Friday, April 11, 2025
Google search engine

Homeರಾಜ್ಯಸುದ್ದಿಜಾಲನೀರಿನ ಹಾಗೂ ಮೇವು ಸಮಸ್ಯೆ ಎದುರಾಗದಂತೆ ಕ್ರಮವಹಿಸಿ: ಡಾ. ಅವಿನಾಶ್ ಮೆನನ್ ರಾಜೇಂದ್ರನ್

ನೀರಿನ ಹಾಗೂ ಮೇವು ಸಮಸ್ಯೆ ಎದುರಾಗದಂತೆ ಕ್ರಮವಹಿಸಿ: ಡಾ. ಅವಿನಾಶ್ ಮೆನನ್ ರಾಜೇಂದ್ರನ್

ರಾಮನಗರ: ರಾಮನಗರ ಜಿಲ್ಲೆಯ ರಾಮನಗರ, ಕನಕಪುರ ಮತ್ತು ಹಾರೋಹಳ್ಳಿ ತಾಲ್ಲೂಕುಗಳನ್ನು ತೀವ್ರ ಬರ ಪೀಡಿತ ತಾಲ್ಲೂಕುಗಳೆಂದು ಹಾಗೂ ಮಾಗಡಿ ಮತ್ತು ಚನ್ನಪಟ್ಟಣ ತಾಲ್ಲೂಕುಗಳನ್ನು ಸಾಧಾರಣ ಬರ ಪೀಡಿತ ತಾಲ್ಲೂಕುಗಳೆಂದು ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಅವರು ತಿಳಿಸಿದರು.

ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬರ ಪರಿಸ್ಥಿತಿ ನಿರ್ವಹಣೆ ಕುರಿತಂತೆ ಆಯೋಜಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಂಬರುವ ದಿನಗಳಲ್ಲಿ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಎದುರಾಗುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಮುನ್ನೆಚ್ಚರಿಕೆಯಾಗಿ ಬೋರ್‌ವೆಲ್, ಕೆರೆ-ಕಟ್ಟೆ, ಪೈಪ್ ಲೈನ್, ಟ್ಯಾಂಕರ್, ಖಾಸಗಿ ಬೋರ್ ವೆಲ್ ಮೂಲಕ ಕುಡಿಯುವ ನೀರಿನ ಸರಬರಾಜಿನ ಕುರಿತು ಗಮನಹರಿಸುವಂತೆ ತಿಳಿಸಿದರು.

ಪ್ರಸ್ತುತ ರಾಮನಗರದಲ್ಲಿನ ೩೧ ವಾರ್ಡ್ಗಳಿಗೆ ೫-೬ ದಿನಗಳಿಗೊಮ್ಮೆ, ಮಾಗಡಿಯಲ್ಲಿ ಪ್ರತಿದಿನ, ಕನಕಪುರ, ಚನ್ನಪಟ್ಟಣದಲ್ಲಿ ೨-೩ ದಿನಗಳಿಗೊಮ್ಮೆ ನೀರನ್ನು ಸರಬರಾಜು ಮಾಡಲಾಗುತ್ತಿದೆ ಅದನ್ನು ತಪ್ಪಿಸಿ ಪ್ರತಿದಿನ ನೀರು ಸರಬರಾಜು ಮಾಡುವ ವ್ಯವಸ್ಥೆ ಆಗುವಂತೆ ಕ್ರಮಕೈಗೊಳ್ಳಬೇಕು ಎಂದರು. ನೆಟ್ಟಗಲ್ ಹಿನ್ನೀರಿನ ಪ್ರದೇಶದಲ್ಲಿನ ನೀರನ್ನು ರಾಮನಗರಕ್ಕೆ ತರುವ ಯೋಜನೆಯು ಡಿಸೆಂಬರ್ ಒಳಗೆ ಪೂರ್ಣಗೊಳಿಸಲು ಅಧಿಕಾರಿಗಳು ಕ್ರಮವಹಿಸಬೇಕು ಎಂದರು.

ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಸಂಬಂಧಿಸಿದಂತೆ ಅಗತ್ಯ ಅನುದಾನ ಲಭ್ಯವಿರುವುದರಿಂದ ಅಧಿಕಾರಿಗಳು ಜನರಿಗೆ ಪ್ರತಿದಿನ ಮನೆಗಳಿಗೆ ನೀರು ಸರಬರಾಜು ಮಾಡಲು ಕ್ರಮವಹಿಸಬೇಕು ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಿಲ್ಲಾ ಯೋಜನಾ ನಿರ್ದೇಶಕರು, ಕಾರ್ಯ ನಿರ್ವಾಹಕ ಅಧಿಕಾರಿಗಳು, ನಗರಸಭೆ ಅಧಿಕಾರಿಗಳು ಮುಂದಿನ ದಿನಗಳಿಗೆ ನೀರಿನ ಅವಶ್ಯಕತೆ ಬಗ್ಗೆ ಸಮೀಕ್ಷೆ ಮಾಡಿ ವರದಿ ನೀಡುವಂತೆ ತಿಳಿಸಿದರು.

