ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ೨೦ರಂದು ಶನಿವಾರ ಪಟ್ಟಣದ ಅಖಿಲ ನಾಮಧಾರಿ ಗೌಡ ಸಮುದಾಯ ಭವನದಲ್ಲಿ ತಾಲೂಕು ಮಟ್ಟದ ಜನ ಸ್ಪಂದನ ಸಭೆ ನಡೆಯಲಿದೆ ಎಂದು ತಹಸೀಲ್ದಾರ್ ಸಿ. ಎಸ್. ಪೂರ್ಣಿಮಾ ಹೇಳಿದರು.
ಶಾಸಕ ಡಿ. ರವಿಶಂಕರ್ ಅವರ ಅಧ್ಯಕ್ಷತೆ ಮತ್ತು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಅವರ ಉಪಸ್ಥಿತಿಯಲ್ಲಿ ನಡೆಯುವ ಜನ ಸ್ಪಂದನಾ ಸಭೆಗೆ ಜಿ.ಪಂ. ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಬಾಗವಹಿಸು ರು ಎಂದು ತಾಲೂಕು ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಅಂದು ಬೆಳಿಗ್ಗೆ ೧೦ ಗಂಟೆಗೆ ಆರಂಭವಾಗಲಿರುವ ಜನ ಸಂಪರ್ಕ ಸಭೆಯಲ್ಲಿ ಸಾಲಿಗ್ರಾಮ ಮತ್ತು ಕೆ. ಆರ್. ನಗರ ತಾಲೂಕಿನ ವ್ಯಾಪ್ತಿಯ ನಾಗರೀಕರ ಸಾರ್ವಜನಿಕ ಅಹವಾಲು ಆಲಿಸಲಿದ್ದು ಸರ್ವರೂ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಜನ ಸಂಪರ್ಕ ಸಭೆಯಲ್ಲಿ ನಾಗರಿಕರಿಂದ ಬರುವ ಅರ್ಜಿಗಳು ಮತ್ತು ಮನವಿ ಪತ್ರಗಳನ್ನು ಸ್ವೀಕರಿಸಿ ಅವುಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಿದ್ದು ಈ ವಿಚಾರವನ್ನು ಗ್ರಾಮ ಪಂಚಾಯಿತಿಗಳ ಮೂಲಕ ವ್ಯಾಪಕವಾಗಿ ಪ್ರಚಾರ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಜೂನ್, ೨೯ ರಂದು ನಡೆಯಬೇಕಿದ್ದ ಜನ ಸಂಪರ್ಕ ಸಭೆಯನ್ನು ಕಾರಣಗಳಿಂದ ಮುಂದೂಡಲಾಗಿತ್ತು ಹಾಗಾಗಿ ಈಗ ಮತ್ತೆ ಸಭೆ ನಡೆಸಲಾಗುತ್ತಿದ್ದು ಕಂದಾಯ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಜನ ಸಂಪರ್ಕ ಸಭೆಯ ಅನುಕೂಲ ಪಡೆದುಕೊಳ್ಳುವಂತೆ ಮನವರಿಕೆ ಮಾಡಬೇಕೆಂದರು.
ಇದರ ಜತೆಗೆ ನಿರಂತರವಾಗಿ ಮಳೆ ಬೀಳುತ್ತಿರುವುದರಿಂದ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಪರಿಹಾರ ಕಾರ್ಯಗಳ ಕುರಿತು ಜಿಲ್ಲಾಧಿಕಾರಿ ಕಚೇರಿಯಿಂದ ನಮಗೆ ಆದೇಶ ಬಂದಿದ್ದು ಜನರು ಈ ಸಮಯದಲ್ಲಿ ನಮಗೆ ಸಹಕಾರ ನೀಡಬೇಕೆಂದರು. ಅತಿ ಹೆಚ್ಚು ಮಳೆ ಬೀಳುವ ಸಮಯದಲ್ಲಿ ರೈತರು ನದಿ ಪಾತ್ರಗಳಿಗೆ ಹೆಚ್ಚಾಗಿ ಹೋಗದೆ ಮುನ್ನೆಚ್ಚರಿ ವಹಿಸಬೇಕೆಂದ ತಹಸೀಲ್ದಾರರು ಇದರೊಂದಿಗೆ ತಾಲೂಕು ವ್ಯಾಪ್ತಿಯಲ್ಲಿ ಮಳೆ ಹಾನಿಯಿಂದ ಮನೆ ಬಿದ್ದ ೨೪ ಗಂಟೆಯೋಗೆ ವರದಿ ತರಿಸಿಕೊಂಡು ಪರಿಹಾರ ನೀಡಲು ನಾವು ಸಿದ್ಧರಿದ್ದೇವೆ ಎಂದರು.
ಸರ್ಕಾರದ ಆದೇಶದ ಮೇರೆಗೆ ಈಗಾಗಲೇ ನಾವು ಪ್ರತಿ ಗ್ರಾಮದಲ್ಲಿಯೂ ಕಾಳಜಿ ಕೇಂದ್ರಗಳನ್ನು ಗುರುತು ಮಾಡಿದ್ದು ಇದರೊಂದಿಗೆ ಮಳೆ ಹಾನಿಯಿಂದ ತೊಂದರೆಗೆ ಒಳಗಾದವರ ರಕ್ಷಣೆಗೆ ಕ್ರಮ ಕೈಗೊಳ್ಳಲು ಸನ್ನದ್ದರಾಗಿದ್ದೇವೆಂದರು.
ಕೆ. ಆರ್. ನಗರ ಮತ್ತು ಸಾಲಿಗ್ರಾಮ ತಾಲೂಕುಗಳ ವ್ಯಾಪ್ತಿಯಲ್ಲಿ ಅಪಾಯದ ಅಂಚಿನಲ್ಲಿರುವ ಮನೆಗಳು ಶಾಲೆಗಳು ಮತ್ತು ಅಂಗನವಾಡಿ ಕೇಂದ್ರಗಳನ್ನು ಗುರುತಿಸಿ ಪಟ್ಟಿ ಮಾಡಿ ನಮಗೆ ವರದಿ ನೀಡಿದರೆ ಅದಕ್ಕೆ ಪರ್ಯಾಯ ವ್ಯವಸ್ಥೆ ಮಾಡುವುದಾಗಿಅಧಿಕಾರಗಳಿಗೆ ಸೂಚನೆ ನೀಡಿದ್ದೇನೆ ಎಂದರು.
ಗ್ರೇಡ್ – ೨ ತಹಸೀಲ್ದಾರ್ ಚಂದ್ರಶೇಖರ್, ಶಿರಸ್ತೇದಾರ್ ಅಸ್ಲಾಂಬಾಷಾ ಸುದ್ದಿಗೋಷ್ಠಿಯಲ್ಲಿ ಇದ್ದರು