ಮೈಸೂರು: ತಿ ನರಸೀಪುರ ತಾಲ್ಲೂಕಿನ 36 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಬರುವಂತಹ ಪ್ರತಿ ಗ್ರಾಮಗಳಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಮುಂಜಾಗ್ರತ ಕ್ರಮವಹಿಸಿ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ. ಎಂ.ಗಾಯಿತ್ರಿ ಇಓ ಮತ್ತು ಪಿಡಿಒಗಳಿಗೆ ಸೂಚಿಸಿದರು.
ತಿ.ನರಸೀಪುರ ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಜಾನುವಾರುಗಳಿಗೂ ಸಹ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮವಹಿಸಿ ಎಂದರು.
ಈ ವೇಳೆ ಜೆ ಜೆ ಎಂ, ಮ-ನರೇಗಾ ಯೋಜನೆ, ಸ್ವಚ್ಛ ಭಾರತ್ ಅಭಿಯಾನ, ಮಿಷನ್ ಅಂತ್ಯೋದಯ, ಎನ್ ಆರ್ ಎಲ್ ಎಂ ಯೋಜನೆ, ಡಿಜಿಟಲ್ ಗ್ರಂಥಾಲಯ ಸೇರಿದಂತೆ ಮುಂತಾದ ವಿಷಯಗಳ ಕುರಿತು ಗ್ರಾಮ ಪಂಚಾಯಿತಿ ವಾರು ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ಮ-ನರೇಗಾ ಯೋಜನೆಯಡಿಯಲ್ಲಿ ಕಡಿಮೆ ಮಾನವ ದಿನಗಳನ್ನು ಸಾಧಿಸಿರುವ ಗ್ರಾಮ ಪಂಚಾಯಿತಿಗಳಿಗೆ ಹೆಚ್ಚು ಮಾನವ ದಿನಗಳನ್ನು ಸಾಧಿಸಲು ಸೂಚನೆ ನೀಡಿದರು.
ನಂತರ ಗರ್ಗೆಶ್ವರಿ ಗ್ರಾಮ ಪಂಚಾಯಿತಿಯ ಘನ ತ್ಯಾಜ್ಯ ವಿಲೇವಾರಿ ಘಟಕ ಹಾಗೂ ಡಿಜಿಟಲ್ ಅಂಗನವಾಡಿಗೆ ಭೇಟಿ ನೀಡಿ ಪರಿಶೀಲಿಸಿದರು.
ಸಭೆಯಲ್ಲಿ ತಾ. ಪಂ. ಕಾರ್ಯನಿರ್ವಾಹಕ ಅಧಿಕಾರಿಗಳಾದ ಸಿ. ಕೃಷ್ಣ, ತಾಲ್ಲೂಕಿನ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ರವರಾದ ರಶ್ಮಿ, ಸಹಾಯಕ ನಿರ್ದೇಶಕರಾದ(ಗ್ರಾ. ಉ) ಶಶಿಕುಮಾರ್, ಸಹಾಯಕ ನಿರ್ದೇಶಕರು(ಪಂ.ರಾಜ್) ಮಾದೇಶ್, ಸಹಾಯಕ ಲೆಕ್ಕಾಧಿಕಾರಿಗಳಾದ ಸುರೇಖಾ , ತಾಲ್ಲೂಕು ಯೋಜನಾಧಿಕಾರಿಗಳಾದ ಜಯಂತಿ, ಗ್ರಾ. ಪಂ. ಅಭಿವೃದ್ಧಿ ಅಧಿಕಾರಿಗಳು, ತಾಂತ್ರಿಕ ಸಂಯೋಜಕರು, ತಾಂತ್ರಿಕ ಸಹಾಯಕ ಅಭಿಯಂತರರು, ಎನ್ ಆರ್ ಎಲ್ ಎಂ ಸಿಬ್ಬಂದಿಗಳು ಹಾಗೂ ತಾಲ್ಲೂಕು ಪಂಚಾಯಿತಿ ಸಿಬ್ಬಂದಿಗಳು ಹಾಜರಿದ್ದರು.