ಮೈಸೂರು: ರಾಜ್ಯದಲ್ಲಿ ಬರಗಾಲ ಇದ್ದು, ನೀರಿನ ಲಭ್ಯತೆ ಕಡಿಮೆ ಇದೆ. ಇದರಿಂದ ಮುಂದಿನ ದಿನಗಳಲ್ಲಿ ಪಶು ಆಹಾರ ಕೊರತೆ ಆಗುವ ಸಂಭವವಿದ್ದು, ಕೊರತೆ ಅಗದ ಹಾಗೆ ಅಧಿಕಾರಿಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳಿ ಎಂದು ಪಶು ಸಂಗೋಪನಾ ಹಾಗೂ ರೇಷ್ಮೆ ಇಲಾಖೆಯ ಸಚಿವ ಕೆ ವೆಂಕಟೇಶ್ ಅವರು ತಿಳಿಸಿದರು.
ಜಿಲ್ಲಾ ಪಂಚಾಯತ್ ದೇವರಾಜ ಅರಸು ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮೈಸೂರು ವಿಭಾಗದ ಇಲಾಖಾ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಚರ್ಮ ಗಂಟು ರೋಗವನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚಿ ಚಿಕಿತ್ಸೆ ನೀಡಿ. ಪಶುಗಳಿಗೆ ಶೇಕಡಾ 100 ರಷ್ಟು ಚಿಕಿತ್ಸೆ ನೀಡಬೇಕು. ಪಶುಗಳಿಗೆ ಅಗತ್ಯವಾದ ಪಶು ಆಹಾರವನ್ನು ಬೆಳೆಯಲು ಬಿತ್ತನೆ ಕಿಟ್ ಗಳನ್ನು ರೈತರಿಗೆ ಅಗತ್ಯ ಸಂಖ್ಯೆಯಲ್ಲಿ ವಿತರಣೆ ಮಾಡಿ. ನೀರಾವರಿ ಸೌಲಭ್ಯ ಇರುವವರಿಗೆ ಪಶು ಆಹಾರದ ಮಿನಿ ಕಿಟ್ ಗಳನ್ನು ಮೊದಲ ಆದ್ಯತೆಯಾಗಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ರೈತರಿಗೆ ಫ್ರೂಟ್ಸ್ ಐ.ಡಿ ಯನ್ನು ಕಡ್ಡಾಯವಾಗಿ ಮಾಡಿಸಬೇಕು. ಮಿನಿ ಕಿಟ್ ಗಳನ್ನು ಫ್ರೂಟ್ಸ್ ಐ ಡಿ ಮೂಲಕವೇ ವಿತರಣೆ ಮಾಡಬೇಕು. ವಿಭಾಗದ ಎಲ್ಲಾ ಜಿಲ್ಲೆಗಳಲ್ಲಿ ಸರಾಸರಿ 22 ವಾರಗಳಿಗೆ ಆಗುವಷ್ಟು ಪಶು ಆಹಾರ ಲಭ್ಯವಿದೆ. ಈಗಾಗಲೇ ನೀಡಿರುವ ಮಿನಿ ಕಿಟ್ ಗಳ ಬಿತ್ತನೆಯು ಆಗಿದ್ದು ಆ ಮೇವು ಸಹ ಮುಂದಿನ 2 ತಿಂಗಳುಗಳಲ್ಲಿ ಲಭ್ಯವಾಗುತ್ತದೆ. ಗೋ ಶಾಲೆಗಳಿಗೆ ಅಗತ್ಯವಾದ ಪಶು ಆಹಾರವನ್ನು ಸಂಗ್ರಹಿಸಿ ಇಟ್ಟುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಧಿಕಾರಿಗಳು ಕೇವಲ ಕಚೇರಿಗಳಿಗೆ ಸೀಮಿತವಾಗಬಾರದು. ಹಳ್ಳಿಗಳಿಗೆ ಬೇಟಿ ನೀಡಿ ವಾಸ್ತವ ಚಿತ್ರಣವನ್ನು ಅರಿಯಬೇಕು. ಆಕಸ್ಮಿಕವಾಗಿ ಮರಣ ಹೊಂದಿರುವ ಪಶುಗಳ ಪರಿಹಾರವನ್ನು ಸಕಾಲದಲ್ಲಿ ವಿತರಣೆ ಮಾಡಬೇಕು. ಕೆಲವು ಮಿಲ್ಕ್ ಯೂನಿಯನ್ ಗಳು ರೈತರಿಂದ ಹಾಲು ಖರೀದಿ ದರವನ್ನು ಕಡಿಮೆ ಮಾಡಿದ್ದು, ಈ ಬಗ್ಗೆ ಮಿಲ್ಕ್ ಯೂನಿಯನ್ ಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಅಗತ್ಯ ಕ್ರಮ ವಹಿಸುವಂತೆ ಇಲಾಖೆಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದರು. ಮೇವು ಖರೀದಿ ಬೆಲೆಯನ್ನು 2012 ರಲ್ಲಿ ಕೆ ಜಿ ಗೆ 6 ರೂ ನಿಗದಿ ಮಾಡಿದ್ದು, ಈ ದರದಲ್ಲಿ ಮೇವು ಖರೀದಿ ಕಷ್ಟವಾಗುತ್ತಿದೆ ಎಂದು ಅಧಿಕಾರಿಗಳು ಮಾಡಿದ ಮನವಿಗೆ ಸಚಿವರು ಸ್ಪಂದಿಸಿ, ಈ ಬಗ್ಗೆ ಪರಿಶೀಲಿಸಿ ದರವನ್ನು ಹೆಚ್ಚಳ ಮಾಡಲಾಗುವುದು ಎಂದು ಭರವಸೆ ನೀಡಿದರು.
