ಉಡುಪಿ: ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಶುಕ್ರವಾರ ಮೊದಲ ಬಾರಿಗೆ ಉಡುಪಿ ಜಿಲ್ಲೆಯ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆಯಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಕೊಲ್ಲೂರಿಗೆ ಆಗಮಿಸಲಿರುವ ಅವರು ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆಯಲಿದ್ದಾರೆ. ಬಳಿಕ ಸಂಜೆ ಮಂಗಳೂರು ವಿಮಾನ ನಿಲ್ದಾಣದ ಮೂಲಕ ಚೆನ್ನೈಗೆ ತೆರಳಲಿದ್ದಾರೆ.
ಕೊಲ್ಲೂರು ಮೂಕಾಂಬಿಕೆ ದೇವಸ್ಥಾನವು ಕರ್ನಾಟಕ ಮಾತ್ರವಲ್ಲದೆ ತಮಿಳುನಾಡಿನ ರಾಜಕೀಯ ನಾಯಕರು ಹಾಗೂ ಗಣ್ಯರ ಭಕ್ತಿ ಕೇಂದ್ರವಾಗಿಯೂ ಹೆಸರುವಾಸಿಯಾಗಿದೆ. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಜಿ. ರಾಮಚಂದ್ರನ್ (ಎಂಜಿಆರ್) ಅವರು ಅಧಿಕಾರದಲ್ಲಿದ್ದಾಗ ದೇವಿಗೆ ಚಿನ್ನದ ಖಡ್ಗವನ್ನು ಕಾಣಿಕೆಯಾಗಿ ಸಮರ್ಪಿಸಿದ್ದರು. ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಕೂಡ ರಾಜಕೀಯ ಏರುಪೇರುಗಳ ಸಂದರ್ಭದಲ್ಲಿ ಮೂಕಾಂಬಿಕೆ ದೇವಿಯ ಮೊರೆ ಹೋಗಿದ್ದು, 2004ರಲ್ಲಿ ವಿಶೇಷ ಚಂಡಿಕಾಯಾಗ ನಡೆಸಿದ್ದರು.
ಖ್ಯಾತ ಸಂಗೀತ ನಿರ್ದೇಶಕ ಇಳೆಯರಾಜ ಸೇರಿದಂತೆ ಅನೇಕ ಕಲಾವಿದರು ಮತ್ತು ಗಣ್ಯರು ಈ ಕ್ಷೇತ್ರದ ಮೇಲೆ ಅಪಾರ ಭಕ್ತಿ ಹೊಂದಿದ್ದಾರೆ. ಇದೀಗ ಮುಖ್ಯಮಂತ್ರಿ ವಿಜಯ್ ಅವರ ಭೇಟಿ ರಾಜಕೀಯ ಹಾಗೂ ಧಾರ್ಮಿಕ ವಲಯಗಳಲ್ಲಿ ಕುತೂಹಲ ಮೂಡಿಸಿದೆ.
ಉಡುಪಿ ಜಿಲ್ಲೆಯಲ್ಲಿರುವ ಕೊಲ್ಲೂರು ಕ್ಷೇತ್ರವು ಪರಶುರಾಮನ ಸೃಷ್ಟಿಯ ಏಳು ಮುಕ್ತಿ ಕ್ಷೇತ್ರಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಆದಿ ಶಂಕರಾಚಾರ್ಯರಿಂದ ಪ್ರತಿಷ್ಠಾಪಿತವಾದ ಈ ಶಕ್ತಿಪೀಠದಲ್ಲಿ ಮಹಾಕಾಳಿ, ಮಹಾಲಕ್ಷ್ಮಿ ಹಾಗೂ ಮಹಾಸರಸ್ವತಿ ದೇವಿಯರ ಐಕ್ಯರೂಪವಾದ ಮೂಕಾಂಬಿಕೆಯನ್ನು ಆರಾಧಿಸಲಾಗುತ್ತದೆ. ದೇವಿಯ ದರ್ಶನ ಪಡೆದರೆ ಜೀವನದಲ್ಲಿ ಏಳಿಗೆ ಹಾಗೂ ಯಶಸ್ಸು ದೊರೆಯುತ್ತದೆ ಎಂಬ ನಂಬಿಕೆ ಭಕ್ತರಲ್ಲಿ ಇದೆ.



