ನವದೆಹಲಿ: ತಬಲಾ ಮಾಂತ್ರಿಕ ಜಾಕಿರ್ ಹುಸೇನ್ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಅವರ ಕುಟುಂಬ ನಿನ್ನೆ ತಿಳಿಸಿದೆ. ಅವರಿಗೆ ೭೩ ವರ್ಷ. ಜಾಕಿರ್ ಹುಸೇನ್ ಅವರು ಇಡಿಯೋಪಥಿಕ್ ಪಲ್ಮನರಿ ಫೈಬ್ರೋಸಿಸ್‌ನಿಂದ ಉಂಟಾಗುವ ತೊಂದರೆಗಳಿಂದ ಸಾವನ್ನಪ್ಪಿದ್ದಾರೆ ಎಂದು ಕುಟುಂಬ ಹೇಳಿಕೆಯಲ್ಲಿ ತಿಳಿಸಿದೆ. ಕಳೆದ ಎರಡು ವಾರಗಳಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಜಾಕಿರ್ ಹುಸೇನ್ ಮಾರ್ಚ್ ೯ ೧೯೫೧ರಲ್ಲಿ ಮುಂಬೈನಲ್ಲಿ ಜನಿಸಿದರು. ಅವರು ತಬಲಾ ವಾದಕ ಉಸ್ತಾದ್ ಅಲ್ಲಾ ರಖಾ ಅವರ ಮಗ, ಜಾಕಿರ್ ತಂದೆಯಿಂದಲೇ ತಬಲಾ ನುಡಿಸುವುದನ್ನು ಕಲಿತಿದ್ದರು. ಅವರು ಶ್ಲೋಕ, ಮಂತ್ರಗಳನ್ನೂ ಕಲಿತಿದ್ದರು. ಅವರ ೧೧ನೇ ವಯಸ್ಸಿನಲ್ಲಿ ಅಮೆರಿಕದಲ್ಲಿ ತಮ್ಮ ಮೊದಲ ಸಂಗೀತ ಕಚೇರಿ ನಡೆಸಿದ್ದರು. ಜಾಕಿರ್ ಹುಸೇನ್ಗೆ ೨೦೦೯ರಲ್ಲಿ ಗ್ರ್ಯಾಮಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. ೧೯೮೮ ರಲ್ಲಿ ಪದ್ಮಶ್ರೀ ಮತ್ತು ೨೦೦೨ ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಗಿತ್ತು. ೧೯೯೦ ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಶ್ರೇಷ್ಠ ತಬಲಾ ವಾದಕ ಎಂದು ಪರಿಗಣಿಸಲ್ಪಟ್ಟ ಝಾಕಿರ್ ಹುಸೇನ್, ಪತ್ನಿ ಆಂಟೋನಿಯಾ ಮಿನ್ನೆಕೋಲಾ ಮತ್ತು ಹೆಣ್ಣುಮಕ್ಕಳು ಅನಿಸಾ ಖುರೇಷಿ, ಇಸಾಬೆಲ್ಲಾ ಖುರೇಷಿ ಅವರನ್ನು ಅಗಲಿದ್ದಾರೆ.