ಪಶು ಸಂಗೋಪನಾ ಇಲಾಖೆಯ ಕಾರ್ಯದರ್ಶಿಗಳಾದ ಸಲ್ಮಾ ಸಾಹಿಂ ಅವರು ಮಾತನಾಡಿ ಪಶು ಸಂಗೋಪನಾ ಇಲಾಖೆಯ ಕಾಮಗಾರಿಗಳನ್ನು ಪಿ ಅರ್ ಇ ಡಿ ಗೆ ವಹಿಸಲಾಗಿದ್ದು ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಗುಣಮಟ್ಟದಲ್ಲಿ ಪೂರ್ಣಗೊಳಿಸಬೇಕು. ಇಲಾಖೆಯ ಅಧಿಕಾರಿಗಳು ಕಾಮಗಾರಿಗಳಿಗೆ ಬೇಟಿ ನೀಡಿ ಗುಣಮಟ್ಟವನ್ನು ಪರಿಶೀಲಿಸಬೇಕು. ಪಶು ಆಂಬುಲೆನ್ಸ್ ಸೇವೆಯನ್ನು ಒದಗಿಸಲಾಗಿದೆ. ಈ ಸೇವೆಯಲ್ಲಿ ಪ್ರಗತಿಯನ್ನು ಸಾಧಿಸಬೇಕು ಎಂದರು. ಈಗಾಗಲೇ ನೀಡಿರುವ ಮಿನಿ ಕಿಟ್ ಗಳನ್ನು ಹಂಚಿಕೆ ಮಾಡಿ ಇನ್ನೂ ಹೆಚ್ಚಿನ ಬೇಡಿಕೆ ಇದ್ದರೆ, ವೈಜ್ಞಾನಿಕವಾಗಿ ಸಮೀಕ್ಷೆ ಮಾಡಿ ಬೇಡಿಕೆಯನ್ನು ಜಿಲ್ಲಾಧಿಕಾರಿಗಳಿಂದ ಅನುಮೋದನೆ ಪಡೆದು ಸಲ್ಲಿಸಿ ಎಂದರು.
ಮೈಸೂರು ವಿಭಾಗದಲ್ಲಿ 4 ಲಕ್ಷ ನಾಯಿಗಳಿಗೆ ರೇಬಿಸ್ ಲಸಿಕೆಯನ್ನು ನೀಡಲಾಗಿದೆ. ನಾಯಿಗಳ ಸಂತಾನ ಸಂಖ್ಯೆಯನ್ನು ಹತೋಟಿಯಲ್ಲಿ ಇಡಲು ಎ ಬಿ ಸಿ ಸೆಂಟರ್ ಗಳನ್ನು ತೆರೆಯಲಾಗುತ್ತಿದೆ. ಈ ಸೆಂಟರ್ ಗಳಲ್ಲಿ ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು. ಸಭೆಯಲ್ಲಿ ಮೈಸೂರು ವಿಭಾಗದ ಜಿಲ್ಲೆಗಳ ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳು, ವಿವಿಧ ಮಿಲ್ಕ್ ಯೂನಿಯನ್ ಗಳ ಅಧ್ಯಕ್ಷರು ಉಪಸ್ಥಿತರಿದ್ದರು.