ಪಿರಿಯಾಪಟ್ಟಣ: ಪಟ್ಟಣದ ಹರವೆ ಮಲ್ಲರಾಜಪಟ್ಟಣ ಬಳಿಯ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಪದವಿಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಬೆಟ್ಟದಪುರದ ಡಿಟಿಎಮ್ಎನ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಹಲವು ವಿಭಾಗಗಳಲ್ಲಿ ಪ್ರಥಮ ಸ್ಥಾನ ಗಳಿಸುವ ಮೂಲಕ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.
ವಿದ್ಯಾರ್ಥಿನಿ ಬಿ.ಜೆ ಸಂಜನಾ ಎತ್ತರ ಹಾಗೂ ತ್ರೀ ಜಿಗಿತದಲ್ಲಿ ಪ್ರಥಮ ಮತ್ತು ಉದ್ದ ಜಿಗಿತದಲ್ಲಿ ದ್ವಿತೀಯ ಸ್ಥಾನ ಪಡೆಯುವುದರ ಮೂಲಕ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿ ಗಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ, ತಟ್ಟೆ ಎಸೆತದಲ್ಲಿ ರಕ್ಷಿತಾ ಪ್ರಥಮ, 1500 ಮೀಟರ್ ಓಟದಲ್ಲಿ ಯಶ್ವಂತ್ ಪ್ರಥಮ, 3000 ಮೀಟರ್ ಓಟದಲ್ಲಿ ಅನುಷಾ ಪ್ರಥಮ, ಬರ್ಜಿ ಎಸೆತದಲ್ಲಿ ವೈಶಾಲಿ ಅರಸ್ ದ್ವಿತೀಯ, ಹೆಣ್ಣು ಮಕ್ಕಳ ರಿಲೆಯಲ್ಲಿ ದ್ವಿತೀಯ, ಎತ್ತರ ಜಿಗಿತದಲ್ಲಿ ಪ್ರೀತಂ ತೃತೀಯ, 100 ಮೀಟರ್ ಓಟದಲ್ಲಿ ಸಹನ ತೃತೀಯ ಸ್ಥಾನ ಸೇರಿ ಒಟ್ಟು 7 ವಿಭಾಗಗಳಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಸಂಸ್ಥೆಯ ಅಧ್ಯಕ್ಷರಾದ ಚಂದ್ರಶೇಖರ್ ಅವರು ವಿದ್ಯಾರ್ಥಿಗಳ ಸಾಧನೆಗೆ ಹರ್ಷ ವ್ಯಕ್ತಪಡಿಸಿ ಮಾತನಾಡಿ ಸಂಸ್ಥೆ ಪ್ರಾರಂಭವಾದಾಗಿನಿಂದ ವಿದ್ಯಾರ್ಥಿಗಳಿಗೆ ಪಠ್ಯದ ಜತೆ ಕ್ರೀಡೆ ಸಾಹಿತ್ಯ ಕಲೆ ಸೇರಿದಂತೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಉತ್ತಮ ತರಬೇತಿ ನೀಡುವ ಮೂಲಕ ಸಾಧನೆಗೆ ಸಹಕರಿಸಲಾಗುತ್ತಿದೆ ಎಂದರು.
ಈ ಸಂದರ್ಭ ಸಂಸ್ಥೆಯ ಆಡಳಿತಾಧಿಕಾರಿ ನಟರಾಜ್, ನಿರ್ದೇಶಕರಾದ ವಿಜಯ್ ಕುಮಾರ್, ಪ್ರಾಂಶುಪಾಲರಾದ ಸತೀಶ್, ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಮುರಳಿ ಕೃಷ್ಣ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಜರೀನಾ ಖಾನಮ್, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ಪೋಷಕರು ವಿದ್ಯಾರ್ಥಿಗಳ ಸಾಧನೆಗೆ ಅಭಿನಂದನೆ ತಿಳಿಸಿದರು.