ನಟ ದಳಪತಿ ವಿಜಯ್ ರಾಜಕೀಯ ಪಯಣ ಆರಂಭಗೊಂಡಿದೆ. ಇಂದು ಪಕ್ಷದ ಚಿಹ್ನೆಯನ್ನು ಬಿಡುಗಡೆ ಮಾಡಿದ್ದಾರೆ. ತಮಿಳಗ ವೆಟ್ರಿ ಕಳಗಂ ಎಂಬ ರಾಜಕೀಯ ಪಕ್ಷವನ್ನು ಫೆಬ್ರವರಿಯಲ್ಲಿ ಪ್ರಾರಂಭಿಸಿದ್ದರು. ವಿಜಯ್ ಅವರ ಪಕ್ಷವು 2026ರಲ್ಲಿ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದು ಹೇಳಲಾಗುತ್ತಿದೆ. ಇದೀಗ ದಳಪತಿ ವಿಜಯ್ ಗುರುವಾರ ತಮ್ಮ ರಾಜಕೀಯ ಪಕ್ಷದ ಬಾವುಟ ಹಾಗೂ ಚಿಹ್ನೆಯನ್ನು ಬಿಡುಗಡೆ ಮಾಡಿದ್ದಾರೆ.
2026ರಲ್ಲಿ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಈ ವರ್ಷದ ಫೆಬ್ರವರಿಯಲ್ಲಿ ನಟ ದಳಪತಿ ವಿಜಯ್ ಅವರು ರಾಜಕೀಯ ಪಕ್ಷವನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದರು. ಇದರೊಂದಿಗೆ 2026ರಲ್ಲಿ ನಡೆಯಲಿರುವ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿಯೂ ವಿಜಯ್ ಹೇಳಿದ್ದರು. ಈ ವರ್ಷ ನಡೆದ ಲೋಕಸಭೆ ಚುನಾವಣೆಯಲ್ಲಿ ದಳಪತಿ ವಿಜಯ್ ಯಾವುದೇ ಮೈತ್ರಿ ಅಥವಾ ಪಕ್ಷವನ್ನು ಬೆಂಬಲಿಸಲಿಲ್ಲ.
ಧ್ವಜ ಬಿಡುಗಡೆ ಮಾಡಿದ ಬಳಿಕ ಮಾತನಾಡಿದ ಅವರು, ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ, ತಮಿಳುನಾಡಿನ ಮಣ್ಣಿನಿಂದ ನಮ್ಮ ಜನರ ಹಕ್ಕುಗಳಿಗಾಗಿ ಶೌರ್ಯದಿಂದ ಹೋರಾಡಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಅಸಂಖ್ಯಾತ ಸೈನಿಕರ ತ್ಯಾಗವನ್ನು ನಾನು ಯಾವಾಗಲೂ ಸ್ಮರಿಸುತ್ತೇನೆ. ತಮಿಳು ಭಾಷೆಯನ್ನು ರಕ್ಷಿಸಲು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಹುತಾತ್ಮರನ್ನು ಸ್ಮರಣೆ ಮಾಡುತ್ತ ಅವರ ದಾರಿಯಲ್ಲಿ ನಡೆಯುತ್ತೇನೆ. ಭಾರತದ ಸಂವಿಧಾನ ಮತ್ತು ಭಾರತದ ಸಾರ್ವಭೌಮತ್ವದ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ ಎಂದು ಅವರು ಹೇಳಿದರು.
ಸಹೋದರತ್ವ, ಸಮಾನತೆ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಸಾಮಾಜಿಕ ನ್ಯಾಯದ ಹಾದಿಯಲ್ಲಿ ನಡೆಯುತ್ತ ಜನರ ಸೇವೆ ಮಾಡುತ್ತೇನೆ ಎಂದು ಭರವಸೆ ನೀಡುತ್ತೇನೆ ಎಂದು ವಿಜಯ್ ಹೇಳಿದರು.