವಾರದ ಪ್ರಯುಕ್ತ ದೇವಸ್ಥಾನಕ್ಕೆ ನೂರಾರು ಮಂದಿ ಭಕ್ತರು ಆಗಮಿಸಿ ಪಾರ್ವತಮ್ಮನವರು ಉಯ್ಯಾಲೆ ಮೇಲೆ ಕುಳಿತಿರುವ ಅಲಂಕಾರವನ್ನು ಕಣ್ತುಂಬಿಕೊಂಡರು ಪೂಜೆ ಸಲ್ಲಿಕೆ ಮಾಡಿದರು. ನಂತರ ದೇವಸ್ಥಾನದ ವತಿಯಿಂದ ಪ್ರಸಾದ ವಿನಿಯೋಗ ನಡೆಯಿತು.
ಗೋಪಾಲಸ್ವಾಮಿ ಬೆಟ್ಟದಲ್ಲಿ ಭಕ್ತರ ದಂಡು: ಆಷಾಢದ ಹಿನ್ನೆಲೆ ತಾಲೂಕಿನ ಪ್ರಮುಖ ಧಾರ್ಮಿಕ ಸ್ಥಳ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಭಕ್ತ ಸಾಗರವೇ ಹರಿದು ಬಂದಿತ್ತು. ಅದರಲ್ಲಿ ಮಹಿಳಾ ಭಕ್ತಾದಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದರು.
ವಿವಿಧ ಗ್ರಾಮಗಳು ಸೇರಿದಂತೆ ಅಕ್ಕಪಕ್ಕದ ತಾಲೂಕು, ಜಿಲ್ಲೆಗಳಿಂದ ಸಾವಿರಾರು ಮಂದಿ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಆಗಮಿಸಿದ್ದರು. ಇದರಿಂದ ಬೆಟ್ಟದಲ್ಲಿ ಜನಜಂಗುಳಿ ಹೆಚ್ಚಿತ್ತು. ಭಕ್ತರು ಗಂಟೆಗೂ ಅಧಿಕ ಕಾಲ ಸರತಿ ಸಾಲಿನಲ್ಲಿ ನಿಂತು ಗೋಪಾಲನಿಗೆ ಪೂಜೆ ಸಲ್ಲಿಸಿದರು. ದೇವಸ್ಥಾನದ ಅರ್ಚಕ ಗೋಪಾಲಕೃಷ್ಣ ಭಟ್ಟರು ದೇವರ ಮೂರ್ತಿಗೆ ವಿಶೇಷ ಅಲಂಕಾರ ಮಾಡಿ ಮಹಾ ಮಂಗಳಾರತಿ ನೆರವೇರಿಸಿದರು.



