ಗುಂಡ್ಲುಪೇಟೆ: ಕಾಡಂಚಿನ ಹಾಡಿ ಜನರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿ ಮತ್ತು ನೌಕರರಾದ ಮಂಗಳ ಸಲಹೆ ನೀಡಿದರು.
ತಾಲೂಕಿನ ಬಂಡೀಪುರ ಅರಣ್ಯ ವ್ಯಾಪ್ತಿಯ ಆಡಿನಕಣಿವೆ ಮತ್ತು ಕಾರೇಮಾಳ ಕಾಲೋನಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಚೇರಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಮಂಗಲ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಮಲೇರಿಯಾ ನಿಯಂತ್ರಣ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಕಾಡಂಚಿನ ಗ್ರಾಮಗಳ ಮಳೆಗಾಲದಲ್ಲಿ ಮನೆಸುತ್ತ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ಶುಚಿತ್ವಕ್ಕೆ ಆದ್ಯತೆ ನೀಡಬೇಕು. ಜ್ವರ, ಶೀತ, ಕೆಮ್ಮು ಕಾಣಿಸಿಕೊಂಡರೆ ನಿರ್ಲಕ್ಷ ಮಾಡದೆ ಕೂಡಲೆ ಪಕ್ಕದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ವೈದ್ಯರಿಂದ ಚಿಕಿತ್ಸೆ ಪಡೆಯಬೇಕು. ಮತ್ತು ರೋಗ ತಡೆಗಟ್ಟಲು ದಿನ ನಿತ್ಯ ಮಕ್ಕಳಿಗೆ ಮೈ ಕೈ ತುಂಬಾ ಬಟ್ಟೆ ಧರಿಸಬೇಕು. ಮಲುಗುವಾಗ ಸೊಳ್ಳೆ ಪರದೆ ಬಳಸಬೇಕು. ಕುಡಿಯುವ ನೀರನ್ನು ವಾರಕೊಮ್ಮೆ ಬದಲಾಯಿಸ ಬೇಕು. ಮನೆಯ ಸುತ್ತಮುತ್ತಲಿನ ಪರಿಸರವನ್ನು ಸುಚಿಯಾಗಿಡಬೇಕು. ಚರಂಡಿಗಳಲ್ಲಿ ನೀರು ಶೇಖರಣೆಯಾಗದಂತೆ ಸ್ವಚ್ಛತೆ ಮಾಡಿಕೊಳ್ಳಬೇಕು ಎಂದು ಜನರಲ್ಲಿ ಜಾಗೃತಿ ಮೂಡಿಸಲಾಯಿತು.
ನಂತರ ಬಂಡೀಪುರ ಉಪಕೇಂದ್ರದಲ್ಲಿ ಕರಕುಶಲ ವಸ್ತುಗಳು ಮತ್ತು ಪಿಠೋಪಕರಣ ತಯಾರಿಕೆಯಲ್ಲಿ ತೊಡಗಿದ್ದ ಅರಣ್ಯ ವ್ಯಾಪ್ತಿಯ ಹಾಡಿಯ ಜನರಿಗೂ ಮಲೇರಿಯಾ ವಿರೋಧಿ ಮಾಸಾಚರಣೆ ಕಾರ್ಯಕ್ರಮದ ಬಗ್ಗೆ ಅರಿವು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರದ ನೌಕರರಾದ ಮಹೇಶ್, ಮಂಗಳಮ್ಮ, ಸುಮಾ, ಬಸವಣ್ಣ, ಆರೋಗ್ಯ ಇಲಾಖೆಯ ಅಧಿಕಾರಿಗಳು, ನೌಕರರು ಮತ್ತು ಗ್ರಾಮಸ್ಥರು ಹಾಜರಿದ್ದರು.