ಗುಂಡ್ಲುಪೇಟೆ: ರಜೆಯ ಕಾರಣದಿಂದಾಗಿ ತಮಿಳುನಾಡಿನ ಊಟಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಹೋಗುತ್ತಿರುವುದರಿಂದ ರಾಷ್ಟ್ರೀಯ ಹೆದ್ದಾರಿ-೬೭ರಲ್ಲಿ ಬರುವ ಮೇಲುಕಾಮನಹಳ್ಳಿ ಚೆಕ್ ಪೋಸ್ಟ್ ನಲ್ಲಿ ಎರಡು ಕಿಲೋ ಮೀಟರ್ ವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಇದರಿಂದ ಸವಾರರಿಗೆ ಕಿರಿಕಿರಿ ಉಂಟಾಯಿತು.
ತಾಲ್ಲೂಕಿನ ಮೇಲುಕಾಮನಹಳ್ಳಿ ಚೆಕ್ ಪೋಸ್ಟ್‌ನಲ್ಲಿ ಅರಣ್ಯ ಇಲಾಖೆಯ ವತಿಯಿಂದ ಹಸಿರು ಸುಂಕ ನೆಪದಲ್ಲಿ ಹಣ ವಸೂಲಿ ಮಾಡುತ್ತಿರುವುದರಿಂದ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಇದರ ಪರಿಣಾಮ ಸಂಚಾರ ಅಸ್ತವ್ಯಸ್ತವಾಯಿತು. ಈ ಕಾರಣದಿಂದ ಸ್ಥಳೀಯ ವಾಹನಗಳ ಸವಾರರಿಗೂ ಮುಟ್ಟಿತ್ತು. ಸೋಮವಾರದವರೆಗೆ ಕ್ರಿಶ್ಚಿಯನ್ ಶಾಲೆಯ ಮಕ್ಕಳಿಗೆ ವಾರದವರೆಗೆ ರಜೆಯ ಕಾರಣದಿಂದ ರಾಜ್ಯ ಸೇರಿದಂತೆ ವಿವಿಧ ಕಡೆಗಳಿಂದ ಪ್ರವಾಸಿಗರು ನೀಲಗಿರಿ ಜಿಲ್ಲೆಯ ಪ್ರವಾಸಿ ತಾಣಗಳನ್ನು ನೋಡುವುದಕ್ಕೆ ತೆರಳುವುದರಿಂದ ಸಾವಿರಾರು ವಾಹನಗಳು ಚೆಕ್ ಪೋಸ್ಟ್ ನಲ್ಲಿ ಹಾದು ಹೋದವು.
ಟಿಕೆಟ್ ನೀಡುವ ಸಿಬ್ಬಂದಿಗಳು ಇಬ್ಬರು ಮಾತ್ರ ಇದ್ದ ಕಾರಣ ವಾಹನಗಳು ಸಾಲುಗಟ್ಟಿದ್ದವು. ಅರಣ್ಯ ಇಲಾಖೆ ಹಸಿರು ಸುಂಕ ವಸೂಲಿ ಮಾಡಬೇಕಾದರೆ ಸಿಬ್ಬಂದಿಗಳನ್ನು ಹೆಚ್ಚು ಮಾಡಬೇಕು ಇಲ್ಲವೇ ಫಾಸ್ಟಾಗ್ ವ್ಯವಸ್ಥೆ ಮಾಡಬೇಕು. ಇಲ್ಲವಾದಲ್ಲಿ ಸಾರ್ವಜನಿಕರ ಸಮಯ ವ್ಯರ್ಥವಾಗುತ್ತದೆ ಎಂದು ಕರವೇ ಪವ್ರವೀಣ್ ಶೆಟ್ಟಿ ಬಣದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಿಯಾಜ್ ಪಾಷಾ ಅಸಮಧಾನ ವ್ಯಕ್ತಪಡಿಸಿದರು.