ಬಳ್ಳಾರಿ: ಮಾನವನ ದೇಹದ ರಕ್ತ ನಾಳಗಳಲ್ಲಿ ಹರಿಯುವ ರಕ್ತವು ಸಾಮಾನ್ಯಕ್ಕಿಂತ ಅಧಿಕ ಒತ್ತಡದಲ್ಲಿ ಚಲಿಸುವ ಕ್ರಿಯೆಗೆ ಅಧಿಕ ರಕ್ತದೊತ್ತಡ ಎಂದು ಹೇಳಲಾಗುತ್ತಿದ್ದು, ಹಲವು ಕ್ರಿಯೆಗಳಿಂದ ರಕ್ತದೊತ್ತಡವನ್ನು ಹತೋಟಿಯಲ್ಲಿರಿಸಿಕೊಂಡು ಪ್ರತಿಯೊಬ್ಬರೂ ಕಾಳಜಿ ವಹಿಸಬೇಕು ಎಂದು ಜಿಲ್ಲಾ ಸರ್ವೇಕ್ಷಾಣಾಧಿಕಾರಿ ಡಾ.ಮರಿಯಂಬಿ ವಿ.ಕೆ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ರೂಪನಗುಡಿ ಸಮುದಾಯ ಆರೋಗ್ಯ ಕೇಂದ್ರ ವ್ಯಾಪ್ತಿಯ ಇಬ್ರಾಹಿಂಪುರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ವಿಶ್ವ ರಕ್ತದೊತ್ತಡ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಾನವನಿಗೆ ಅತಿಯಾಗಿ ಬೊಜ್ಜು ಬರುವುದರಿಂದ ಮತ್ತು ಹೆಚ್ಚಿನ ತೂಕದಿಂದ ರಕ್ತದೊತ್ತಡ ಬರುತ್ತದೆ. ಅದೇರೀತಿಯಾಗಿ ಅತಿಯಾದ ಉಪ್ಪಿನ ಅಂಶವಿರುವ ಆಹಾರ ಸೇವನೆ, ಧೂಮಪಾನ ಮತ್ತು ಮದ್ಯಪಾನ ಮಾಡುವುದರಿಂದ ಅಧಿಕ ರಕ್ತದೊತ್ತಡ ಬರುತ್ತದೆ ಎಂದು ತಿಳಿಸಿದರು. ಅಧಿಕ ರಕ್ತದೊತ್ತಡ ಹತೋಟಿಯಲ್ಲಿಡಲು ಮಾನವನು ದೈಹಿಕ ಚಟುವಟಿಕೆ ಹೆಚ್ಚಿಸಬೇಕು. ತೂಕ ಇಳಿಸಬೇಕು. ಧೂಮಪಾನ, ಮಧ್ಯಪಾನ ಬಿಡಬೇಕು. ಕೊಬ್ಬು ಮತ್ತು ಉಪ್ಪಿನ ಅಂಶ ಕಡಿಮೆ ಇರುವ ಆಹಾರ ಸೇವನೆ ಮಾಡಬೇಕು ಎಂದು ಹೇಳಿದರು.
ಬಳಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಸಾರ್ವಜನಿಕರಿಗೂ ಆರೋಗ್ಯ ತಪಾಸಣೆ ಮಾಡಲಾಯಿತು.
ಜಿಲ್ಲಾ ಎನ್‍ಸಿಡಿ ಸಂಯೋಜಕರಾದ ಡಾ.ಜಬಿನ್ ತಾಜ್, ರೂಪನಗುಡಿ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಚಿತ್ರಾ ವರ್ಣೇಕರ್, ಹೆಚ್‍ಐಓ ವೈ.ವೀರಾರೆಡ್ಡಿ, ತಾರಾನಾಥ ಆಯುರ್ವೇದಿಕ್ ಆಸ್ಪತ್ರೆಯ ಆಯುಷ್ ವೈದ್ಯಾಧಿಕಾರಿ ತಿಪ್ಪೇಸ್ವಾಮಿ, ದಂತ ವೈದ್ಯಾಧಿಕಾರಿ ಡಾ.ಪ್ರಿಯಾಂಕಾ ರೆಡ್ಡಿ, ಕಾರ್ಯಕ್ರಮ ಸಂಯೋಜಕ ಹಾಗೂ ನಸಿರ್ಂಗ್ ಅಧಿಕಾರಿ ಸಣ್ಣ ದುರುಗಪ್ಪ ಸೇರಿದಂತೆ ರೂಪನಗುಡಿ ಸಮುದಾಯ ಆರೋಗ್ಯ ಕೇಂದ್ರ ಸಿಬ್ಬಂದಿ ವರ್ಗದವರು, ಆಶಾ ಕಾರ್ಯಕರ್ತೆಯರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.