ಬೆಳೆ ಸಮೀಕ್ಷೆ ಮಾಹಿತಿಯನ್ನು ಬೆಳೆ ವಿಮೆ, ಕೃಷಿ ಸಾಲ, ಪಹಣಿ, ಕನಿಷ್ಠ ಬೆಂಬಲ ಬೆಲೆ ಹಾಗೂ ಸರ್ಕಾರದ ವಿವಿಧ ಕಾರ್ಯಕ್ರಮಗಳಿಗೆ ಸಮನ್ವಯಗೊಳಿಸಿಕೊಂಡು ಫಲಾನುಭವಿಗಳಿಗೆ ಸವಲತ್ತು ನೀಡಲು ಬಳಸಲಾಗುತ್ತದೆ. ಬೆಳೆ ವಿವರಗಳನ್ನು ಅಪ್‌ಲೋಡ್ ಮಾಡುವುದರಿಂದ ಇಲಾಖೆಗಳಿಂದ ದೊರೆಯುವ ವಿವಿಧ ಸೌಲಭ್ಯಗಳನ್ನು ಪಡೆಯಲು ಪೂರಕವಾಗುವುದು. ಆದ್ದರಿಂದ ಅಧಿಕಾರಿಗಳು ಜಿಲ್ಲೆಯಲ್ಲಿ ಬೆಳೆ ಸಮೀಕ್ಷೆಯನ್ನು ನಡೆಸುವಂತೆ ತಿಳಿಸಿದರು.

ಅರಣ್ಯ ಇಲಾಖೆಯು ಕಾಡುಪ್ರಾಣಿಗಳಿಗೆ ನೀರಿನ ಸೂಕ್ತ ವ್ಯವಸ್ಥೆ ಮಾಡುವುದು, ಪ್ರಾಣಿಗಳಿಗೆ ಅಗತ್ಯವಿರುವ ಕಡೆ ನರೇಗಾ ಯೋಜನೆಯಡಿ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಜಲಕ್ರೀಡೆ ಆಡಲು ಅನುವಾಗುವಂತೆ ಹೊಂಡ ತೆರೆಯಲು ಕ್ರಮವಹಿಸಿದರೆ ಕಾಡುಪ್ರಾಣಿಗಳು ಹಳ್ಳಿ ಹಾಗೂ ನಗರ ಪ್ರದೇಶಗಳಿಗೆ ಬರುವುದನ್ನು ತಪ್ಪಿಸಬಹುದು ಎಂದರು.

ಅರಣ್ಯ ಇಲಾಖೆಯಲ್ಲಿ ಹಲಸು, ಮಾವು ಸೇರಿದಂತೆ ಅನೇಕ ಗಿಡಗಳನ್ನು ಮಾರಾಟ ಮಾಡಲಾಗುತ್ತಿದ್ದು ಅವುಗಳನ್ನು ರೈತರು ಕೊಂಡು, ಅವುಗಳನ್ನು ಅಗತ್ಯವಿರುವ ಕಡೆ ನೆಡಲು ರೈತರಿಗೆ ಮಾರ್ಗದರ್ಶನ ನೀಡುವಂತೆ ಹಾಗೂ ನಗರೋತ್ಥಾನ ಯೋಜನೆಯಡಿ ಕೈಗೊಂಡ ಕಾಮಗಾರಿಗಳ ಬಳಿ ಗಿಡ ನೆಡಲು ಕ್ರಮವಹಿಸಿದರೆ ಅರಣ್ಯೀಕರಣಕ್ಕೆ ಹೆಚ್ಚು ಸಹಕಾರಿಯಾಗುತ್ತದೆ ಎಂದರು.

ಸಭೆಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಿಗ್ವಿಜಯ್ ಬೋಡ್ಕೆ, ಅಪರ ಜಿಲ್ಲಾಧಿಕಾರಿ ಶಿವಾನಂದ ಮೂರ್ತಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಚಿಕ್ಕ ಸುಬ್ಬಯ್ಯ, ರಾಮನಗರ ಉಪವಿಭಾಗಾಧಿಕಾರಿ ಬಿನೋಯ್, ಕಾರ್ಯನಿರ್ವಾಹಕ ಅಧಿಕಾರಿಗಳು, ತಹಶೀಲ್ದಾರರು, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular