ಚನ್ನಪಟ್ಟಣ: ಕೆಆರ್‌ಎಸ್ ಜಲಾಶಯದಲ್ಲಿ ನೀರಿಲ್ಲದೆ ನಮಗೆ ಕುಡಿಯಲು ನೀರಿಲ್ಲ ಜಾನುವಾರುಗಳು, ಪ್ರಾಣಿ ಪಕ್ಷಿಗಳು ನೀರಿಲ್ಲದೆ ಸಾಯುತ್ತಿರುವ ಈ ಸಂದರ್ಭದಲ್ಲೂ ತಮಿಳುನಾಡಿಗೆ ೨೫೦೦ ಕ್ಯೂಸೆಕ್ಸ್ ನೀರನ್ನು ಬಿಡುವಂತೆ ಆದೇಶ ಮಾಡಿರುವ ಕಾವೇರಿ ಪ್ರಾಧಿಕಾರಕ್ಕೆ ಹಾಗೂ ನೀರು ಕೇಳಿರುವ ತಮಿಳುನಾಡು ಸರ್ಕಾರಕ್ಕೆ ನಾಚಿಕೆ ಆಗಬೇಕು ಎಂದು ನಿವೃತ್ತ ಪ್ರಾಂಶುಪಾಲರಾದ ನಿಂಗೇಗೌಡ (ಎನ್‌ಜಿ) ಅವರು ಆಕ್ರೋಶ ವ್ಯಕ್ತಪಡಿಸಿದರು.
ಕಾವೇರಿ ನದಿ ನೀರಿನ ಹಂಚಿಕೆಯಲ್ಲಿ ಸಂಕಷ್ಟ ಸೂತ್ರ ರಚಿಸುವ ಜೊತೆಗೆ ಮೇಕೆದಾಟು ಯೋಜನೆಗೆ ಅಡಿಗಲ್ಲು ಹಾಕುವಂತೆ ಆಗ್ರಹಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷರಾದ ರಮೇಶ್‌ಗೌಡರ ನೇತೃತ್ವದಲ್ಲಿ ೨೦೨೩ರ ಅಕ್ಟೋಬರ್ ೫ ರಿಂದ ನಿರಂತರವಾಗಿ ಹೋರಾಟ ಮಾಡುತ್ತಿದ್ದು ಬುಧವಾರ ನಡೆದ ೨೧೦ ನೇ ದಿನದ ಹೋರಾಟದಲ್ಲಿ ಮಾತನಾಡಿದ ಅವರು ಮಳೆಯಿಲ್ಲದೆ ಬರದಿಂಧ ಬಿಸಿಲಿನ ತಾಪ ಹೆಚ್ಚಾಗಿ ಅಂತರ್ಜಲ ಕುಸಿದು ಕೆರೆಕಟ್ಟೆಗಳು ಬರಿದಾಗಿ ಪ್ರಾಣಿಪಕ್ಷಿಗಳಿಗೆ ನೀರಿಲ್ಲದಂತಾಗಿದೆ. ಕಾವೇರಿ ಕೊಳ್ಳದ ೫೦೦ ಹಳ್ಳಿಗಳಿಗೆ ಟ್ಯಾಂಕರ್‌ಗಳ ಮೂಲಕ ನೀರನ್ನು ನೀಡಲಾಗುತ್ತಿದೆ. ಪಟ್ಟಣ ಸೇರಿದಂತೆ ಬೆಂಗಳೂರಿಗೆ ೧೨ ದಿನಗಳಿಗೆ ಒಮ್ಮೆ ಕುಡಿಯುವ ನೀರನ್ನು ನೀಡಲಾಗುತ್ತಿದೆ. ಇಷ್ಟೆಲ್ಲಾ ವರದಿ ಕಣ್ಣ ಮುಂದೆ ಇದ್ದರೂ ಸಹ ಕಾವೇರಿ ನದಿ ನೀರು ಹಂಚಿಕೆ ಪ್ರಾಧಿಕಾರವು ತಮಿಳುನಾಡಿಗೆ ಮತ್ತೆ ೨೫೦೦ ಕ್ಯೂಸೆಕ್ಸ್ ನೀರನ್ನು ಬಿಡಲು ಆದೇಶ ಮಾಡಿರುವುದು ನಾಚಿಕೆ ಗೇಡಿನ ಸಂಗತಿ, ಜೊತೆಗೆ ನೆರೆ ರಾಜ್ಯ ನೀರಿಲ್ಲದೆ ಸಂಕಷ್ಟ ಎದುರಿಸಿದ್ದರೂ ಮತ್ತೆ ನೀರನ್ನು ಕೇಳುವ ತಮಿಳುನಾಡು ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲವಾಗಿದೆ ಎಂದು ಆಕ್ರೋಸ ವ್ಯಕ್ತಪಡಿಸಿದರು.
ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕೆಆರ್‌ಎಸ್ ಡ್ಯಾಂ ನಲ್ಲಿ ನೀರಿಲ್ಲದೆ ಇದ್ದರೂ ನೀರು ಕೇಳುವ ತಮಿಳುನಾಡು ಸರ್ಕಾರಕ್ಕೆ ಹಾಗೂ ಪ್ರಾಧಿಕಾರಕ್ಕೆ ತಕ್ಕ ಉತ್ತರ ನೀಡಬೇಕಾದ ನಮ್ಮ ಸರ್ಕಾರದ ಜನಪ್ರತಿನಿಧಿಗಳು ಕಿವಿ, ಭಾಯಿ, ಕಣ್ಣು ಮುಚ್ಚಿಕೊಂಡಿದ್ದಾರೆ ಎಂದು ನಿಂಗೇಗೌಡರು ಕಿಡಿಕಾರಿದರು. ಕಕಜ ವೇದಿಕೆ ಜಿಲ್ಲಾಧ್ಯಕ್ಷ ಬೇವೂರು ಯೋಗೀಶ್‌ಗೌಡ ಮಾತನಾಡಿ, ತಮಿಳುನಾಡಿನ ಮೆಟ್ಟೂರು ಡ್ಯಾಂನಲ್ಲಿ ಸಾಕಷ್ಟು ನೀರಿದೆ. ಆದರೆ ನಮಗೆ ನೀರಿಲ್ಲದೆ ಪ್ರಾಣಿ, ಪಕ್ಷಿಗಳು, ಜಲಚರ ಪ್ರಾಣಿ, ಪಕ್ಷಿಗಳು ನೀರಿಲ್ಲದೆ ಸಾಯುತ್ತಿದ್ದರೂ ಮೂರನೇ ಬೆಳೆ ತೆಗೆದಿರುವ ತಮಿಳುನಾಡಿಗೆ ಮತ್ತೊಮ್ಮೆ ನೀರು ಬಿಡುವ ಆದೇಶ ಮಾಡಿರುವ ಕಾವೇರಿ ಬೋರ್ಡ್‌ನ ಕ್ರಮ ಖಂಡನೀಯವಾಗಿದೆ. ನಮ್ಮ ರಾಜ್ಯದ ರಾಜಕಾರಣಿಗಳು ತಮ್ಮ ವಯಕ್ತಿಕ ವಿಚಾರದ ಬಗ್ಗೆ ಆರೋಪ-ಪ್ರತ್ಯಾರೋಪ ಮಾಡಿ ಪೆನ್‌ಡ್ರೈವ್, ಸಿಡಿ ಪ್ರಕರಣಗಳಲ್ಲಿ ಪೈಪೋಟಿ ಮಾಡುವುದನ್ನು ಬಿಟ್ಟು ರಾಜ್ಯದ ಜನರ ಹಿತ ಕಾಯುವ ನಿಟ್ಟಿನಲ್ಲಿ ನಮ್ಮ ರಾಜ್ಯದ ನೀರಿನ ಸಮಸ್ಯೆ ಬಗ್ಗೆ ಸಮಗ್ರ ವರದಿಯನ್ನು ಪ್ರಾಧಿಕಾರ ಮುಂದಿಡಲು ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದರು.
ಸಂದರ್ಭದಲ್ಲಿ ಚಿಕ್ಕೇನಹಳ್ಳಿ ಸಿದ್ದಪ್ಪಾಜಿ, ರಾಜು, ಜಗದಾಪುರ ಕೃಷ್ಣೇಗೌಡ, ಪುಟ್ಟಲಿಂಗಯ್ಯ, ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಕರ್ಣ, ನಿಂಗೇಶ್, ಮೆಣಸಿಗನಹಳ್ಳಿ ರಾಮಕೃಷ್ಣಪ್ಪ, ನಾಗರವಾರದ ಗಿರೀಗೌಡ, ದಿನೇಶ್, ಶ್ಯಾಮ್, ಇತರರು ಇದ್ದರು.